ಕ್ರಿಕೆಟ್ ಫ್ಯಾನ್ಸ್​ ಗಮನಕ್ಕೆ; ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಐಸಿಸಿ ಹೊಸ ನಿಯಮಗಳು

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಅಕ್ಟೋಬರ್ 1 ರಿಂದ ಜಾರಿಗೆ ಬರುವ ಹೊಸ ಕ್ರಿಕೆಟ್ ನಿಯಮಗಳನ್ನು ಘೋಷಿಸಿದೆ. ಬ್ಯಾಟರ್‌ಗಳ ಸಮಯ ವ್ಯರ್ಥಕ್ಕೆ ಕಠಿಣ ಪೆನಾಲ್ಟಿ, ಟೆಸ್ಟ್‌ಗಳಲ್ಲಿ ಬೆಳಕಿನ ಕೊರತೆ ನಿವಾರಿಸಲು ಪಿಂಕ್ ಬಾಲ್ ಪ್ರಯೋಗ, ರನ್-ಔಟ್ ಮತ್ತು ವೈಡ್ ಬಾಲ್ ನಿಯಮಗಳಲ್ಲಿ ಸ್ಪಷ್ಟತೆ, ಮತ್ತು ಪಾನೀಯ ವಿರಾಮದಲ್ಲಿ ಕೋಚ್ ಮೈದಾನಕ್ಕೆ ಬರುವ ಅವಕಾಶ ಸೇರಿದಂತೆ ಹಲವು ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಈ ನಿಯಮಗಳು ಕ್ರಿಕೆಟ್ ಆಟದ ವೇಗ ಮತ್ತು ನ್ಯಾಯಸಮ್ಮತತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿವೆ.

ಕ್ರಿಕೆಟ್ ಫ್ಯಾನ್ಸ್​ ಗಮನಕ್ಕೆ; ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಐಸಿಸಿ ಹೊಸ ನಿಯಮಗಳು
ಟೀಂ ಇಂಡಿಯಾ, (ಪ್ರಾತಿನಿಧಿಕ ಚಿತ್ರ)
Image Credit source: PTI

Updated on: Oct 01, 2026 | 8:25 PM

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕ್ರಿಕೆಟ್​ ನಿಯಮಗಳಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಅಕ್ಟೋಬರ್ 1 ರಿಂದ ಪ್ರಾರಂಭವಾಗುವ ಸರಣಿಯಿಂದ ಜಾರಿಗೆ ಬರಲಿವೆ. ಹೀಗಾಗಿ ಪ್ರಸ್ತುತ ನಡೆಯುತ್ತಿರುವ ಸರಣಿಗಳು ಹಳೆಯ ನಿಯಮಗಳ ಅಡಿಯಲ್ಲಿ ಪೂರ್ಣಗೊಳ್ಳುತ್ತವೆ. ಇದರರ್ಥ ಈ ಹೊಸ ನಿಯಮಗಳು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಏಕದಿನ ಸರಣಿಗೆ ಅನ್ವಯಿಸುವುದಿಲ್ಲ. ಐಸಿಸಿ ತಂದಿರುವ ಈ ಬದಲಾವಣೆಗಳಲ್ಲಿ ಬ್ಯಾಟರ್‌ಗಳ ಟೈಮ್-ಪಾಸಿಂಗ್ ಅನ್ನು ತಡೆಯುವುದು, ಟೆಸ್ಟ್‌ಗಳಲ್ಲಿ ಬೆಳಕಿನ ಕೊರತೆಯ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಮತ್ತು ರನ್-ಔಟ್ ವ್ಯವಸ್ಥೆಗೆ ಸ್ಪಷ್ಟತೆ ತರುವುದು ಸೇರಿವೆ.

  • ಪುರುಷರ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಸಮಯ ವ್ಯರ್ಥ ಮಾಡುವುದನ್ನು ತಡೆಯಲು ಐಸಿಸಿ ಕಠಿಣ ನಿಯಮಗಳನ್ನು ಪರಿಚಯಿಸಿದೆ. ನಿಗದಿತ ಸಮಯದೊಳಗೆ ಬ್ಯಾಟ್ಸ್‌ಮನ್ ಚೆಂಡನ್ನು ಎದುರಿಸಲು ಸಿದ್ಧರಿಲ್ಲದಿದ್ದರೆ ಅಂಪೈರ್‌ಗಳು ಮೊದಲ ಎಚ್ಚರಿಕೆ ನೀಡುತ್ತಾರೆ. ಎರಡನೇ ಬಾರಿಗೆ ಅದೇ ರೀತಿ ಪುನರಾವರ್ತನೆಯಾದಲ್ಲಿ ಅಂತಿಮ ಎಚ್ಚರಿಕೆ ನೀಡಲಾಗುತ್ತದೆ. ಮೂರನೇ ಬಾರಿಗೆ ಅಥವಾ ನಂತರ ಯಾವುದೇ ಬಾರಿ ಪ್ರತಿ ವಿಳಂಬಕ್ಕೆ ಫೀಲ್ಡಿಂಗ್ ತಂಡಕ್ಕೆ 5 ಪೆನಾಲ್ಟಿ ರನ್‌ಗಳನ್ನು ನೀಡಲಾಗುತ್ತದೆ.
  • ಟೆಸ್ಟ್ ಪಂದ್ಯಗಳಲ್ಲಿ ಬೆಳಕಿನ ಕೊರತೆಯಿಂದಾಗಿ ಆಟಕ್ಕೆ ಅಡ್ಡಿಯಾಗದಂತೆ ತಡೆಯಲು, ಹಗಲಿನಲ್ಲಿ ನಡೆಯುವ ನಿಯಮಿತ ಟೆಸ್ಟ್‌ಗಳಲ್ಲಿ ಪಿಂಕ್ ಬಾಲ್ ಬಳಸಲು ಪ್ರಾಯೋಗಿಕ ಆಧಾರದ ಮೇಲೆ ಅನುಮತಿ ನೀಡಲಾಗಿದೆ. ಪಂದ್ಯ ಪ್ರಾರಂಭವಾಗುವ ಮೊದಲು ಎರಡೂ ತಂಡಗಳ ನಾಯಕರು ಇದಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ಒಪ್ಪಂದಕ್ಕೆ ಬಂದ ನಂತರ, ಪಂದ್ಯದ ಮಧ್ಯದಲ್ಲಿ ಪಿಂಕ್ ಬಾಲ್ ಬದಲಿಗೆ ರೆಡ್ ಬಾಲ್​ ಬಳಸುವಂತಿಲ್ಲ.
  • ಇಲ್ಲಿಯವರೆಗೆ ಟೆಸ್ಟ್ ಪಂದ್ಯವೊಂದರಲ್ಲಿ ದಿನದ ಕೊನೆಯ ಓವರ್‌ನಲ್ಲಿ ವಿಕೆಟ್ ಬಿದ್ದ ತಕ್ಷಣ ದಿನದಾಟವನ್ನು ಅಂತ್ಯಗೊಳಿಸಲಾಗುತ್ತಿತ್ತು. ಆದರೀಗ ಆ ಪದ್ಧತಿಯನ್ನು ಐಸಿಸಿ ರದ್ದುಗೊಳಿಸಿದೆ. ಹವಾಮಾನ ಮತ್ತು ಬೆಳಕಿನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ಓವರ್ ಪೂರ್ಣಗೊಳ್ಳುವವರೆಗೆ ಆಟ ಮುಂದುವರಿಯುತ್ತದೆ.
  • ರನ್-ಔಟ್‌ಗಳು ಮತ್ತು ಸ್ಟಂಪಿಂಗ್ ಸಮಯದಲ್ಲಿ ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಇರಬೇಕು. ಅಂದರೆ ವಿಕೆಟ್‌ಗಳು ಬೀಳುವ ಸಮಯದಲ್ಲಿ ಚೆಂಡು ಗ್ಲೌಸ್ ಅಥವಾ ಕೈಯಲ್ಲಿ ಸಂಪೂರ್ಣವಾಗಿ ಸ್ಥಿರವಾಗಿರಬೇಕು. ಇಲ್ಲದಿದ್ದರೆ ಅದನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ.
  • ಸೀಮಿತ ಓವರ್‌ಗಳ ಕ್ರಿಕೆಟ್ ಪಂದ್ಯಗಳಲ್ಲಿ ವೈಡ್ ಬಾಲ್ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಬೌಲರ್ ರನ್-ಅಪ್ ಪ್ರಾರಂಭಿಸಿದ ನಂತರ ಬ್ಯಾಟರ್ ತನ್ನ ಸ್ಥಾನದಿಂದ ಬದಿಗೆ ಚಲಿಸಿದರೆ, ಬೌಲರ್‌ನ ಚೆಂಡು ವೈಡ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಬ್ಯಾಟರ್‌ನ ಆರಂಭಿಕ ಸ್ಥಾನವನ್ನು ಮಾನದಂಡವಾಗಿ ತೆಗೆದುಕೊಳ್ಳಲಾಗುತ್ತದೆ.
  • ಏಕದಿನ ಮತ್ತು ಟಿ20 ಪಂದ್ಯಗಳ ಪಾನೀಯ ವಿರಾಮದ ಸಮಯದಲ್ಲಿ ತಂಡದ ಹೆಡ್ ಕೋಚ್ ಮೈದಾನಕ್ಕೆ ಬಂದು ತಂಡದೊಂದಿಗೆ ಮಾತುಕತೆ ನಡೆಸಲು ಅಧಿಕೃತವಾಗಿ ಅವಕಾಶ ನೀಡಲಾಗಿದೆ.
  • ರನ್ ಅನ್ನು ತಡೆಯುವ ಅಥವಾ ರನ್-ಔಟ್‌ಗೆ ಕಾರಣವಾಗುವ ಉದ್ದೇಶದಿಂದ ಚೆಂಡನ್ನು ಸ್ಟಂಪ್‌ಗಳ ಕಡೆಗೆ ಎಸೆಯುವುದನ್ನು ಮಾತ್ರ ಓವರ್‌ತ್ರೋ ಎಂದು ಪರಿಗಣಿಸಲಾಗುತ್ತದೆ. ಚೆಂಡನ್ನು ನಿಲ್ಲಿಸುವಾಗ ಅಥವಾ ಅದನ್ನು ಇನ್ನೊಬ್ಬ ಫೀಲ್ಡರ್‌ಗೆ ರವಾನಿಸುವಾಗ ಮಾಡುವ ಯಾವುದೇ ತಪ್ಪನ್ನು ಓವರ್‌ತ್ರೋ ಎಂದು ಪರಿಗಣಿಸಲಾಗುವುದಿಲ್ಲ, ಬದಲಿಗೆ ಅದನ್ನು ಮಿಸ್‌ಫೀಲ್ಡ್ ಎಂದು ಪರಿಗಣಿಸಲಾಗುತ್ತದೆ.
  • ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಸುವ ಚೆಂಡುಗಳ ಗಾತ್ರ ಮತ್ತು ತೂಕಕ್ಕೆ ಕಟ್ಟುನಿಟ್ಟಾದ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಪುರುಷರ ಚೆಂಡು 156-163 ಗ್ರಾಂ ತೂಕವಿರಬೇಕು. ಹಾಗೆಯೇ ಮಹಿಳೆಯರ ಚೆಂಡು 142-149 ಗ್ರಾಂ ತೂಕವಿರಬೇಕು.
  • ಅದೇ ರೀತಿ, ಟಿ20 ಪಂದ್ಯಗಳಲ್ಲಿ ಇನ್ನಿಂಗ್ಸ್ ವಿರಾಮದ ಸಮಯವನ್ನು 15 ನಿಮಿಷಗಳಿಗೆ ನಿಗದಿಪಡಿಸಲಾಗಿದೆ. ಸಮಯ ವ್ಯರ್ಥವಾಗುವ ಸಂದರ್ಭಗಳಲ್ಲಿ, ಇದನ್ನು ಕನಿಷ್ಠ 10 ನಿಮಿಷಗಳವರೆಗೆ ಕಡಿಮೆ ಮಾಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Thu, 1 October 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us