ವಾಟ್ ಎ ಬಾಲ್… ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್

|

Updated on: Dec 26, 2024 | 11:33 AM

Australia vs India, 4th Test: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಇದಾಗ್ಯೂ ಮೂರನೇ ಸೆಷನ್​ನಲ್ಲಿ ಕಂಬ್ಯಾಕ್ ಮಾಡಿರುವ ಟೀಮ್ ಇಂಡಿಯಾ ಒಟ್ಟು 5 ವಿಕೆಟ್​​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತೀಯ ಬೌಲರ್​​ಗಳು ಜಿದ್ದಾಜಿದ್ದಿನ ಪೈಪೋಟಿಗಿಳಿದಿದ್ದಾರೆ.

ಮೆಲ್ಬೋರ್ನ್​ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಡೇಂಜರಸ್ ಬ್ಯಾಟರ್ ಟ್ರಾವಿಸ್ ಹೆಡ್ (0) ಶೂನ್ಯಕ್ಕೆ ಔಟಾಗಿದ್ದಾರೆ. ಮಾರ್ನಸ್ ಲಾಬುಶೇನ್ (72) ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ ಹೆಡ್ ಅವರನ್ನು 3ನೇ ಎಸೆತದಲ್ಲಿ ಬುಮ್ರಾ ಕ್ಲೀನ್ ಬೌಲ್ಡ್ ಮಾಡಿದರು.

ಜಸ್​ಪ್ರೀತ್ ಬುಮ್ರಾ ಎಸೆದ 67ನೇ ಓವರ್​ನ ಮೂರನೇ ಎಸೆತವನ್ನು ಆಫ್ ಸೈಡ್ ಆಫ್ ಸ್ಟಂಪ್​ನಿಂದ ದೂರವಾಗಿ ಸಾಗಲಿದೆ ಎಂದು ಭಾವಿಸಿ ಹೆಡ್ ಬಿಟ್ಟಿದ್ದರು. ಆದರೆ ಚೆಂಡು ತುಸು ಸ್ವಿಂಗ್ ಪಡೆದು ಬೇಲ್ಸ್​ ಅನ್ನು ಎಗರಿಸಿತು. ಇತ್ತ ಡೇಂಜರಸ್ ಟ್ರಾವಿಸ್ ಹೆಡ್ ವಿಕೆಟ್ ಸಿಗುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಸಂಭ್ರಮಿಸಿದರು.

ಇದಕ್ಕೂ ಮುನ್ನ ಅಡಿಲೇಡ್ ಹಾಗೂ ಬ್ರಿಸ್ಬೇನ್​ನಲ್ಲಿ ನಡೆದ 2ನೇ ಮತ್ತು 3ನೇ ಟೆಸ್ಟ್​ ಪಂದ್ಯಗಳಲ್ಲಿ ಟ್ರಾವಿಸ್ ಹೆಡ್ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಇದೇ ಫಾರ್ಮ್​ನೊಂದಿಗೆ ಮೆಲ್ಬೋರ್ನ್​ನಲ್ಲೂ ಕಣಕ್ಕಿಳಿದ ಹೆಡ್ ಮೊದಲ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡುತ್ತಿರುವ ಆಸ್ಟ್ರೇಲಿಯಾ ಪರ ಆರಂಭಿಕರಾದ ಸ್ಯಾಮ್ ಕೊನ್​ಸ್ಟಾಸ್ (60) ಹಾಗೂ ಉಸ್ಮಾನ್ ಖ್ವಾಜಾ (57) ಅರ್ಧಶತಕ ಬಾರಿಸಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಲಾಬುಶೇನ್ 72 ರನ್​ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು 70 ಓವರ್​ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 248 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.