ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ (India vs West Indies), ಟೆಸ್ಟ್ ಸರಣಿಯೊಂದಿಗೆ ಈ ಪ್ರವಾಸವನ್ನು ಆರಂಭಿಸಿದೆ. ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿರುವ ರೋಹಿತ್ (Rohit Sharma) ಬಳಗ ಟೆಸ್ಟ್ ಸರಣಿ ಗೆಲ್ಲುವ ಫೆವರೆಟ್ ತಂಡವೆನಿಸಿಕೊಂಡಿದೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿ ಮುಗಿದ ಬಳಿಕ ಉಭಯ ತಂಡಗಳ ನಡುವೆ ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿ ನಡೆಯಲ್ಲಿದೆ. ಆಗಸ್ಟ್ 13 ರಂದು ನಡೆಯುವ ಕೊನೆ ಟಿ20 ಪಂದ್ಯದೊಂದಿಗೆ ವಿಂಡೀಸ್ ಪ್ರವಾಸಕ್ಕೆ ಅಂತ್ಯ ಹಾಡಲಿರುವ ರೋಹಿತ್ ಬಳಗ ತಾಯ್ನಾಡಿಗೆ ವಾಪಸ್ಸಾಗಲಿದೆ. ಆ ಬಳಿಕ ವಿಶ್ವಕಪ್ (World Cup) ದೃಷ್ಟಿಯಿಂದ ಹಿರಿಯ ತಂಡ ವಿಶ್ರಾಂತಿಗೆ ಜಾರಿದರೆ, ಭಾರತದ ಯುವ ಪಡೆ ಮೂರು ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ (IND vs IRE) ಪ್ರವಾಸ ಮಾಡಲಿದೆ.
ಮೇಲೆ ಹೇಳಿದಂತೆ ವಿಂಡೀಸ್ ಪ್ರವಾಸದ ಬಳಿಕ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಐರ್ಲೆಂಡ್ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಒಟ್ಟು 3 ಪಂದ್ಯಗಳು ನಡೆಯಲಿವೆ. ಸತತವಾಗಿ ಕ್ರಿಕೆಟ್ ಆಡುತ್ತಿರುವ ಖಾಯಂ ನಾಯಕ ರೋಹಿತ್ ಶರ್ಮಾ ಮುಂಬರುವ ಏಷ್ಯಾಕಪ್ ಹಾಗೂ ವಿಶ್ವಕಪ್ ಹಿನ್ನೆಲೆಯಲ್ಲಿ ಈ ಸರಣಿಯಿಂದ ವಿಶ್ರಾಂತಿ ತೆಗೆದುಕೊಳ್ಳುವುದು ಖಚಿತವಾಗಿದೆ. ಹೀಗಾಗಿ ಈ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬ ಪ್ರಶ್ನೆ ಎದ್ದಿದೆ.
IND vs IRE: ದ್ರಾವಿಡ್ಗೆ ವಿಶ್ರಾಂತಿ; ಐರ್ಲೆಂಡ್ ಪ್ರವಾಸಕ್ಕೆ ಹಂಗಾಮಿ ಮುಖ್ಯ ಕೋಚ್ ಆಯ್ಕೆ
ರೋಹಿತ್, ವಿರಾಟ್ ಕೊಹ್ಲಿ ಮಾತ್ರವಲ್ಲದೆ ಐರ್ಲೆಂಡ್ ವಿರುದ್ಧದ ಈ ಸರಣಿಯಿಂದ ಟೀಂ ಇಂಡಿಯಾ ಟಿ20 ನಾಯಕ ಹಾರ್ದಿಕ್ ಪಾಂಡ್ಯ, ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಕೂಡ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ನಾಯಕತ್ವದ ಸಂದಿಗ್ಧತೆ ಹೆಚ್ಚಿದೆ.
ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಪ್ರಮುಖ ಆಟಗಾರ. ಬೌಲಿಂಗ್, ಫೀಲ್ಡಿಂಗ್ ಮತ್ತು ಬ್ಯಾಟಿಂಗ್ ಹೀಗೆ ಮೂರೂ ರಂಗಗಳಲ್ಲಿ ಅವರು ಮಿಂಚಿದ್ದಾರೆ. ಆದ್ದರಿಂದ, ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಬಗ್ಗೆ ಆಯ್ಕೆ ಸಮಿತಿ ಯಾವುದೇ ಅಪಾಯವನ್ನು ತೆಗೆದುಕೊಳ್ಳುವುದಿಲ್ಲ.
ಈ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದ್ದು, ‘ಇಲ್ಲಿಯವರೆಗೆ ಯಾವುದೂ ಖಚಿತವಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯ ನಂತರ ಹಾರ್ದಿಕ್ ಹೇಗಿದ್ದಾರೆ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ವಿಶ್ವಕಪ್ ಹಿನ್ನಲೆಯಲ್ಲಿ ಆಟದ ಒತ್ತಡ ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಅಲ್ಲದೆ, ಹಾರ್ದಿಕ್ ವಿಶ್ವಕಪ್‌ನಲ್ಲಿ ಉಪನಾಯಕರಾಗಲಿದ್ದು, ಅವರನ್ನು ತಾಜಾವಾಗಿರಿಸುವುದು ಮುಖ್ಯ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ಪಾಂಡ್ಯಗೆ ಐರ್ಲೆಂಡ್ ಪ್ರವಾಸದಿಂದ ವಿಶ್ರಾಂತಿ ನೀಡಿದರೆ, ಟೀಂ ಇಂಡಿಯಾದ ನಾಯಕತ್ವ ಯಾರಿಗೆ ಸಿಗಲಿದೆ ಎಂಬುದು ಈಗ ಪ್ರಶ್ನೆಯಾಗಿದೆ. ಒಂದು ವೇಳೆ ಪಾಂಡ್ಯ ಆಡದಿದ್ದಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಬೇರೆಯವರಿಗೆ ತೆರೆದುಕೊಳ್ಳಬಹುದು. ಆದಾಗ್ಯೂ, ಕೆಎಲ್ ರಾಹುಲ್ ಐರ್ಲೆಂಡ್ ಸರಣಿ ಮತ್ತು ಏಷ್ಯಾಕಪ್ನಲ್ಲಿ ಆಡುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ವರದಿಯಾಗಿದೆ. ಹಾಗೆಯೇ ಜಸ್ಪ್ರೀತ್ ಬುಮ್ರಾ ಕೂಡ ಐರ್ಲೆಂಡ್ ಸರಣಿಯಲ್ಲಿ ಆಡುವ ಬಗ್ಗೆ ಖಾತರಿಪಡಿಸಲಾಗಿಲ್ಲ. ಹೀಗಾಗಿ ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಮುಂದೆ ಕಾದುನೋಡಬೇಕಿದೆ.
ಏತನ್ಮಧ್ಯೆ, ಟೀಂ ಇಂಡಿಯಾದ ಐರ್ಲೆಂಡ್ ಪ್ರವಾಸವು ಆಗಸ್ಟ್ 18 ರಿಂದ ಪ್ರಾರಂಭವಾಗಲಿದೆ. ಸರಣಿಯಲ್ಲಿ ಒಟ್ಟು 3 ಪಂದ್ಯಗಳು ಕ್ರಮವಾಗಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿವೆ. ಈ ಸರಣಿಯಲ್ಲಿ ಯುವ ಆಟಗಾರರಿಗೆ ಟೀಂ ಇಂಡಿಯಾ ಅವಕಾಶ ನೀಡಲಿದೆ ಎಂಬ ಚರ್ಚೆ ನಡೆಯುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:07 am, Fri, 21 July 23