IND vs PAK: ಭಾರತ- ಪಾಕ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ದುಬೈ ಪಿಚ್​ನಲ್ಲಿ ಯಾರಿಗೆ ಮೇಲುಗೈ?

IND vs PAK, Dubai pitch, Weather report: 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಕಾರಣ ಭಾರತ ವಿರುದ್ಧದ ಪಂದ್ಯ ಅತ್ಯಂತ ಮುಖ್ಯ. ಇತ್ತ ಬಾಂಗ್ಲಾದೇಶ ವಿರುದ್ಧ ಗೆದ್ದಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆದ್ದರೆ ಸುಲಭವಾಗಿ ಸೆಮಿಫೈನಲ್​ಗೇರಲಿದೆ. ದುಬೈನಲ್ಲಿ ನಡೆಯುವ ಈ ಪಂದ್ಯಕ್ಕೆ ಹವಾಮಾನ ಅನುಕೂಲಕರವಾಗಿದೆ.

IND vs PAK: ಭಾರತ- ಪಾಕ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ? ದುಬೈ ಪಿಚ್​ನಲ್ಲಿ ಯಾರಿಗೆ ಮೇಲುಗೈ?
ಭಾರತ- ಪಾಕಿಸ್ತಾನ

Updated on: Feb 22, 2025 | 9:43 PM

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸೋತಿರುವ ಆತಿಥೇಯ ಪಾಕಿಸ್ತಾನ ತಂಡ ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಬೇಕೆಂದರೆ ಟೀಂ ಇಂಡಿಯಾ ವಿರುದ್ಧ ಗೆಲ್ಲಲೇಬೇಕು. ಫೆಬ್ರವರಿ 23 ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗುತ್ತಿವೆ. ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದ್ದ ಭಾರತ, ಗ್ರೂಪ್ ಎ ನಲ್ಲಿ ಎರಡನೇ ಸ್ಥಾನದಲ್ಲಿದ್ದರೆ ಪಾಕಿಸ್ತಾನ ತಂಡ ಕೊನೆಯ ಸ್ಥಾನದಲ್ಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ದುಬೈ ಪಿಚ್ ಯಾರಿಗೆ ಹೆಚ್ಚು ಸಹಕಾರಿಯಾಗಲಿದೆ? ಪಂದ್ಯದ ದಿನ ಅಲ್ಲಿನ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ

ಹವಾಮಾನ ಮುನ್ಸೂಚನೆ

ಫೆಬ್ರವರಿ 23 ರಂದು ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಪ್ರೇಕ್ಷಕರು ಇಡೀ ಪಂದ್ಯವನ್ನು ಆನಂದಿಸಬಹುದು. ಮಧ್ಯಾಹ್ನದ ವೇಳೆಗೆ ಬಯಲು ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಬಹುದು. ಭಾನುವಾರ ದುಬೈನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ದುಬೈ ಪಿಚ್ ವರದಿ

ದುಬೈ ಪಿಚ್ ನಿಧಾನಗತಿಯ ಪಿಚ್ ಆಗಿರುವ ಕಾರಣ ಇಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಈ ಪಿಚ್‌ನಲ್ಲಿ ಹೊಸ ಚೆಂಡು ವೇಗದ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಪಂದ್ಯ ಮುಂದುವರೆದಂತೆ, ಸ್ಪಿನ್ನರ್‌ಗಳು ಮೇಲುಗೈ ಸಾಧಿಸಲಿದ್ದಾರೆ. ಹೀಗಾಗಿ ಪಂದ್ಯದ ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ಹರ್ಷಿತ್ ರಾಣಾ ಪಿಚ್‌ನ ಸಂಪೂರ್ಣ ಲಾಭ ಪಡೆಯಬಹುದು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ಶಮಿ 5 ವಿಕೆಟ್ ಮತ್ತು ರಾಣಾ 3 ವಿಕೆಟ್ ಕಬಳಿಸಿದ್ದರು. ಪಾಕಿಸ್ತಾನ ಮೊದಲು ಬೌಲಿಂಗ್ ಮಾಡಿದರೆ ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರಾವ್ಸ್ ಅದರ ಸಂಪೂರ್ಣ ಲಾಭ ಪಡೆಯಬಹುದು. ಅಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳ ನಡುವೆ ಟಾಸ್ ಮುಖ್ಯವಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಸ್ಪಿನ್ನರ್‌ಗಳಿಗೆ ಪಿಚ್ ನೆರವಾಗಲಿದೆ.

ಉಭಯ ತಂಡಗಳು

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್.

ಪಾಕಿಸ್ತಾನ ತಂಡ: ಇಮಾಮ್ ಉಲ್ ಹಕ್, ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ನಾಯಕ ಮತ್ತು ವಿಕೆಟ್ ಕೀಪರ್), ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾನ್, ಕಮ್ರಾನ್ ಗುಲಾಮ್ ಮತ್ತು ಫಹೀಮ್ ಅಶ್ರಫ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us