
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಅಸಿತಾ ಫೆರ್ನಾಂಡೋ ನಡುವೆ ತೀವ್ರ ವಾಕ್ಸಮರ ಮತ್ತು ನೂಕಾಟ ನಡೆದಿದೆ. ಕೊಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ಮೊದಲ ದಿನವೇ ಉಭಯ ಆಟಗಾರರು ಮೈದಾನದಲ್ಲೇ ತಲೆಗೆ ತಲೆ ಮುಟ್ಟಿಸಿ ಜಗಳವಾಡಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆರಂಭ ನೀಡಿದ್ದರು. ಪಂದ್ಯದ 17ನೇ ಓವರ್‌ನಲ್ಲಿ ಶ್ರೀಲಂಕಾದ ವೇಗಿ ಅಸಿತಾ ಫೆರ್ನಾಂಡೋ ಬೌಲಿಂಗ್‌ಗೆ ಬಂದಾಗ, ಜೈಸ್ವಾಲ್ ಸತತ ಮೂರು ಮನಮೋಹಕ ಬೌಂಡರಿಗಳನ್ನು ಬಾರಿಸಿ ಅಬ್ಬರಿಸಿದ್ದರು. ಇದರಿಂದ ಫೆರ್ನಾಂಡೋ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಆದರೆ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ಫೆರ್ನಾಂಡೋ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದರು.
ರೌಂಡ್ ದಿ ವಿಕೆಟ್ ಬೌಲಿಂಗ್ ಮಾಡಿದ ಫೆರ್ನಾಂಡೋ ಅವರ ಇನ್-ಸ್ವಿಂಗ್ ಎಸೆತವನ್ನು ಜೈಸ್ವಾಲ್ ಡಿಫೆಂಡ್ ಮಾಡಲು ಪ್ರಯತ್ನಿಸಿದರು. ಈ ವೇಳೆ ಬ್ಯಾಟ್‌ನ ಒಳ ಅಂಚಿಗೆ ಬಡಿದ ಚೆಂಡು ನೇರವಾಗಿ ಸ್ಟಂಪ್ಸ್‌ಗೆ ಅಪ್ಪಳಿಸಿತು.
ರನ್‌ಗಳನ್ನು ಬಿಟ್ಟುಕೊಟ್ಟಿದ್ದ ಸಿಟ್ಟಿನಲ್ಲಿದ್ದ ಅಸಿತಾ ಫೆರ್ನಾಂಡೋ, ವಿಕೆಟ್ ಪಡೆದ ತಕ್ಷಣ ಅತಿಯಾದ ಸಂಭ್ರಮಾಚರಣೆ ನಡೆಸಿ, ಜೈಸ್ವಾಲ್ ಕಡೆಗೆ ನೋಡಿ ಕಟು ಮಾತುಗಳಿಂದ ‘ಸೆಂಡ್-ಆಫ್’ ನೀಡಿದರು.
ಔಟಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದ ಯಶಸ್ವಿ ಜೈಸ್ವಾಲ್, ಅಸಿತಾ ಫೆರ್ನಾಂಡೋ ಮಾತುಗಳನ್ನು ಕೇಳಿ ಅರ್ಧದಲ್ಲೇ ಹಿಂತಿರುಗಿದರು. ಅಲ್ಲದೆ ಬೌಲರ್ ಕಡೆಗೆ ನುಗ್ಗಿ ಬಂದ ಜೈಸ್ವಾಲ್, ನೇರವಾಗಿ ಫೆರ್ನಾಂಡೋ ಅವರ ಮುಖದ ಮುಂದೆಯೇ ನಿಂತರು.
ಇಬ್ಬರೂ ಆಟಗಾರರು ಅತ್ಯಂತ ಹತ್ತಿರ ಬಂದು ಪರಸ್ಪರ ಕೆಟ್ಟ ಪದಗಳಿಂದ ನಿಂದಿಸಿಕೊಂಡರು. ಕೋಪದ ಉತ್ತುಂಗದಲ್ಲಿದ್ದ ಜೈಸ್ವಾಲ್, ತಮ್ಮ ಹೆಲ್ಮೆಟ್‌ನಿಂದಲೇ ಫೆರ್ನಾಂಡೋ ಅವರ ಮುಖಕ್ಕೆ ಲಘುವಾಗಿ ಗುದ್ದಿದರು.
Jaiswal and shee lanka player fight 😯😯😯😯#indvssl #jaiswal pic.twitter.com/he9cIrZZkp
— Mahesh_Gurjar🇮🇳 (@Mahesh_gurjar0) August 23, 2026
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ ಮತ್ತು ಮೈದಾನದ ಅಂಪೈರ್‌ಗಳು ತಕ್ಷಣವೇ ಇಬ್ಬರ ಮಧ್ಯೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಜೈಸ್ವಾಲ್ ಅವರನ್ನು ಸಮಾಧಾನಪಡಿಸಿ ಪೆವಿಲಿಯನ್‌ಗೆ ಕಳುಹಿಸಿಕೊಡಲಾಯಿತು.
ಇದನ್ನೂ ಓದಿ: ಐಪಿಎಲ್ ತಲೆಮಾರಿನ ಟೆಸ್ಟ್ ಯಶಸ್ಸು: ಇದು ‘ಪಾಪ್ ಹಾಡುಗಾರರ ಕ್ಲಾಸಿಕಲ್ ರಾಗ’!
ಇನ್ನು ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 9 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಔಟಾದರು. ಜೈಸ್ವಾಲ್ ಅವರ ಈ 45 ರನ್ಗಳ ಕೊಡುಗೆಯೊಂದಿಗೆ ಟೀಮ್ ಇಂಡಿಯಾ ಭೋಜನಾ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 88 ರನ್ ಕಲೆಹಾಕಿದೆ. ಸದ್ಯ ಕ್ರೀಸ್ನಲ್ಲಿ ಶುಭ್ಮನ್ ಗಿಲ್ ಹಾಗೂ ದೇವದತ್ ಪಡಿಕ್ಕಲ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
Published On - 12:52 pm, Sun, 23 August 26