IND vs SA: ತಿಂಗಳುಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ ಮೂವರು ಸ್ಟಾರ್ ಕ್ರಿಕೆಟಿಗರು

|

Updated on: Dec 01, 2023 | 4:52 PM

IND vs SA: ಮೂರು ಸರಣಿಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ಸರಣಿಯೊಂದಿಗೆ ಸುದೀರ್ಘ ಸಮಯದ ನಂತರ ತಂಡದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

IND vs SA: ತಿಂಗಳುಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿದ ಮೂವರು ಸ್ಟಾರ್ ಕ್ರಿಕೆಟಿಗರು
ಭಾರತ ಟೆಸ್ಟ್ ತಂಡ
Follow us on

ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾ (India vs Australia) ಆ ಬಳಿಕ ಮೂರು ಮಾದರಿಯ ಕ್ರಿಕೆಟ್ ಸರಣಿ ಅಡುವ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಉಭಯ ತಂಡಗಳ ನಡುವಿನ ಕದನ ಡಿಸೆಂಬರ್ 10 ರಿಂದ 3 ಪಂದ್ಯಗಳ ಟಿ20 ಸರಣಿಯಿಂದ ಪ್ರಾರಂಭವಾಗಲಿದೆ. ಇದಾದ ಬಳಿಕ 3 ಏಕದಿನ ಪಂದ್ಯಗಳು ನಡೆಯಲಿದ್ದು, ಡಿಸೆಂಬರ್ 26 ರಿಂದ ಉಭಯ ತಂಡಗಳ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಮೂರು ಸರಣಿಗಳಿಗೆ ಬಿಸಿಸಿಐ (BCCI) ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈ ಸರಣಿಯೊಂದಿಗೆ ಸುದೀರ್ಘ ಸಮಯದ ನಂತರ ತಂಡದ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ (KL Rahul, Shreyas Iyer and Jasprit Bumrah) ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ವರ್ಷಗಳ ನಂತರ ಟೆಸ್ಟ್ ತಂಡದಲ್ಲಿ ಬುಮ್ರಾ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಅದೇ ಸಮಯದಲ್ಲಿ, ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಈ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ 2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇದಾದ ಬಳಿಕ ಬೆನ್ನುನೋವಿನಿಂದಾಗಿ ಸುಮಾರು ಒಂದು ವರ್ಷ ಕ್ರಿಕೆಟ್ ಮೈದಾನದಿಂದ ದೂರ ಉಳಿದಿದ್ದರು.

ಜಸ್ಪ್ರೀತ್ ಬುಮ್ರಾ ಇದುವರೆಗೆ ಟೀಂ ಇಂಡಿಯಾ ಪರ 30 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ 128 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 8 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಅದೇ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ 6 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ಈ ಎಲ್ಲ 6 ಪಂದ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಆಡಿದ್ದಾರೆ.

ರಾಹುಲ್ ಮತ್ತು ಶ್ರೇಯಸ್​ಗೂ ಅವಕಾಶ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಭಾರತ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈ ಇಬ್ಬರೂ ಆಟಗಾರರು ಈ ವರ್ಷದ ಫೆಬ್ರವರಿ-ಮಾರ್ಚ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಕೊನೆಯ ಬಾರಿಗೆ ಟೆಸ್ಟ್ ಕ್ರಿಕೆಟ್ ಆಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ) ಮತ್ತು ಪ್ರಸಿದ್ಧ್ ಕೃಷ್ಣ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ