ENG vs WI: ಶಮರ್ ಜೋಸೆಫ್ ಪವರ್​ ಹಿಟ್​ಗೆ ಕ್ರೀಡಾಂಗಣದ ಮೇಲ್ಛಾವಣಿಯ ಹೆಂಚುಗಳು ಪುಡಿಪುಡಿ; ವಿಡಿಯೋ

Shamar Joseph: ವಿಂಡೀಸ್ ಪರ 11ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋಸೆಫ್ 33 ರನ್​ಗಳ ಕಾಣಿಕೆ ನೀಡಿದರು. ಜೋಸೆಫ್ ತಮ್ಮ ಇನ್ನಿಂಗ್ಸ್​ನಲ್ಲಿ 2 ಭರ್ಜರಿ ಸಿಕ್ಸರ್ ಕೂಡ ಸಿಡಿಸಿದರು. ಈ ಎರಡು ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಕ್ರೀಡಾಂಗಣದ ಮೇಲ್ಛಾವಣಿಯ ಹೆಂಚನ್ನು ಪುಡಿಪುಡಿ ಮಾಡಿತು. ಈಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ENG vs WI: ಶಮರ್ ಜೋಸೆಫ್ ಪವರ್​ ಹಿಟ್​ಗೆ ಕ್ರೀಡಾಂಗಣದ ಮೇಲ್ಛಾವಣಿಯ ಹೆಂಚುಗಳು ಪುಡಿಪುಡಿ; ವಿಡಿಯೋ
ಶಮರ್ ಜೋಸೆಫ್

Updated on: Jul 20, 2024 | 9:10 PM

ಪ್ರಸ್ತುತ ಇಂಗ್ಲೆಂಡ್‌ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನ್ನಿಂಗ್ಸ್ ಗೆಲುವು ಸಾಧಿಸಿತ್ತು. ಇದರೊಂದಿಗೆ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿತ್ತು. ಇದೀಗ ಉಭಯ ತಂಡಗಳ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆದಿದ್ದು, ಈಗಾಗಲೇ ಎರಡು ತಂಡಗಳು ಮೊದಲ ಇನ್ನಿಂಗ್ಸ್ ಆಡಿ ಮುಗಿಸಿವೆ. ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್‌ ತಂಡ 416 ರನ್ ಕಲೆಹಾಕಿತ್ತು. ಇತ್ತ ವೆಸ್ಟ್ ಇಂಡೀಸ್ ಕೂಡ ಮೊದಲ ಇನ್ನಿಂಗ್ಸ್​ನಲ್ಲಿ ಆಂಗ್ಲರಿಗೆ ಎದುರೇಟು ನೀಡಿ 457 ರನ್ ಕಲೆಹಾಕಿದೆ. ಇದರೊಂದಿಗೆ ಮೊದಲ ಇನ್ನಿಂಗ್ಸ್​ನಲ್ಲಿ 41 ರನ್​ಗಳ ಮುನ್ನಡೆ ಕೂಡ ಕಾಯ್ದುಕೊಂಡಿದೆ. ವಿಂಡೀಸ್ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಳ್ಳುವಲ್ಲಿ 11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶಮರ್ ಜೋಸೆಫ್ ಪಾತ್ರ ಅಪಾರವಾಗಿದೆ. ಕೊನೆಯ ಬ್ಯಾಟರ್ ಆಗಿ ಕಣಕ್ಕಿಳಿದ ಜೋಸೆಫ್ 33 ರನ್​ಗಳ ಕಾಣಿಕೆ ನೀಡಿದರು. ಜೋಸೆಫ್ ತಮ್ಮ ಇನ್ನಿಂಗ್ಸ್​ನಲ್ಲಿ 2 ಭರ್ಜರಿ ಸಿಕ್ಸರ್ ಕೂಡ ಸಿಡಿಸಿದರು. ಈ ಎರಡು ಸಿಕ್ಸರ್​ಗಳಲ್ಲಿ ಒಂದು ಸಿಕ್ಸರ್ ಕ್ರೀಡಾಂಗಣದ ಮೇಲ್ಛಾವಣಿಯ ಹೆಂಚನ್ನು ಪುಡಿಪುಡಿ ಮಾಡಿತು. ಈಗ ಅದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಂಚು ಪುಡಿಪುಡಿ

ಈ ದೃಶ್ಯ ಕಂಡು ಬಂದಿದ್ದು ವಿಂಡೀಸ್ ಇನ್ನಿಂಗ್ಸ್​ನ 107ನೇ ಓವರ್​ನಲ್ಲಿ. ಇಂಗ್ಲೆಂಡ್‌ನ ಸ್ಟಾರ್ ಬೌಲರ್ ಗಸ್ ಅಟ್ಕಿನ್ಸನ್ ಬೌಲ್ ಮಾಡಿದ ಈ ಓವರ್‌ ಎರಡನೇ ಎಸೆತದಲ್ಲಿ ಶಮರ್ ಜೋಸೆಫ್ ಗಗನಚುಂಬಿ ಸಿಕ್ಸರ್ ಬಾರಿಸಿದರು. ಮುಂದಿನ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಆದರೆ ನಾಲ್ಕನೇ ಎಸೆತವನ್ನು ಮತ್ತೊಮ್ಮೆ ಸಿಕ್ಸರ್​ಗಟ್ಟುವಲ್ಲಿ ಜೋಸೆಫ್ ಯಶಸ್ವಿಯಾದರು. ಡೀಪ್ ಬ್ಯಾಕ್​ವರ್ಡ್​ ದಿಕ್ಕಿನ ಕಡೆ ಪುಟಿದ ಚೆಂಡು, ಕ್ರೀಡಾಂಗಣದ ಛಾವಣಿಯ ಮೇಲೆ ಬಿದ್ದಿತು. ಮೇಲ್ಛಾವಣಿಯ ಮೇಲೆ ಚೆಂಡು ಬಿದ್ದ ತಕ್ಷಣ, ಮೇಲ್ಛಾವಣಿ ಮೇಲೆ ಹಾಕಿದ್ದ ಹೆಂಚುಗಳು ಪುಡಿಪುಡಿಯಾದವು. ಪುಡಿಯಾದ ಹೆಂಚುಗಳ ಚೂರುಗಳು ಕೆಳಗೆ ಕುಳಿತಿದ್ದ ಪ್ರೇಕ್ಷಕರ ಮೇಲೆ ಬಿದ್ದವು.

ಜೋಸೆಫ್ ಸಿಡಿಲಬ್ಬರದ ಬ್ಯಾಟಿಂಗ್

ಮೊದಲ ಇನ್ನಿಂಗ್ಸ್​ನಲ್ಲಿ ಶಮರ್ ಜೋಸೆಫ್ ಬಿರುಸಿನ ಬ್ಯಾಟಿಂಗ್ ಮಾಡಿ 27 ಎಸೆತಗಳಲ್ಲಿ 122.22 ಸ್ಟ್ರೈಕ್ ರೇಟ್‌ನಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 33 ರನ್ ಸಿಡಿಸಿದರು. ಇನ್ನೊಂದು ತುದಿಯಲ್ಲಿ ಜೋಶುವಾ ಡಿಸಿಲ್ವಾ ಕೂಡ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು 122 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 82 ರನ್ ಗಳಿಸಿದರು. ಜೋಶುವಾ ಮತ್ತು ಶಮರ್ ನಡುವೆ 10ನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವಿತ್ತು. ಇದರೊಂದಿಗೆ ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್​ನಲ್ಲಿ 41 ರನ್ ಗಳ ಮುನ್ನಡೆ ಸಾಧಿಸಿತು.

ಈ ದಾಖಲೆ ಸೃಷ್ಟಿ

ಜೋಶುವಾ ಸಿಲ್ವಾ ಮತ್ತು ಶಮರ್ ಜೋಸೆಫ್ ನಡುವಿನ 71 ರನ್ ಜೊತೆಯಾಟವು ಇಂಗ್ಲೆಂಡ್ ವಿರುದ್ಧ ಹತ್ತನೇ ವಿಕೆಟ್‌ಗೆ ವೆಸ್ಟ್ ಇಂಡೀಸ್‌ನ ಎರಡನೇ ಗರಿಷ್ಠ ಜೊತೆಯಾಟವಾಗಿದೆ. ಇದಕ್ಕೂ ಮುನ್ 2012ರಲ್ಲಿ ಎಡ್ಜ್‌ಬಾಸ್ಟನ್‌ನಲ್ಲಿ ದಿನೇಶ್ ರಾಮ್‌ದಿನ್ ಮತ್ತು ಟಿನೋ ಬೆಸ್ಟ್ ಇಬ್ಬರು ಜೊತೆಗೂಡಿ 143 ರನ್‌ಗಳ ದಾಖಲೆಯ ಜೊತೆಯಾಟ ನಡೆಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ