
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ನಾಯಕ ಹಶ್ಮತುಲ್ಲಾ ಶಾಹಿದಿ (Hashmatullah Shahidi) ಟೀಂ ಇಂಡಿಯಾ ಬೌಲರ್ಗಳ ಎದುರು ಏಕಾಂಗಿ ಹೋರಾಟ ನೀಡಿ ಸ್ಮರಣೀಯ ಶತಕ ಸಿಡಿಸಿದರು. ಭಾರತದ ನೆಲದಲ್ಲಿ ಚೊಚ್ಚಲ ಏಕದಿನ ಶತಕ ಬಾರಿಸಿದ ಶಾಹಿದಿ ತಂಡವನ್ನು 200 ರನ್ಗಳ ಗಡಿ ದಾಟಿಸುವಲ್ಲು ಯಶಸ್ವಿಯಾದರು. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 126 ಎಸೆತಗಳನ್ನು ಎದುರಿಸಿದ ಶಾಹಿದಿ 13 ಬೌಂಡರಿ ಹಾಗೂ 1 ಸಿಕ್ಸರ್ ಕೂಡ ಬಾರಿಸಿದರು. ಸುಂದರ್ ಎಸೆದ 44ನೇ ಓವರ್ನಲ್ಲಿ ಬೌಂಡರಿ ಬಾರಿಸುವ ಮೂಲಕ ಹಶ್ಮತುಲ್ಲಾ ಶಾಹಿದಿ ತಮ್ಮ ಶತಕದ ಗಡಿ ದಾಟಿದರು. ಭಾರತದ ನೆಲದಲ್ಲಿ ಚೊಚ್ಚಲ ಶತಕ ಸಿಡಿಸಿದ ಶಾಹಿದಿಗೆ ಇದು ಅವರ ಏಕದಿನ ವೃತ್ತಿಜೀವನದ ಮೊದಲ ಶತಕವೂ ಆಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ ಉತ್ತಮ ಆರಂಭ ಪಡೆಯಲು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವಕಾಶ ಮಾಡಿಕೊಡಲಿಲ್ಲ. ತಾವು ದಾಳಿಗಿಳಿದ ಮೊದಲ ಓವರ್ನಿಂದಲೇ ವಿಕೆಟ್ಗಳ ಭೇಟೆ ಶುರು ಮಾಡಿದ ಪ್ರಸಿದ್ಧ್ ಪವರ್‌ಪ್ಲೇನಲ್ಲಿ ಅಂದರೆ ಮೊದಲ 10 ಓವರ್ಗಳಲ್ಲಿ 5 ಓವರ್ಗಳನ್ನು ಬೌಲ್ ಮಾಡಿ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿದರು. ಈ ವೇಳೆ ಪ್ರಸಿದ್ಧ್ ನೀಡಿದ್ದು ಕೇವಲ 6 ರನ್. ಹೀಗಾಗಿ ಪ್ರಸಿದ್ಧ್ ದಾಳಿಗೆ ನಲುಗಿದ ಅಫ್ಘಾನಿಸ್ತಾನ ಪವರ್‌ಪ್ಲೇನಲ್ಲಿ ಕೇವಲ 36 ರನ್ ಕಲೆಹಾಕಿ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದಾದ ಬಳಿಕ ಜೊತೆಯಾದ ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಆಲ್‌ರೌಂಡರ್ ಅಜ್ಮತುಲ್ಲಾ ಒಮರ್ಜೈ ಹಳ್ಳ ಹಿಡಿದಿದ್ದ ಅಫ್ಘಾನಿಸ್ತಾನದ ಇನ್ನಿಂಗ್ಸ್ಗೆ ಚೇತರಿಕೆ ನೀಡಿದರು. ಇವರಿಬ್ಬರು 5ನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿದರು. ಈ ವೇಳೆ ಅಜ್ಮತುಲ್ಲಾ ಒಮರ್ಜೈ ಹಾಗೂ ಹಶ್ಮತುಲ್ಲಾ ಶಾಹಿದಿ ತಮ್ಮ ತಮ್ಮ ಅರ್ಧಶತಕಗಳನ್ನು ಪೂರೈಸಿದರು. ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಅಜ್ಮತುಲ್ಲಾ ಒಮರ್ಜೈ ಅವರ ವಿಕೆಟ್ ಕೂಡ ಪತನವಾಯಿತು.
IND vs AFG: 6 ರನ್ಗೆ 4 ವಿಕೆಟ್..! ಕನ್ನಡಿಗ ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘನ್
ಒಮರ್ಜೈ ವಿಕೆಟ್ ಪತನದ ನಂತರ ಬಂದ ಅನುಭವಿ ನಬಿ ಅವರ ಇನ್ನಿಂಗ್ಸ್ ಕೂಡ 21 ರನ್ಗಳಿಗೆ ಅಂತ್ಯವಾಯಿತು. ಈ ಹಂತದಲ್ಲಿ ಅಫ್ಘಾನಿಸ್ತಾನ 198 ರನ್ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ತಂಡದ ಕೊನೆಯ 3 ವಿಕೆಟ್ಗಳು ಕೇವಲ 8 ರನ್ಗಳಿಗೆ ಪತನಗೊಂಡವು. ಇದರಿಂದ ಶತಕದಂಚಿನಲ್ಲಿದ್ದ ಶಾಹಿದಿ ಶತಕ ಬಾರಿಸುವುದು ಅನುಮಾನ ಎಂದು ತೊರುತ್ತಿತ್ತು. ಆದರೆ ಸುಂದರ್ ಎಸೆದ 44ನೇ ಓವರ್ನಲ್ಲಿ ಶಾಹಿದಿ ಬೌಂಡರಿ ಬಾರಿಸುವ ಮೂಲಕ ತಮ್ಮ ಚೊಚ್ಚಲ ಶತಕವನ್ನು ಪೂರೈಸಿದರು. ಅಂತಿಮವಾಗಿ ಶಾಹಿದಿ ಅವರ ವಿಕೆಟ್ ಪತನದೊಂದಿಗೆ ಅಫ್ಘಾನಿಸ್ತಾನದ ಇನ್ನಿಂಗ್ಸ್ ಕೂಡ ಅಂತ್ಯವಾಯಿತು. ಅಫ್ಘಾನಿಸ್ತಾನ 44.2 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 218 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
Published On - 5:13 pm, Sat, 20 June 26