ಐಸಿಸಿ ಟೆಸ್ಟ್ ಬ್ಯಾಟರ್​ಗಳ ರ‍್ಯಾಂಕಿಂಗ್ ಪ್ರಕಟ

ICC Test Rankings: ಐಸಿಸಿ ಟೆಸ್ಟ್ ಬ್ಯಾಟರ್​ಗಳ ನೂತನ ಶ್ರೇಯಾಂಕ ಪಟ್ಟಿ ಪ್ರಕಟವಾಗಿದೆ. ಪ್ರಕಟಗೊಂಡಿರುವ ನೂತನ ಟಾಪ್-10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಇಬ್ಬರು ಬ್ಯಾಟರ್​ಗಳು ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ, ಕ್ರೀಡಾಭಿಮಾನಿಗಳಿಗೆ ಅಚ್ಚರಿ ಮೂಡಿಸುವಂತೆ ಟಾಪ್-5 ಶ್ರೇಯಾಂಕದಲ್ಲಿ ಭಾರತದ ಯಾವುದೇ ಒಬ್ಬ ಬ್ಯಾಟರ್ ಕೂಡ ಸ್ಥಾನ ಪಡೆಯಲು ಯಶಸ್ವಿಯಾಗಿಲ್ಲ.

ಐಸಿಸಿ ಟೆಸ್ಟ್ ಬ್ಯಾಟರ್​ಗಳ ರ‍್ಯಾಂಕಿಂಗ್ ಪ್ರಕಟ
Icc Rankings

Updated on: Aug 20, 2026 | 11:30 AM

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪ್ರಕಟಿಸಿರುವ ನೂತನ ಪುರುಷರ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರಿ ಬದಲಾವಣೆಯಾಗಿದೆ. ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ, ಇಂಗ್ಲೆಂಡ್‌ನ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್ ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

ಡಾರ್ವಿನ್‌ನಲ್ಲಿ ಬಾಂಗ್ಲಾದೇಶ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 9 ವಿಕೆಟ್‌ಗಳ ಆಘಾತಕಾರಿ ಸೋಲು ಅನುಭವಿಸಿತ್ತು. ಈ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ಟ್ರಾವಿಸ್ ಹೆಡ್ (22 ಮತ್ತು 17 ರನ್) ವೈಫಲ್ಯ ಅನುಭವಿಸಿದರು.

ಇದರ ಪರಿಣಾಮವಾಗಿ ಟ್ರಾವಿಸ್ ಹೆಡ್​ ರೇಟಿಂಗ್ ಪಾಯಿಂಟ್ಸ್ ಕಳೆದುಕೊಂಡು, ಒಮ್ಮೆಲೇ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹೆಡ್ ಅವರ ಈ ಹಿನ್ನಡೆಯು ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಯಾವುದೇ ಪಂದ್ಯ ಆಡದಿದ್ದರೂ ಅಗ್ರಸ್ಥಾನಕ್ಕೇರಲು ದಾರಿ ಮಾಡಿಕೊಟ್ಟಿದೆ.

ಬೂಮ್ ಬೂಮ್ ಬ್ರೂಕ್:

ಹ್ಯಾರಿ ಬ್ರೂಕ್ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕದ ಅಗ್ರಸ್ಥಾನಕ್ಕೇರುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಸದ್ಯ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕದಲ್ಲಿ ಇಂಗ್ಲೆಂಡ್​ನ ಹ್ಯಾರಿ ಬ್ರೂಕ್ ಮೊದಲ ಸ್ಥಾನದಲ್ಲಿದ್ದರೆ, ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ.

ಟಾಪ್-5 ನಲ್ಲಿಲ್ಲ ಟೀಮ್ ಇಂಡಿಯಾ ದಾಂಡಿಗರು!

ಐಸಿಸಿ ಪ್ರಕಟಿಸಿರುವ ನೂತನ ಟೆಸ್ಟ್ ಬ್ಯಾಟರ್​ ಶ್ರೇಯಾಂಕದ ಟಾಪ್- 5 ಸ್ಥಾನಗಳಲ್ಲಿ ಈ ಬಾರಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಕಾಣಿಸಿಕೊಂಡಿಲ್ಲ. ಆದರೆ, ಒಟ್ಟಾರೆ ಟಾಪ್-10 ಪಟ್ಟಿಯಲ್ಲಿ ಭಾರತದ ಇಬ್ಬರು ಯುವ ತಾರೆಗಳು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಏಕದಿನ ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಹೆಸರಿಸಿದ ರಾಬಿನ್ ಉತ್ತಪ್ಪ

ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್ 743 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ 7ನೇ ಸ್ಥಾನದಲ್ಲಿದ್ದರೆ, ಸ್ಫೋಟಕ ಓಪನರ್ ಯಶಸ್ವಿ ಜೈಸ್ವಾಲ್ 733 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಐಸಿಸಿ ಟೆಸ್ಟ್ ಬ್ಯಾಟರ್​ ಶ್ರೇಯಾಂಕ (ಆಗಸ್ಟ್ 19, 2026)

ಸ್ಥಾನ ಆಟಗಾರ ದೇಶ ರೇಟಿಂಗ್ ಪಾಯಿಂಟ್ಸ್
1 ಹ್ಯಾರಿ ಬ್ರೂಕ್ ಇಂಗ್ಲೆಂಡ್ 852
2 ಜೋ ರೂಟ್ ಇಂಗ್ಲೆಂಡ್ 840
3 ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ 833
4 ಟ್ರಾವಿಸ್ ಹೆಡ್ ಆಸ್ಟ್ರೇಲಿಯಾ 819
5 ಟೆಂಬಾ ಬವುಮಾ ಸೌತ್ ಆಫ್ರಿಕಾ 775
6 ಕಮಿಂದು ಮೆಂಡಿಸ್ ಶ್ರೀಲಂಕಾ 744
7 ಶುಭ್‌ಮನ್ ಗಿಲ್ ಭಾರತ 743
8 ರಚಿನ್ ರವೀಂದ್ರ ನ್ಯೂಝಿಲೆಂಡ್ 740
9 ಯಶಸ್ವಿ ಜೈಸ್ವಾಲ್ ಭಾರತ 733
10 ಬಾಬರ್ ಆಝಂ ಪಾಕಿಸ್ತಾನ್ 716

 

 

Loading...
Unable to load recommendations.
Follow Us