ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಈಸ್ಟ್ ಝೋನ್ ಹಾಗೂ ಸೌತ್ ಝೋನ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಸ್ಟ್ ಝೋನ್ ತಂಡ ಮೊದಲ ಇನಿಂಗ್ಸ್​ನಲ್ಲಿ 708 ರನ್ ಕಲೆಹಾಕಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಸೌತ್ ಝೋನ್ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 242 ರನ್​ ಕಲೆಹಾಕಿದೆ.

ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?
ದುಲೀಪ್ ಟ್ರೋಫಿ 2026
Image Credit source: TNCA

Updated on: Sep 09, 2026 | 9:03 AM

ಭಾರತೀಯ ದೇಶಿ ಕ್ರಿಕೆಟ್‌ನ ಪ್ರತಿಷ್ಠಿತ ಟೂರ್ನಿ ದುಲೀಪ್ ಟ್ರೋಫಿ 2026ರ ಫೈನಲ್ ಪಂದ್ಯವು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ (ಚೆಪಾಕ್) ರೋಚಕ ಹಂತ ತಲುಪಿದೆ. ಈಸ್ಟ್ ಝೋನ್ ಹಾಗೂ ಸೌತ್ ಝೋನ್ ನಡುವಿನ ಈ ಮ್ಯಾಚ್  ‘ಡ್ರಾ’ ನತ್ತ ಮುಖ ಮಾಡುವ ಸಾಧ್ಯತೆಯಿದೆ. ಈ ಪಂದ್ಯವು ಡ್ರಾ ಆದರೆ ಯಾರಿಗೆ ಚಾಂಪಿಯನ್ ಪಟ್ಟ ಸಿಗಲಿದೆ? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಇಲ್ಲಿದೆ ಉತ್ತರ…

ದುಲೀಪ್ ಟ್ರೋಫಿ ಫೈನಲ್ ಪಂದ್ಯ ಡ್ರಾ ಆದರೆ ಯಾರಿಗೆ ಪ್ರಶಸ್ತಿ?

ಬಿಸಿಸಿಐನ ಸುದೀರ್ಘ ಇತಿಹಾಸ ಹೊಂದಿರುವ ನಾಕೌಟ್ ನಿಯಮಾವಳಿಗಳ ಪ್ರಕಾರ, ಫೈನಲ್ ಪಂದ್ಯವು ಡ್ರಾಗೊಂಡರೆ ‘ಮೊದಲ ಇನ್ನಿಂಗ್ಸ್ ಮುನ್ನಡೆ’ ಸಾಧಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಅಂದರೆ, ಎರಡೂ ತಂಡಗಳ ಮೊದಲ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಯಾವ ತಂಡದ ಸ್ಕೋರ್ ಹೆಚ್ಚಿರುತ್ತದೆಯೋ ಆ ತಂಡವೇ ಟ್ರೋಫಿ ಎತ್ತಿಹಿಡಿಯಲಿದೆ. ಈ ವಿಶಿಷ್ಟ ನಿಯಮದ ಕಾರಣಕ್ಕಾಗಿಯೇ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಬೃಹತ್ ಮೊತ್ತ ಪೇರಿಸಲು ಮುಂದಾಗುತ್ತವೆ.

ಅದರಂತೆ ಈ ಬಾರಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಶಾನ್ ಕಿಶನ್ ನಾಯಕತ್ವದ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 708 ರನ್ ಕಲೆಹಾಕಿತ್ತು. ಇಷ್ಟೊಂದು ಬೃಹತ್ ಮೊತ್ತ ಪೇರಿಸಿದರೂ ಡಿಕ್ಲೇರ್ ಘೋಷಿಸದೇ ಇರಲು ಮೊದಲ ಇನಿಂಗ್ಸ್​ನ ಮುನ್ನಡೆಯ ರಣತಂತ್ರವೇ ಕಾರಣ.

ಅಂದರೆ, ಈಸ್ಟ್ ಝೋನ್ ತಂಡವು ತಾನು ಸಂಪೂರ್ಣವಾಗಿ ಆಲೌಟ್ ಆಗುವವರೆಗೂ ಬ್ಯಾಟಿಂಗ್ ನಡೆಸಿ ಬರೋಬ್ಬರಿ 708 ರನ್ ಕಲೆಹಾಕಿತು. ಇದೀಗ ಎದುರಾಳಿ ಸೌತ್ ಝೋನ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 709 ರನ್ ಗಳಿಸದೇ ಪಂದ್ಯವು ‘ಡ್ರಾ’ ಆದಲ್ಲಿ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಈಸ್ಟ್ ಝೋನ್ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯಲಿದೆ.

ಸೌತ್ ಝೋನ್ ಏನು ಮಾಡಬೇಕು?

ಸೌತ್ ಝೋನ್ ತಂಡವು ಈ ಪಂದ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಬೇಕಿದ್ದರೆ ನಾಲ್ಕನೇ ಮತ್ತು ಐದನೇ ದಿನದಾಟದಲ್ಲಿ ಸಂಪೂರ್ಣ ಬ್ಯಾಟಿಂಗ್​ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಂದರೆ ಇನ್ನೂ 467 ರನ್‌ಗಳನ್ನು ಗಳಿಸಿ, ಕನಿಷ್ಠ 709 ರನ್‌ಗಳ ಗಡಿ ತಲುಪಬೇಕಿದೆ. ಈ ಮೂಲಕ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಬಹುದು.

ಇದನ್ನೂ ಓದಿ: 37 ಎಸೆತಗಳಲ್ಲಿ ಶತಕ, ಬರೋಬ್ಬರಿ 173 ರನ್: ಭರ್ಜರಿ ದಾಖಲೆ ಬರೆದ ನಮನ್​ ಧೀರ್ 

ಆದರೆ, ಸೌತ್ ಝೋನ್ ತಂಡವು ಈಗಾಗಲೇ 6 ವಿಕೆಟ್ ಕಳೆದುಕೊಂಡು ಕೇವಲ 242 ರನ್​ಗಳಿಸಿದೆ. ಇನ್ನುಳಿದಿರುವ 4 ವಿಕೆಟ್​ಗಳೊಂದಿಗೆ 467 ರನ್​ ಕಲೆಹಾಕುವುದು ಕಷ್ಟಸಾಧ್ಯ ಎನ್ನಬಹುದು. ಹೀಗಾಗಿ ಈ ಪಂದ್ಯದಲ್ಲಿ ಈಸ್ಟ್ ಝೋನ್ ಸಂಪೂರ್ಣ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಅದರಂತೆ ಫೈನಲ್ ಪಂದ್ಯವು ಡ್ರಾ ಆದರೆ ಮುನ್ನಡೆಯ ಆಧಾರದ ಮೇಲೆ ಈಸ್ಟ್ ಝೋನ್ ತಂಡಕ್ಕೆ ಚಾಂಪಿಯನ್ ಪಟ್ಟ ಒಲಿಯುವ ಸಾಧ್ಯತೆಯಿದೆ.

Loading...
Unable to load recommendations.
Follow Us