ಉದಯೋನ್ಮುಖ ಏಷ್ಯಾಕಪ್ನಲ್ಲಿ (Emerging Asia Cup 2023) ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 60 ರನ್ಗಳಿಂದ ಮಣಿಸಿದ ಪಾಕಿಸ್ತಾನ ಎ (Pakistan A vs Sri Lanka A) ತಂಡ ಸತತ ಎರಡನೇ ಬಾರಿಗೆ ಏಷ್ಯಾಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ. ಇದೀಗ ಭಾರತ ಎ ಹಾಗೂ ಬಾಂಗ್ಲಾದೇಶ ಎ (India A vs Bangladesh A) ತಂಡಗಳ ನಡುವೆ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ನಲ್ಲಿ ಪಾಕಿಸ್ತಾನ ಎ ವಿರುದ್ಧ ಸೆಣಸಾಡಲಿದೆ. ಇನ್ನು ಈ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 322 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಆವಿಷ್ಕಾ ಫರ್ನಾಂಡೋ ಅವರ 97 ರನ್ಗಳ ಏಕಾಂಗಿ ಹೋರಾಟದ ಹೊರತಾಗಿಯೂ ಗುರಿ ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆತಿಥೇಯ ತಂಡ 46ನೇ ಓವರ್ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 262 ರನ್ ಕಲೆಹಾಕಲಷ್ಟೇ ಶಕ್ತವಾಗಿ ಏಷ್ಯಾಕಪ್ನಿಂದ ಹೊರಬಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 24 ರನ್ಗಳಿದ್ದಾಗ ಮೊದಲ ವಿಕೆಟ್ ಪತನವಾಯಿತು. ಆ ಬಳಿಕ ಉತ್ತಮ ಜೊತೆಯಾಟ ಕಟ್ಟಿದ ಸೈಮ್ ಅಯೂಬ್ ಹಾಗೂ ಒಮೈರ್ ಯೂಸುಫ್ ತಂಡದ ಮೊತ್ತವನ್ನು 60 ರ ಗಡಿ ದಾಟಿಸಿದರು. ಆದರೆ ಉತ್ತಮ ಜೊತೆಯಾಟ ಕಟ್ಟುವ ಹಂತದಲ್ಲಿ ಅಯೂಬ್ 22 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆ ಬಳಿಕ ಒಂದಾದ ಒಮೈರ್ ಯೂಸುಫ್ (88) ಹಾಗೂ ನಾಯಕ ಮೊಹಮ್ಮದ್ ಹ್ಯಾರಿಸ್ (52) ತಲಾ ಅರ್ಧಶತಕ ಸಿಡಿಸಿ ತಂಡಕ್ಕೆ ಬೃಹತ್ ಮುನ್ನಡೆ ತಂದುಕೊಟ್ಟರು. ಆದರೆ ಶತಕದಂಚಲ್ಲಿ ಎಡವಿದ ಯೂಸುಫ್ 88 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಈ ವಿಕೆಟ್ ನಂತರ ಬಂದ ಮುಬಾಸಿರ್ ಖಾನ್ 42 ರನ್ಗಳ ಕೊಡುಗೆ ನೀಡಿದರು. ಅಂತಿಮವಾಗಿ ಪಾಕ್ ಪಡೆ 50 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 322 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡದ ಆರಂಭ ಕೂಡ ಉತ್ತಮವಾಗಿರಲಿಲ್ಲ. ಕೇವಲ 12 ರನ್ ಆಗುವಷ್ಟರಲ್ಲೇ ತಂಡದ ಎರಡು ವಿಕೆಟ್ ಪತನಗೊಂಡವು. ಆರಂಭಿಕ ಲಸಿತ್ ಕ್ರೂಸ್ಪುಲ್ಲೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಮಿನೋದ್ ಭಾನುಕಾ ಕೇವಲ 1 ರನ್ಗಳಿಸಲಷ್ಟೇ ಶಕ್ತರಾದರು. 4ನೇ ಕ್ರಮಾಂಕದಲ್ಲಿ ಬಂದ ಪಸಿಂದು ಸೂರಿಯಬಂಡಾರ ಕೂಡ 10 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಒಂದು ಬದಿಯಲ್ಲಿ ಭದ್ರವಾಗಿ ಬೇರೂರಿದ್ದ ಆವಿಷ್ಕಾ ಫರ್ನಾಂಡೋಗೆ, ಸಹನ್ ಅರಚ್ಚಿಗೆ ಅದ್ಭುತ ಸಾಥ್ ನೀಡಿದರು. ಹೀಗಾಗಿ 4ನೇ ಜೊತೆಯಾಟಕ್ಕೆ ಈ ಇಬ್ಬರು 128 ರನ್ ಕಲೆಹಾಕಿದರು. ಆದರೆ ಇಬ್ಬರೂ ಸಹ ತಲಾ 97 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರು.
ಈ ಇಬ್ಬರ ವಿಕೆಟ್ ಬಳಿಕ ಬಂದ ಲಂಕಾ ಬಾಲಂಹಗೋಚಿಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಗೆಲುವಿಗಾಗಿ ಹೋರಾಡಲಿಲ್ಲ. ಹೀಗಾಗಿ ಭಿಗಿ ದಾಳಿ ನೆಡೆಸಿದ ಪಾಕಿಸ್ತಾನ, ಲಂಕಾ ತಂಡವನ್ನು ಅಲ್ಪ ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಪಾಕ್ ಪರ ಬೌಲಿಂಗ್ನಲ್ಲಿ ಮಿಂಚಿದ ಅರ್ಷದ್ ಇಕ್ಬಾಲ್ 5 ವಿಕೆಟ್ ಪಡೆದರೆ, ಮುಬಾಸಿರ್ ಖಾನ್ ಹಾಗೂ ಸೂಫಿಯಾನ್ ಮುಖೀಮ್ ತಲಾ 2 ವಿಕೆಟ್ ಪಡೆದರು. ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್ ಉರುಳಿಸಿ ತಂಡದ ಗೆಲುವಿನ ಹೀರೋ ಎನಿಸಿಕೊಂಡ ಅರ್ಷದ್ ಇಕ್ಬಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:56 pm, Fri, 21 July 23