ದುಲೀಪ್ ಟ್ರೋಫಿ ಫೈನಲ್: ಸೌತ್ ಝೋನ್​ಗೆ ಸೋಲು ಕಟ್ಟಿಟ್ಟ ಬುತ್ತಿ!

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ ಮುಕ್ತಾಯದ ವೇಳೆಗೆ ಈಸ್ಟ್ ಝೋನ್ ತಂಡವು 372 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಈ ಬೃಹತ್ ರನ್ ಮುನ್ನಡೆಯ ಬಲದಿಂದ ಇಶಾನ್ ಕಿಶನ್ ನೇತೃತ್ವದ ಈಸ್ಟ್ ಝೋನ್ ತಂಡವು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಪ್ರಶಸ್ತಿ ಗೆಲುವಿನತ್ತ ಹೆಜ್ಜೆಯನ್ನಿಟ್ಟಿದೆ.

ದುಲೀಪ್ ಟ್ರೋಫಿ ಫೈನಲ್: ಸೌತ್ ಝೋನ್​ಗೆ ಸೋಲು ಕಟ್ಟಿಟ್ಟ ಬುತ್ತಿ!
ಸೌತ್ ಝೋನ್
Image Credit source: BCCI

Updated on: Sep 10, 2026 | 8:40 AM

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌತ್ ಝೋನ್ ತಂಡಕ್ಕೆ ಸೋಲು ಬಹುತೇಕ ಕಟ್ಟಿಟ್ಟ ಬುತ್ತಿಯಾಗಿದೆ. ಏಕೆಂದರೆ ಈ ಪಂದ್ಯದ ಮೇಲೆ ಈಸ್ಟ್ ಝೋನ್ ಸಂಪೂರ್ಣ ಹಿಡಿತ ಸಾಧಿಸಿದ್ದು, ಇಶಾನ್ ಕಿಶನ್ ಪಡೆ ಭಾರಿ ರನ್ ಮುನ್ನಡೆಯೊಂದಿಗೆ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ಒಂದು ವೇಳೆ ಡ್ರಾದಲ್ಲಿ ಅಂತ್ಯಗೊಂಡರೂ, ಪ್ರಥಮ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆ ಸಾಧಿಸಿರುವ ಈಸ್ಟ್ ಝೋನ್ ತಂಡವೇ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ. ಹೀಗಾಗಿ ಪಂದ್ಯ ಡ್ರಾ ಆದರೂ ಅದು ಸೌತ್ ಝೋನ್ ತಂಡದ ಪಾಲಿಗೆ ಅದು ಸೋಲಿಗೇ ಸಮಾನವಾಗಿರಲಿದೆ.

ಈಸ್ಟ್ ಝೋನ್ ಬೃಹತ್ ಮೊತ್ತ:

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಈಸ್ಟ್ ಝೋನ್, ರನ್‌ಗಳ ಮಳೆಯನ್ನೇ ಹರಿಸಿತು. ನಾಯಕ ಇಶಾನ್ ಕಿಶನ್ ಅವರ 270 ರನ್‌ಗಳ ಸ್ಫೋಟಕ ದ್ವಿಶತಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಅವರ ಅದ್ಭುತ ಶತಕದ (101 ರನ್) ನೆರವಿನಿಂದ ಈಸ್ಟ್ ಝೋನ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 708 ರನ್‌ಗಳನ್ನು ಕಲೆಹಾಕಿತು.

ಸೌತ್ ಝೋನ್​ಗೆ ಹಿನ್ನಡೆ:

ಈ ಬೃಹತ್ ಗುರಿ ಬೆನ್ನಟ್ಟಿದ ಸೌತ್ ಝೋನ್ ತಂಡವು ಈಸ್ಟ್ ಝೋನ್ ವೇಗಿಗಳ ದಾಳಿಗೆ ತತ್ತರಿಸಿತು. ಆದರೆ, ನಾಯಕ ತಿಲಕ್ ವರ್ಮಾ (99 ರನ್, 211 ಎಸೆತ) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು. ದುರದೃಷ್ಟವಶಾತ್, ಕೇವಲ 1 ರನ್‌ನಿಂದ ಶತಕ ವಂಚಿತರಾಗಿ ಅವರು ಔಟಾದರು. ದೇವದತ್ ಪಡಿಕ್ಕಲ್ (62 ರನ್) ಹೊರತುಪಡಿಸಿ ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ಸೌತ್ ಝೋನ್ ಮೊದಲ ಇನಿಂಗ್ಸ್‌ನಲ್ಲಿ 336 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಸೌತ್ ಝೋನ್ ತಂಡವು ಮೊದಲ ಇನಿಂಗ್ಸ್​ನಲ್ಲಿ 372 ರನ್​ಗಳ ಹಿನ್ನಡೆ ಅನುಭವಿಸಿತು.

ಫಾಲೋ-ಆನ್ ನೀಡದ ಈಸ್ಟ್ ಝೋನ್:

ಮೊದಲ ಇನಿಂಗ್ಸ್​ನಲ್ಲಿ 372 ರನ್​ಗಳ ಬೃಹತ್ ಮುನ್ನಡೆ ಪಡೆದ ಈಸ್ಟ್ ಝೋನ್ ತಂಡವು ಸೌತ್ ಝೋನ್‌ಗೆ ಫಾಲೋ-ಆನ್ ನೀಡದೆ ದ್ವಿತೀಯ ಇನಿಂಗ್ಸ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಎರಡನೇ ಇನಿಂಗ್ಸ್‌ನಲ್ಲೂ ಅಬ್ಬರಿಸಿದ ನಾಯಕ ಇಶಾನ್ ಕಿಶನ್ 80 ರನ್ ಚಚ್ಚಿದರು. ಅದರಂತೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಈಸ್ಟ್ ಝೋನ್ ತಂಡ 5 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದು, ಒಟ್ಟು ಮುನ್ನಡೆಯನ್ನು 584 ರನ್‌ಗಳಿಗೆ ವಿಸ್ತರಿಸಿಕೊಂಡಿದೆ.

ಸೋಲು ಯಾಕೆ ಕಟ್ಟಿಟ್ಟ ಬುತ್ತಿ:

584 ರನ್‌ಗಳ ಬೃಹತ್ ಮುನ್ನಡೆ ಹೊಂದಿರುವ ಈಸ್ಟ್ ಝೋನ್ ತಂಡವು ಐದನೇ ದಿನದಾಟದ ಮೊದಲ ಸೆಷನ್‌ನಲ್ಲೂ ಬ್ಯಾಟಿಂಗ್ ಮುಂದುವರಿಸುವ ಮುನ್ಸೂಚನೆ ನೀಡಿದೆ. ಒಂದು ವೇಳೆ ಅವರು ಬ್ಯಾಟಿಂಗ್ ಮುಂದುವರಿಸಿದರೆ ಒಟ್ಟಾರೆ ಮುನ್ನಡೆ 650 ರನ್‌ಗಳ ಗಡಿ ದಾಟುವುದು ಖಚಿತ.

ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಇದುವರೆಗೆ ಯಾವುದೇ ತಂಡವು ನಾಲ್ಕನೇ ಇನಿಂಗ್ಸ್‌ನಲ್ಲಿ 650ಕ್ಕೂ ಹೆಚ್ಚು ರನ್‌ಗಳನ್ನು ಬೆನ್ನಟ್ಟಿ ಗೆದ್ದ ಉದಾಹರಣೆಯಿಲ್ಲ. ಹೀಗಾಗಿ ಸೌತ್ ಝೋನ್ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.

  • ಕೊನೆಯ ದಿನದಾಟದಲ್ಲಿ ದಾಖಲಾದ ಗರಿಷ್ಠ ರನ್: ಟೆಸ್ಟ್ ಪಂದ್ಯವೊಂದರ 5ನೇ ದಿನದಾಟದಲ್ಲಿ ದಾಖಲಾದ ಅತ್ಯಧಿಕ ರನ್‌ಗಳ ದಾಖಲೆ 459 ರನ್. ಇದು 2001ರಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಕೊನೆಯ ದಿನದಂದು ಮೂಡಿಬಂದಿತ್ತು.
  • ಕೊನೆಯ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ ಗರಿಷ್ಠ ಸ್ಕೋರ್: 1939ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ 4ನೇ ಇನ್ನಿಂಗ್ಸ್‌ನಲ್ಲಿ ಗಳಿಸಿದ 654/5 ರನ್. ಆದರೆ ಇದು ಸುದೀರ್ಘ ದಿನಗಳ ಕಾಲ ನಡೆದ ಪಂದ್ಯವಾಗಿದ್ದು, ಕೊನೆಯ ದಿನದಾಟದ ವೇಳೆ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು.
  • ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಚೇಸ್ ದಾಖಲೆ: ಈ ದಾಖಲೆ ಭಾರತದ ವೆಸ್ಟ್ ಝೋನ್ ತಂಡದ ಹೆಸರಿನಲ್ಲಿದೆ. 2010ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌತ್ ಝೋನ್ ವಿರುದ್ಧ ವೆಸ್ಟ್ ಝೋನ್ ತಂಡವು 541/7 ರನ್ ಗಳಿಸುವ ಮೂಲಕ 536 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಜಯ ಸಾಧಿಸಿತ್ತು.

ಇದನ್ನೂ ಓದಿ: ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?

ಇದೀಗ 584 ರನ್‌ಗಳ ಮುನ್ನಡೆ ಕಾಯ್ದುಕೊಂಡಿರುವ ಈಸ್ಟ್ ಝೋನ್ ತಂಡವು ಸೌತ್ ಝೋನ್ ತಂಡಕ್ಕೆ 600ಕ್ಕೂ ಹೆಚ್ಚು ರನ್‌ಗಳ ಬೃಹತ್ ಗುರಿ ನೀಡುವುದು ಬಹುತೇಕ ಖಚಿತವಾಗಿದೆ. ನಾಲ್ಕನೇ ಇನಿಂಗ್ಸ್‌ನಲ್ಲಿ 600ಕ್ಕೂ ಅಧಿಕ ರನ್‌ಗಳನ್ನು ಚೇಸ್ ಮಾಡಬೇಕಿದ್ದರೆ ಸೌತ್ ಝೋನ್ ತಂಡವು ಟಿ20 ಶೈಲಿಯಲ್ಲಿ ಪ್ರತಿ ಓವರ್‌ಗೆ ಕನಿಷ್ಠ 6ರ ರನ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಆದರೆ ದಿನದ ಆಟ ಮುಗಿಯುತ್ತಾ ಬಂದಿರುವಾಗ, ಸ್ಪಿನ್ನರ್‌ಗಳಿಗೆ ನೆರವಾಗುವ ಪಿಚ್‌ನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಇದು ಅಸಾಧ್ಯದ ಮಾತು. ಅದೂ ಅಲ್ಲದೆ, ಮೊದಲ ಇನಿಂಗ್ಸ್‌ನಲ್ಲಿ ಕೇವಲ 336 ರನ್‌ಗಳಿಗೆ ಮಂಡಿಯೂರಿರುವ ಸೌತ್ ಝೋನ್ ತಂಡದಿಂದ ಇಂತಹದೊಂದು ಐತಿಹಾಸಿಕ ಪವಾಡವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಸೌತ್ ಝೋನ್ ತಂಡಕ್ಕೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಹೇಳಬಹುದು.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us