ENG vs WI: ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಪಡೆದು ಮಿಂಚಿದ ಗಸ್ ಅಟ್ಕಿನ್ಸನ್..!

|

Updated on: Jul 10, 2024 | 10:31 PM

ENG vs WI: ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡರು. 12 ಓವರ್​ಗಳಲ್ಲಿ 45 ರನ್ ನೀಡಿ 7 ವಿಕೆಟ್ ಪಡೆದರು. ಇದರಲ್ಲಿ 5 ಮೇಡನ್ ಓವರ್‌ಗಳೂ ಸೇರಿದ್ದವು. ಇದು ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇದುವರೆಗೆ ಇಂಗ್ಲೆಂಡ್‌ಗೆ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ.

ENG vs WI: ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಪಡೆದು ಮಿಂಚಿದ ಗಸ್ ಅಟ್ಕಿನ್ಸನ್..!
ಗಸ್ ಅಟ್ಕಿನ್ಸನ್
Follow us on

ಇಂದಿನಿಂದ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿ ಪ್ರಾರಂಭವಾಗಿದೆ. ಲಾರ್ಡ್ಸ್‌ನಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಕೇವಲ 121 ರನ್​ಗಳಿಗೆ ಆಲೌಟ್ ಆಗಿದೆ. ವಿಂಡೀಸ್ ಪಡೆಯನ್ನು ಇಷ್ಟು ಅತ್ಯಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಆಂಗ್ಲ ಬೌಲರ್ ಗಸ್ ಅಟ್ಕಿನ್ಸನ್ ಪ್ರಮುಖ ಕಾರಣ. ಗಸ್ ಅಟ್ಕಿನ್ಸನ್ ಚೊಚ್ಚಲ ಪಂದ್ಯದಲ್ಲೇ ಬಿರುಸಿನ ಬೌಲಿಂಗ್ ಮಾಡಿ ಒಂದರ ಹಿಂದೆ ಒಂದರಂತೆ 7 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ ಈ ಅದ್ಭುತ ಬೌಲಿಂಗ್‌ನೊಂದಿಗೆ ಅಟ್ಕಿನ್ಸನ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಕೂಡ ನಿರ್ಮಿಸಿದರು.

ಗಸ್ ಅಟ್ಕಿನ್ಸನ್ ದಾಖಲೆ

ಗಸ್ ಅಟ್ಕಿನ್ಸನ್ ಇಂಗ್ಲೆಂಡ್ ಪರ ಚೊಚ್ಚಲ ಪಂದ್ಯದಲ್ಲೇ 7 ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡರು. 12 ಓವರ್​ಗಳಲ್ಲಿ 45 ರನ್ ನೀಡಿ 7 ವಿಕೆಟ್ ಪಡೆದರು. ಇದರಲ್ಲಿ 5 ಮೇಡನ್ ಓವರ್‌ಗಳೂ ಸೇರಿದ್ದವು. ಇದು ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇದುವರೆಗೆ ಇಂಗ್ಲೆಂಡ್‌ಗೆ ಮೂರನೇ ಅತ್ಯುತ್ತಮ ಪ್ರದರ್ಶನವಾಗಿದೆ. ಅಟ್ಕಿನ್ಸನ್ ಈ ವಿಷಯದಲ್ಲಿ ಜಾನ್ ಲಿವರ್ ಅವರ 48 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಜಾನ್ ಲಿವರ್ ಅವರು ದೆಹಲಿಯಲ್ಲಿ (1976) ಭಾರತದ ವಿರುದ್ಧ 45 ರನ್‌ಗಳಿಗೆ 7 ವಿಕೆಟ್ ಪಡೆದಿದ್ದರು.

ಒಂದೇ ಓವರ್‌ನಲ್ಲಿ 3 ವಿಕೆಟ್

ಅಟ್ಕಿನ್ಸನ್ ಇನ್ನಿಂಗ್ಸ್​ನ 35 ನೇ ಓವರ್‌ನ ಎರಡನೇ, ಮೂರನೇ ಮತ್ತು ಐದನೇ ಎಸೆತಗಳಲ್ಲಿ ವಿಂಡೀಸ್ ಬ್ಯಾಟ್ಸ್‌ಮನ್‌ಗಳಾದ ಅಲಿಕ್ ಅಥಾಂಜೆ, ಜೇಸನ್ ಹೋಲ್ಡರ್ ಮತ್ತು ಜೋಶುವಾ ಡಿಸಿಲ್ವಾ ಅವರ ವಿಕೆಟ್‌ಗಳನ್ನು ಪಡೆದರು. ಅಟ್ಕಿನ್ಸನ್ ಮಾರಕ ದಾಳಿಗೆ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳು ತತ್ತರಿಸಿ ಹೋದರು. ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ 88 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಇದರ ನಂತರ ಅಟ್ಕಿನ್ಸನ್ ದಾಳಿಯ ಮುಂದೆ ವಿಂಡೀಸ್​ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು. ಹೀಗಾಗಿ ವೆಸ್ಟ್ ಇಂಡೀಸ್ ತಂಡ 41.4 ಓವರ್‌ಗಳಲ್ಲಿ 121 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಇನ್ನು ಈ ಪಂದ್ಯದಲ್ಲಿ ಕೊನೆಯ ಟೆಸ್ಟ್ ಆಡುತ್ತಿರುವ ಜೇಮ್ಸ್ ಆಂಡರ್ಸನ್ ಒಂದು ವಿಕೆಟ್ ಪಡೆದರು. 10 ಓವರ್​ಗಳಲ್ಲಿ 26 ರನ್ ನೀಡಿ 3 ಮೇಡನ್ ಓವರ್ ಬೌಲ್ ಮಾಡಿ ಜೇಡನ್ ಸೀಲ್ಸ್ ವಿಕೆಟ್ ಪಡೆದರು. ನಾಯಕ ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದು ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ