
ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೊದಲ ದಿನದಾಟದಲ್ಲಿ ಪ್ರಾಬಲ್ಯ ಮೆರೆಯಿತು. ಆದಾಗ್ಯೂ ತಂಡ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಕಲೆಹಾಕಿದೆ. ತಂಡದ ಪರ ಕನ್ನಡಿಗ ದೇವದತ್ ಪಡಿಕ್ಕಲ್ (Devdutt Padikkal) ಶತಕ ಬಾರಿಸಿದರೆ, ನಾಯಕ ಶುಭ್ಮನ್ ಗಿಲ್ (Shubman Gill) ಅರ್ಧಶತಕ ಬಾರಿಸಿದರು. ದಿನದಾಟದ ಕೊನೆಯ ಓವರ್ನಲ್ಲಿ ರವೀಂದ್ರ ಜಡೇಜಾ ವಿಕೆಟ್ ಕೈಚೆಲ್ಲಿದ್ದು ತಂಡವನ್ನು ಕೊಂಚ ಹಿನ್ನಡೆಗೆ ತಳ್ಳಿದೆ. ಉಳಿದಂತೆ ಧ್ರುವ್ ಜುರೆಲ್ 7 ರನ್ ಮತ್ತು ಸರಾಂಶ್ ಜೈನ್ 4 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. 37 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಕೆಎಲ್ ರಾಹುಲ್ 18 ರನ್‌ಗಳಿಗೆ ಔಟ್ ಆದರು. ನಂತರ ಯಶಸ್ವಿ ಜೈಸ್ವಾಲ್ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ಜೊತೆಯಾದ ನಾಯಕ ಶುಭ್ಮನ್ ಗಿಲ್ ಮತ್ತು ದೇವದತ್ ಪಡಿಕ್ಕಲ್ ಶತಕದ ಜೊತೆಯಾಟವನ್ನು ನೀಡಿ ತಂಡದ ಇನ್ನಿಂಗ್ಸ್ ನಿಭಾಯಿಸಿದರು.
ನಾಯಕ ಶುಭ್ಮನ್ ಗಿಲ್ 108 ಎಸೆತಗಳಲ್ಲಿ ಆರು ಬೌಂಡರಿಗಳೊಂದಿಗೆ 50 ರನ್ಗಳ ಇನ್ನಿಂಗ್ಸ್ ಆಡಿದರು. ಇದು ಶ್ರೀಲಂಕಾದಲ್ಲಿ ಗಿಲ್ ಅವರ ಮೊದಲ ಟೆಸ್ಟ್ ಅರ್ಧಶತಕವೂ ಆಗಿತ್ತು. ಆದರೆ ಅರ್ಧಶತಕ ಬಾರಿಸಿದ ಬೆನ್ನಲ್ಲೇ ಗಿಲ್ ಔಟಾದರು. ಆ ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ದೇವದತ್ ಪಡಿಕ್ಕಲ್ 193 ಎಸೆತಗಳಲ್ಲಿ 117 ರನ್ ಬಾರಿಸುವ ಮೂಲಕ ಈ ಸರಣಿಯಲ್ಲಿ ಸತತ ಎರಡನೇ ಶತಕ ಬಾರಿಸಿದರು.
ಆದರೆ ರಿಷಭ್ ಪಂತ್ ಗಾಯಗೊಂಡು ನಿವೃತ್ತರಾಗಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಪಂತ್ ಗಾಯದಿಂದಾಗಿ ಬ್ಯಾಟಿಂಗ್ಗೆ ಬಂದ ರವೀಂದ್ರ ಜಡೇಜಾ 83 ಎಸೆತಗಳಲ್ಲಿ 43 ರನ್ ಗಳಿಸಿ ದಿನದಾಟದ ಕೊನೆಯ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಧ್ರುವ್ ಜುರೆಲ್ 7 ರನ್ ಮತ್ತು ಸರಾಂಶ್ ಜೈನ್ 4 ರನ್ ಗಳಿಸಿ ಅಜೇಯರಾಗಿ ಉಳಿದಿದ್ದು ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
IND vs SL: ಪಡಿಕ್ಕಲ್ಗೆ 2 ಜೀವದಾನ ನೀಡಿದ ಶ್ರೀಲಂಕಾಕ್ಕೆ ಬರೋಬ್ಬರಿ 117 ರನ್ ದಂಡ
ಮತ್ತೊಂದೆಡೆ, ಶ್ರೀಲಂಕಾ ಪರ ಅಸಿತಾ ಫೆರ್ನಾಂಡೊ ಅದ್ಭುತ ಬೌಲಿಂಗ್ ಮಾಡಿ ಮೂರು ವಿಕೆಟ್ ಪಡೆದರೆ, ಲಹಿರು ಕುಮಾರ ಮತ್ತು ಕೇಶರ ನುವಂತ ತಲಾ ಒಂದು ವಿಕೆಟ್ ಪಡೆದರು. ಇತರ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಇದರ ಲಾಭ ಪಡೆದ ಭಾರತದ ಬ್ಯಾಟರ್ಗಳು ತಂಡವನ್ನು 300 ರನ್ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
Published On - 5:54 pm, Sun, 23 August 26