ಬೌಲಿಂಗ್​ನಲ್ಲಿ ಹೆನ್ರಿ ಮಿಂಚಿಂಗ್: ಬ್ಯಾಟಿಂಗ್​ನಲ್ಲಿ ಹೆನ್ರಿ ಶೈನಿಂಗ್..!

England vs New Zealand, 2nd Test: ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ಲಂಡನ್​ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವ ಕಿವೀಸ್ ಪಡೆ ದ್ವಿತೀಯ ಇನಿಂಗ್ಸ್ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸುವತ್ತ ದಾಪುಗಾಲಿಟ್ಟಿದ್ದಾರೆ.

ಬೌಲಿಂಗ್​ನಲ್ಲಿ ಹೆನ್ರಿ ಮಿಂಚಿಂಗ್: ಬ್ಯಾಟಿಂಗ್​ನಲ್ಲಿ ಹೆನ್ರಿ ಶೈನಿಂಗ್..!
Matt Henry - Henry Nicholls
Image Credit source: Espn

Updated on: Jun 20, 2026 | 9:09 AM

ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಪ್ರದರ್ಶನ ಮುಂದುವರೆಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ 391 ರನ್ ಪೇರಿಸಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಆರಂಭಿಕ ದಾಂಡಿಗ ಬೆನ್ ಡೆಕೆಟ್ 36 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಕಬ್ ಬೆಥೆಲ್ ಕೇವಲ 9 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇನ್ನು ಜೋ ರೂಟ್ 46 ರನ್​ಗಳ ಕೊಡುಗೆ ನೀಡಿದರೆ, ಹ್ಯಾರಿ ಬ್ರೂಕ್ 24 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಮ್ಯಾಟ್ ಹೆನ್ರಿ ಮಿಂಚಿಂಗ್:

ಜೋ ರೂಟ್ ವಿಕೆಟ್ ಕಬಳಿಸುವ ಮೂಲಕ ವಿಕೆಟ್ ಖಾತೆ ತೆರೆದ ಮ್ಯಾಟ್ ಹೆನ್ರಿ ಕರಾರುವಾಕ್ ದಾಳಿಯೊಂದಿಗೆ ಗಮನ ಸೆಳೆದರು. ಅದರಲ್ಲೂ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳನ್ನು ಕಾಡಿದ ಹೆನ್ರಿ 24 ಓವರ್​ಗಳಲ್ಲಿ 80 ರನ್ ನೀಡಿ 5 ವಿಕೆಟ್ ಉರುಳಿಸಿದರು. ಈ ಮೂಲಕ ಇಂಗ್ಲೆಂಡ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ​ 291 ರನ್​ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹೆನ್ರಿ ನಿಕೋಲ್ಸ್ ಶೈನಿಂಗ್:

ಮೊದಲ ಇನಿಂಗ್ಸ್​ನಲ್ಲಿನ 100 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಆರಂಭದಲ್ಲೇ ಟಾಮ್ ಲ್ಯಾಥಮ್ (4) ವಿಕೆಟ್ ಕಳೆದುಕೊಂಡಿತು. ಇದರ ಬೆನ್ನಲ್ಲೇ ಡೆವೊನ್ ಕಾನ್ವೆ (11) ಕೂಡ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ ತಾಳ್ಮೆಯುತ ಬ್ಯಾಟಿಂಗ್​ನೊಂದಿಗೆ ನ್ಯೂಝಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಲ್ಲದೆ ಕ್ರೀಸ್ ಕಚ್ಚಿ ನಿಂತು ಇಂಗ್ಲೆಂಡ್ ವೇಗಿಗಳನ್ನು ಕಾಡಿದ ನಿಕೋಲ್ಸ್ ಆಕರ್ಷಕ ಫೋರ್​ಗಳೊಂದಿಗೆ ಇನಿಂಗ್ಸ್ ಕಟ್ಟಿದರು.

ಅದರಂತೆ ಮೂರನೇ ದಿನದಾಟದ ಅಂತ್ಯದವರೆಗೆ ಬ್ಯಾಟ್ ಬೀಸಿದ ಹೆನ್ರಿ ನಿಕೋಲ್ಸ್ 164 ಎಸೆತಗಳಲ್ಲಿ 16 ಫೋರ್​ಗಳೊಂದಿಗೆ ಅಜೇಯ 119 ರನ್​ ಬಾರಿಸಿದ್ದಾರೆ. ಹೆನ್ರಿಯ ಈ ಭರ್ಜರಿ ಶತಕದ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನಿಂಗ್ಸ್​ನಲ್ಲಿ 3 ವಿಕೆಟ್ ಕಳೆದುಕೊಂಡು 252 ರನ್​ ಕಲೆಹಾಕಿದೆ.

ಕಿವೀಸ್ ಪಡೆಗೆ ಭರ್ಜರಿ ಮುನ್ನಡೆ:

ಮೊದಲ ಇನಿಂಗ್ಸ್​ನಲ್ಲಿ 100 ರನ್​ಗಳ ಪಡೆದುಕೊಂಡಿದ್ದ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ 252 ರನ್​ ಕಲೆಹಾಕಿ 352 ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ನಾಲ್ಕನೇ ದಿನದಾಟದ ಅಂತ್ಯದವರೆಗೆ ಬ್ಯಾಟಿಂಗ್ ಮುಂದುವರೆಸಿ ಬೃಹತ್ ಮೊತ್ತ ಕಲೆಹಾಕುವ ಸಾಧ್ಯತೆಯಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಕೊನೆಯ ದಿನದಾಟದಲ್ಲಿ ಕಠಿಣ ಗುರಿ ನೀಡಲು ಪ್ಲ್ಯಾನ್ ರೂಪಿಸಲಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಬೆನ್ ಡಕೆಟ್ , ಎಮಿಲಿಯೊ ಗೇ , ಜೇಕಬ್ ಬೆಥೆಲ್ , ಜೋ ರೂಟ್ (ನಾಯಕ) , ಹ್ಯಾರಿ ಬ್ರೂಕ್ ,
ಜೇಮ್ಸ್ ರೆವ್ (ವಿಕೆಟ್ ಕೀಪರ್) , ಜೋರ್ಡನ್ ಕಾಕ್ಸ್ , ಜೋಫ್ರಾ ಆರ್ಚರ್ , ಜೋಶ್ ಟಂಗ್ , ಮ್ಯಾಥ್ಯೂ ಫಿಶರ್ , ಸೋನಿ ಬೇಕರ್.

ಇದನ್ನೂ ಓದಿ: 12 ಕೋಟಿ ರೂ. ಮೈನಸ್… ಡೆಲ್ಲಿ ಕ್ಯಾಪಿಟಲ್ಸ್​ಗೆ ರಿಷಭ್ ರಿಎಂಟ್ರಿ!

ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡೆರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ , ವಿಲಿಯಂ ಒರೋಕ್.

 

Follow Us