IND vs ENG: 145 ರನ್​ಗಳಿಗೆ ಇಂಗ್ಲೆಂಡ್ ಆಲೌಟ್; ಭಾರತಕ್ಕೆ 192 ರನ್​ಗಳ ಗೆಲುವಿನ ಗುರಿ

|

Updated on: Feb 25, 2024 | 4:34 PM

IND vs ENG: ಇಂಗ್ಲೆಂಡ್ ನೀಡಿರುವ 192 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ  40 ರನ್ ಕಲೆಹಾಕಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕ್ರಮವಾಗಿ 24, 16 ರನ್ ಕಲೆಹಾಕಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಗೆಲ್ಲಲು ಇನ್ನು 152 ರನ್​ಗಳ ಅಗತ್ಯವಿದೆ.

IND vs ENG: 145 ರನ್​ಗಳಿಗೆ ಇಂಗ್ಲೆಂಡ್ ಆಲೌಟ್; ಭಾರತಕ್ಕೆ 192 ರನ್​ಗಳ ಗೆಲುವಿನ ಗುರಿ
ಟೀಂ ಇಂಡಿಯಾ
Follow us on

ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England)  ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಆಡಿ ಮುಗಿಸಿರುವ ಇಂಗ್ಲೆಂಡ್ ತಂಡ 145 ರನ್​ಗಳಿಗೆ ಆಲೌಟ್ ಆಗಿದ್ದು, ಆತಿಥೇಯ ಭಾರತಕ್ಕೆ 192 ರನ್​ಗಳ ಗೆಲುವಿನ ಗುರಿ ನೀಡಿದೆ. ಈ ಮೂಲಕ ರಾಂಚಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಪಂದ್ಯದ ಮೂರನೇ ದಿನದಂದು ಧ್ರುವ್ ಜುರೆಲ್ (Dhruv Jurel) ಅವರ 90 ರನ್‌ಗಳ ಇನ್ನಿಂಗ್ಸ್ ಆಧಾರದ ಮೇಲೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 307 ರನ್ ಗಳಿಸಿ ಇಂಗ್ಲೆಂಡ್‌ನ ಮುನ್ನಡೆಯನ್ನು ಕೇವಲ 46 ರನ್‌ಗಳಿಗೆ ಸೀಮಿತಗೊಳಿಸಿತು. ಇದಾದ ಬಳಿಕ ರವಿಚಂದ್ರನ್ ಅಶ್ವಿನ್ (R Ashwin) ಮತ್ತು ಕುಲ್ದೀಪ್ ಯಾದವ್ (Kuldeep Yadav) ಜತೆಗೂಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 145 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತ ಪಂದ್ಯ ಹಾಗೂ ಸರಣಿ ಗೆಲ್ಲಲು 192 ರನ್‌ಗಳ ಗುರಿ ಪಡೆದಿದೆ.

ಇಂಗ್ಲೆಂಡ್ ಆರಂಭ ಕಳಪೆ

46 ರನ್​ಗಳ ಮುನ್ನಡೆಯೊಂದಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್​ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಆರಂಭಿಕ ಬೆನ್ ಡಕೆಟ್ ಕೇವಲ 15 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ಅವರ ನಂತರ ಬಂದ ಒಲಿ ಪೋಪ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದ ಪೋಪ್, ಎರಡನೇ ಇನ್ನಿಂಗ್ಸ್​ನಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಅಜೇಯ ಶತಕ ಸಿಡಿಸಿದ್ದ ರೂಟ್​ಗೆ ಎರಡನೇ ಇನ್ನಿಂಗ್ಸ್​ನಲ್ಲಿ 11 ರನ್ ದಾಟಿ ಮುಂದೆ ಹೋಗಲು ಸಾಧ್ಯವಾಗಲಿಲ್ಲ.

IND vs ENG: ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಜೇಮ್ಸ್ ಆಂಡರ್ಸನ್ ದಾಖಲೆ ಮುರಿದ ಶೋಯೆಬ್ ಬಶೀರ್..!

60 ರನ್ ಸಿಡಿಸಿದ ಕ್ರೌಲಿ

ಆದರೆ ಒಂದರ ಹಿಂದೆ ಒಂದರಂತೆ ವಿಕೆಟ್ ಪತನದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಆರಂಭಿಕ ಝಾಕ್ ಕ್ರೌಲಿ 91 ಎಸೆತಗಳಲ್ಲಿ 60 ರನ್​ಗಳ ಇನ್ನಿಂಗ್ಸ್ ಆಡಿದರು. ಈ ಮೂಲಕ ಎರಡನೇ ಇನ್ನಿಂಗ್ಸ್​ನಲ್ಲಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಬೆನ್ ಸ್ಟೋಕ್ಸ್ ಮತ್ತೊಂದು ಕಳಪೆ ಇನ್ನಿಂಗ್ಸ್ ಆಡುವ ಮೂಲಕ ಸಿಂಗಲ್ ಡಿಜಿಟ್​ಗೆ ವಿಕೆಟ್ ಒಪ್ಪಿಸುವ ತಮ್ಮ ಖಯಾಲಿಯನ್ನು ಮುಂದುವರೆಸಿದರು. ಸ್ಟೋಕ್ಸ್ 4 ರನ್​ಗಳಿಗೆ ಸುಸ್ತಾದರೆ, ಜಾನಿ ಬೈರ್​ಸ್ಟೋವ್ 30 ರನ್​ಗಳ ಕಾಣಿಕೆ ನೀಡಿದರು.

ಇಂಗ್ಲೆಂಡ್​ ಕೊನೆಯ ವಿಕೆಟ್

ಅಶ್ವಿನ್​ಗೆ 5 ವಿಕೆಟ್

ಕೆಳ ಹಂತದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್ 17 ರನ್​ಗಳ ಇನ್ನಿಂಗ್ಸ್ ಆಡಿದನ್ನು ಬಿಟ್ಟರೆ, ಉಳಿದವರು ಒಂದಂಕಿಗೆ ಪೆವಿಲಿಯನ್ ಸೇರಿಕೊಂಡರು. ಹೀಗಾಗಿ ಇಂಗ್ಲೆಂಡ್ ತಂಡ ಬಿಗ್ ಟಾರ್ಗೆಟ್ ನೀಡುವ ಅವಕಾಶದಿಂದ ವಂಚಿತವಾಯಿತು. ಭಾರತದ ಪರ ಮಾರಕ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ ಮತ್ತೊಂದು 5 ವಿಕೆಟ್​ಗಳ ಸಾಧನೆ ಮಾಡಿದರೆ, ಕುಲ್ದೀಪ್ ಯಾದವ್ ಕೂಡ 4 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಯಿತು.

ಭಾರತದ 2ನೇ ಇನ್ನಿಂಗ್ಸ್ ಆರಂಭ

ಇಂಗ್ಲೆಂಡ್ ನೀಡಿರುವ 192 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಮೂರನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೆ  40 ರನ್ ಕಲೆಹಾಕಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಕ್ರಮವಾಗಿ 24, 16 ರನ್ ಕಲೆಹಾಕಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಗೆಲ್ಲಲು ಇನ್ನು 152 ರನ್​ಗಳ ಅಗತ್ಯವಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:59 pm, Sun, 25 February 24