ಒಮಾನ್ನ ಅಲ್ ಎಮಿರೇಟ್ಸ್ ಮೈದಾನದಲ್ಲಿ ನಡೆದ ಶ್ರೀಲಂಕಾ ಎ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವಿನ ಉದಯೋನ್ಮುಖ ಟೀಂ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಎ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಅಫ್ಘಾನಿಸ್ತಾನ ಎ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೊದಲು ಈ ಪಂದ್ಯಾವಳಿಯಲ್ಲಿ 5 ಆವೃತ್ತಿಗಳು ನಡೆದಿದ್ದು, ಭಾರತ ತಂಡ ಒಮ್ಮೆ ಮಾತ್ರ ಪ್ರಶಸ್ತಿ ಗೆದ್ದಿದ್ದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ತಲಾ 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು. ಇನ್ನು ಇದೇ ಮೊದಲ ಬಾರಿಗೆ ಈ ಪಂದ್ಯಾವಳಿಯಲ್ಲಿ ಫೈನಲ್ಗೆ ಅರ್ಹತೆಗಿಟ್ಟಿಸಿಕೊಂಡಿದ್ದ ಅಫ್ಘಾನಿಸ್ತಾನ ತಂಡ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ನುವಾನಿಂದು ಫೆರ್ನಾಂಡೋ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆ ಶ್ರೀಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 133 ರನ್ ಕಲೆಹಾಕಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ 4 ವಿಕೆಟ್‌ಗಳು ಕೇವಲ 15 ರನ್‌ಗಳಿಗೆ ಪತನಗೊಂಡವು. ಇದಾದ ಬಳಿಕ ಸಹನ್ ಅರಚ್ಚಿಗೆ ತಂಡದ ಪರ ಮಹತ್ವದ ಇನ್ನಿಂಗ್ಸ್ ಆಡಿ ಅರ್ಧಶತಕ ಗಳಿಸಿದರಾದರೂ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ಬೆಂಬಲ ಸಿಗಲಿಲ್ಲ.
ಪವನ್ ರತ್ನಾಯಕೆ 20 ರನ್‌ಗಳ ಕೊಡುಗೆ ನೀಡಿದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ನಿಮೇಶ್ ವಿಮುಕ್ತಿ ಕೂಡ 19 ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಹಾಯದಿಂದ 23 ರನ್‌ಗಳ ಮಹತ್ವದ ಇನ್ನಿಂಗ್ಸ್ ಆಡಿದರು. ಸಹನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ 47 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ 64 ರನ್ ಗಳಿಸಿದರು. ಅಫ್ಘಾನಿಸ್ತಾನ ಪರ ಬಿಲಾಲ್ ಸಮಿ 3 ವಿಕೆಟ್ ಪಡೆದರೆ ಅಲ್ಲಾ ಗಜನ್ಫರ್ 2 ವಿಕೆಟ್ ಪಡೆದರು.
ಇನ್ನು ಶ್ರೀಲಂಕಾ ನೀಡಿದ ಅಫ್ಘಾನಿಸ್ತಾನ ತಂಡಕ್ಕೂ ಆರಂಭಿಕ ಆಘಾತ ಎದುರಾಯಿತು. ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಆರಂಭಿಕ ಜುಬೈದ್ ಅಕ್ಬರಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಸೇದಿಕುಲ್ಲಾ ಅಟಲ್ ಹಾಗೂ ನಾಯಕ ದರ್ವಿಶ್ ರಸೂಲಿ ಎರಡನೇ ವಿಕೆಟ್ಗೆ 42 ರನ್‌ಗಳ ಜೊತೆಯಾಟ ನೀಡಿದರು. ಆದರೆ ಈ ವೇಳೆ ನಾಯಕ ರಸೂಲಿ 20 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದ ಕರೀಂ ಜನತ್ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸರ್ ಸಹಿತ 33 ರನ್‌ಗಳ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು.
ಕೊನೆಯವರೆಗೂ ನಿಂತು ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಸೇದಿಕುಲ್ಲಾ ಅಟಲ್ 55 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 55 ರನ್ ಬಾರಿಸಿ ತಂಡವನ್ನು ಐತಿಹಾಸಿಕ ಗೆಲುವಿಗೆ ಮುನ್ನಡೆಸಿದರು. ಕೊನೆಯಲ್ಲಿ ಕೇವಲ 6 ಎಸೆತಗಳಲ್ಲಿ 16 ರನ್ ಬಾರಿಸಿದ ಮೊಹಮ್ಮದ್ ಇಶಾಕ್ ಕೂಡ ತಂಡದ ಗೆಲುವಿಗೆ ಕಾರಣರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:14 pm, Sun, 27 October 24