ಟೀಮ್ ಇಂಡಿಯಾ ವಿರುದ್ಧ ‘ಬೆಥೆಲ್’ ಪ್ರಯೋಗ!

India vs England ODI: ಭಾರತ ಮತ್ತು ಇಂಗ್ಲೆಂಡ್ ನಡುವಣ ಏಕದಿನ ಸರಣಿ ಇಂದಿನಿಂದ ಶುರುವಾಗಲಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಇಂಗ್ಲೆಂಡ್ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕನಾಗಿ ಕಾಣಿಸಿಕೊಂಡಿರುವುದು ಎಡಗೈ ದಾಂಡಿಗ ಜೇಕಬ್ ಬೆಥೆಲ್ ಎಂಬುದು ವಿಶೇಷ.

ಟೀಮ್ ಇಂಡಿಯಾ ವಿರುದ್ಧ ಬೆಥೆಲ್ ಪ್ರಯೋಗ!
Jacob Bethell
Image Credit source: GettyImages

Updated on: Jul 14, 2026 | 8:07 AM

ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ 4-0 ಅಂತರದ ಭರ್ಜರಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡ, ಇದೀಗ ಏಕದಿನ ಸಮರಕ್ಕೆ ಸಜ್ಜಾಗಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಇಂದಿನಿಂದ (ಜುಲೈ 14) ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗುತ್ತಿದ್ದು, ಈ ಪಂದ್ಯಕ್ಕಾಗಿ ಆತಿಥೇಯ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲೆವೆನ್​ ಪ್ರಕಟಿಸಿದೆ.

ಈ ಪ್ಲೇಯಿಂಗ್ ಇಲೆವೆನ್​ನಲ್ಲಿ ಆರಂಭಿಕರಾಗಿ ಕಾಣಿಸಿಕೊಂಡಿರುವುದು ಯುವ ದಾಂಡಿಗ ಜೇಕಬ್ ಬೆಥೆಲ್ ಹಾಗೂ ಬೆನ್ ಡಕೆಟ್. ಅಂದರೆ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಇಂಗ್ಲೆಂಡ್ ಅಚ್ಚರಿಯ ಪ್ರಯೋಗವೊಂದಕ್ಕೆ ಕೈಹಾಕಿದೆ.

ಜೇಕಬ್ ಬೆಥೆಲ್ ಆರಂಭಿಕ!

ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದ 22 ವರ್ಷದ ಎಡಗೈ ಆಟಗಾರ ಜೇಕಬ್ ಬೆಥೆಲ್ ಇದೀಗ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಇಂಗ್ಲೆಂಡ್ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅನುಭವಿ ಆಟಗಾರ ಬೆನ್ ಡಕೆಟ್ ಅವರೊಂದಿಗೆ ಅವರು ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಡಕೆಟ್ ಅವರೊಂದಿಗೆ ಇನಿಂಗ್ಸ್ ಆರಂಭಿಸುತ್ತಿರುವ 5ನೇ ಓಪನರ್ ಬೆಥೆಲ್ ಆಗಿದ್ದಾರೆ. ಟಾಪ್ ಆರ್ಡರ್‌ನಲ್ಲಿ ಬ್ಯಾಟ್ ಬೀಸುವುದು ಬೆಥೆಲ್ ಅವರ ವೈಯಕ್ತಿಕ ಆಯ್ಕೆಯೂ ಆಗಿರುವುದರಿಂದ ಈ ಹೊಸ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡವು ಫಿಲ್ ಸಾಲ್ಟ್, ಜೇಮಿ ಸ್ಮಿತ್ ಮತ್ತು ವಿಲ್ ಜಾಕ್ಸ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಹಲವು ಪ್ರಯೋಗಗಳನ್ನು ನಡೆಸಿತ್ತು. ಆದರೆ, ಈ ಮೂವರಿಂದಲೂ ನಿರೀಕ್ಷಿತ ಮಟ್ಟದ ಸ್ಥಿರ ಪ್ರದರ್ಶನ ಮೂಡಿಬಂದಿರಲಿಲ್ಲ.

ಹೀಗಾಗಿ, ತಂಡಕ್ಕೆ ಬಲಿಷ್ಠ ಆರಂಭ ಒದಗಿಸುವ ನಿಟ್ಟಿನಲ್ಲಿ ಇಂಗ್ಲೆಂಡ್ ಮ್ಯಾನೇಜ್‌ಮೆಂಟ್ ಇದೀಗ ಯುವ ಆಟಗಾರ ಜೇಕಬ್ ಬೆಥೆಲ್ ಅವರಿಗೆ ಓಪನಿಂಗ್ ಜವಾಬ್ದಾರಿಯನ್ನು ವಹಿಸಿದೆ. ಈ ಮೂಲಕ ಇಂಗ್ಲೆಂಡ್ ತನ್ನ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೊಸದೊಂದು ರಣತಂತ್ರಕ್ಕೆ ಕೈಹಾಕಿದೆ.

ರೂಟ್ ಕಂಬ್ಯಾಕ್: ಜೋಸ್ ಬಟ್ಲರ್‌ ‘ದ್ವಿಶತಕ’

ಸುಮಾರು ಆರು ತಿಂಗಳ ಸುದೀರ್ಘ ಬಿಡುವಿನ ಬಳಿಕ ಅನುಭವಿ ಬ್ಯಾಟರ್ ಜೋ ರೂಟ್ ಇಂಗ್ಲೆಂಡ್ ಏಕದಿನ ತಂಡಕ್ಕೆ ಮರಳಿದ್ದಾರೆ.

ಇನ್ನು ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಪಾಲಿಗೆ ಇದು ಅತ್ಯಂತ ವಿಶೇಷ ಪಂದ್ಯವಾಗಿದ್ದು, ಅವರು ಇಂಗ್ಲೆಂಡ್ ಪರ ತಮ್ಮ 200ನೇ ಏಕದಿನ ಪಂದ್ಯವನ್ನು ಆಡುತ್ತಿದ್ದಾರೆ.

ಇಂಗ್ಲೆಂಡ್ ಪ್ಲೇಯಿಂಗ್ 11: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

ಬಲಿಷ್ಠ ಭಾರತ ತಂಡದ ಸವಾಲು!

ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡಿದ್ದ ಭಾರತ ತಂಡಕ್ಕೆ ಇದೀಗ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್​ಪ್ರೀತ್ ಬುಮ್ರಾ ಅವರ ಸೇರ್ಪಡೆಯಿಂದ ದೊಡ್ಡ ಬಲ ಬಂದಿದೆ.

ಇದನ್ನೂ ಓದಿ: ದಿಗ್ಗಜರ ಪುನರ್ಮಿಲನ: ಇದುವೇ ಟೀಮ್ ಇಂಡಿಯಾದ ನೈಜ ಬಲ

ಶುಭ್‌ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ, ಏಕದಿನ ಮಾದರಿಯಲ್ಲಿ ಸದ್ಯ ವಿಶ್ವದ ನಂ.1 ಶ್ರೇಯಾಂಕ ಹೊಂದಿದ್ದು, ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

 

Follow Us