IND vs BAN: 40 ಎಸೆತಗಳಲ್ಲಿ ಚೊಚ್ಚಲ ಶತಕ..! ರನ್​ಗಳ ಸುನಾಮಿ ಎಬ್ಬಿಸಿದ ಸಂಜು ಸ್ಯಾಮ್ಸನ್

|

Updated on: Oct 12, 2024 | 8:43 PM

Sanju Samson: ಹೈದರಾಬಾದ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸಂಜು ಸಿಡಿಸಿದ ಚೊಚ್ಚಲ ಶತಕ ಇದಾಗಿದ್ದು,ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು.

IND vs BAN: 40 ಎಸೆತಗಳಲ್ಲಿ ಚೊಚ್ಚಲ ಶತಕ..! ರನ್​ಗಳ ಸುನಾಮಿ ಎಬ್ಬಿಸಿದ ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್
Follow us on

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್​ಮನ್ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸಂಜು ಸಿಡಿಸಿದ ಚೊಚ್ಚಲ ಶತಕ ಇದಾಗಿದ್ದು,ಕೇವಲ 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಪರ ಎರಡನೇ ವೇಗದ ಶತಕ ದಾಖಲಿಸಿದ ಹೆಗ್ಗಳಿಕೆಗೂ ಸಂಜು ಭಾಜನರಾಗಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ ಸಂಜು 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್​ಗಳನ್ನು ಸಹ ಸಿಡಿಸಿದ್ದಾರೆ.

ಸಿಡಿಲಬ್ಬರದ ಶತಕ ಸಿಡಿಸಿದ ಸಂಜು

ವಾಸ್ತವವಾಗಿ ಬಹಳ ದಿನಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ಸಂಜು ಸ್ಯಾಮ್ಸನ್​ಗೆ ಮೂರನೇ ಟಿ20 ಪಂದ್ಯದ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಅಬ್ಬರಿಸಿದ್ದರಷ್ಟೇ ಸಂಜುಗೆ ಮುಂದಿನ ಸರಣಿಯಲ್ಲಿ ಅವಕಾಶ ಸಿಗುತ್ತಿತ್ತು. ಇಲ್ಲದಿದ್ದರೆ ಸಂಜು ಸ್ಯಾಮ್ಸನ್​ರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಭಾಗಶಃ ಅಂತ್ಯವಾಗುತ್ತಿತ್ತು. ಆದರೆ ತನಗೆ ಸಿಕ್ಕಿದ ಕೊನೆಯ ಅವಕಾಶವನ್ನು ಸ್ಮರಣೀಯಗೊಳಿಸಿದ ಸಂಜು ದಾಖಲೆಯ ಶತಕ ಸಿಡಿಸಿದರು. ಈ ಮೂಲಕ ತನ್ನ ಮೇಲೆ ನಾಯಕ ಸೂರ್ಯ ಇಟ್ಟಿದ್ದ ನಂಬಿಕೆಯನ್ನೂ ಸಹ ಉಳಿಸಿಕೊಂಡರು.

5 ಎಸೆತಗಳಲ್ಲಿ 5 ಸಿಕ್ಸರ್

ಆರಂಭದಿಂದಲೂ ಅಬ್ಬರಿಸಲು ಶುರು ಮಾಡಿದ್ದ ಸಂಜು ಒಂದೇ ಗೇರ್​ನಲ್ಲಿ ಬ್ಯಾಟ್ ಬೀಸಿದರು. ಹೀಗಾಗಿ ಸಂಜು ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಅಭಿಷೇಕ್ ವಿಕೆಟ್ ಪತನದ ಬಳಿಕ ಜೊತೆಯಾದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಬಾಂಗ್ಲಾ ಬೌಲರ್​ಗಳ ಬೆವರಿಳಿಸಿದರು. ನಾಯಕನಿಂದ ಉತ್ತಮ ಬೆಂಬಲ ಪಡೆದ ಸಂಜು, ರಿಶಾದ್ ಹೊಸೈನ್ ಬೌಲ್ ಮಾಡಿದ ಏಳನೇ ಓವರ್​ನಲ್ಲಿ 3 ಎಸೆತಗಳಲ್ಲಿ 2 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸುವ ಮೂಲಕ ತಮ್ಮ ಅರ್ಧಶತಕ ಪೂರೈಸಿದರು. ಇದು ಬಾಂಗ್ಲಾದೇಶದ ವಿರುದ್ಧ ಈ ಸ್ವರೂಪದಲ್ಲಿ ಭಾರತದ ಪರ ಸಿಡಿದ ಮೊದಲ ವೇಗದ ಅರ್ಧಶತಕವಾಗಿದೆ. ಅರ್ಧಶತಕದ ನಂತರ ಮತ್ತಷ್ಟು ರೌದ್ರಾವತಾರ ತಾಳಿದ ಸಂಜು ರಿಷಾದ್ ಹೊಸೇನ್ ಎಸೆದ 10ನೇ ಓವರ್​ನಲ್ಲಿ ಸತತ 5 ಎಸೆತಗಳಲ್ಲಿ 5 ಸಿಕ್ಸರ್ ಬಾರಿಸಿ ಸಂಚಲನ ಮೂಡಿಸಿದರು. ಆ ನಂತರ ಕೇವಲ 40 ಎಸೆತಗಳಲ್ಲಿ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು.

ಹಲವು ದಾಖಲೆ ಬರೆದ ಸಂಜು

ಸಂಜು ಸಿಡಿಸಿದ ಈ ಶತಕ  ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸಂಜು ಭಾರತದ ಪರ ದಾಖಲಾದ ಎರಡನೇ ವೇಗದ ಶತಕವಾಗಿದೆ. 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿ ಈ ದಾಖಲೆ ಇದೆ. ಇದಲ್ಲದೆ ಈ ಹಿಂದೆ 45 ಎಸೆತಗಳಲ್ಲಿ ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದ ಸೂರ್ಯಕುಮಾರ್ ಯಾದವ್​ರನ್ನು ಸಂಜು ಸ್ಯಾಮ್ಸನ್ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲ, ಬಾಂಗ್ಲಾದೇಶ ವಿರುದ್ಧ ಟಿ20 ಅಂತಾರಾಷ್ಟ್ರೀಯ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಿದ್ದಾರೆ. 46 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 111 ರನ್‌ಗಳ ಅದ್ಭುತ ಇನ್ನಿಂಗ್ಸ್‌ ಆಡಿದ ಸಂಜು ಅಂತಿಮವಾಗಿ ಔಟಾದರು. ಈ ವೇಳೆ ಸಂಜು, ನಾಯಕ ಸೂರ್ಯ ಅವರೊಂದಿಗೆ ಎರಡನೇ ವಿಕೆಟ್‌ಗೆ ಕೇವಲ 70 ಎಸೆತಗಳಲ್ಲಿ 173 ರನ್‌ಗಳ ಜೊತೆಯಾಟ ಹಂಚಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 pm, Sat, 12 October 24