IND W vs IRE W: ಪ್ರತೀಕಾ- ತೇಜಲ್ ಅರ್ಧಶತಕ; ಭಾರತಕ್ಕೆ ಗೆಲುವಿನ ಶುಭಾರಂಭ

|

Updated on: Jan 10, 2025 | 6:30 PM

IND W vs IRE W: ಭಾರತದ ಮಹಿಳಾ ಕ್ರಿಕೆಟ್ ತಂಡವು ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ರೇಣುಕಾ ಸಿಂಗ್ ಅವರ ಅನುಪಸ್ಥಿತಿಯಲ್ಲೂ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಪ್ರಿಯಾ ಮಿಶ್ರಾ ಮತ್ತು ಟಿಟಾಸ್ ಸಾಧು ಅವರ ಅದ್ಭುತ ಬೌಲಿಂಗ್ ಮತ್ತು ಪ್ರತೀಕಾ ರಾವಲ್ ಮತ್ತು ತೇಜಲ್ ಅವರ ಅರ್ಧಶತಕಗಳ ನೆರವಿನಿಂದ ಭಾರತ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಭಾರತ ತನ್ನದೇ ನೆಲದಲ್ಲಿ ಐರ್ಲೆಂಡ್ ಅನ್ನು ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ಸೋಲಿಸಿದೆ.

IND W vs IRE W:  ಪ್ರತೀಕಾ- ತೇಜಲ್ ಅರ್ಧಶತಕ; ಭಾರತಕ್ಕೆ ಗೆಲುವಿನ ಶುಭಾರಂಭ
ಭಾರತ- ಐರ್ಲೆಂಡ್
Follow us on

ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಟಾರ್ ವೇಗದ ಬೌಲರ್ ರೇಣುಕಾ ಸಿಂಗ್ ಅನುಪಸ್ಥಿತಿಯಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಬಾಲ್ ಮತ್ತು ಬ್ಯಾಟಿಂಗ್‌ನಲ್ಲಿ ಯುವ ಆಟಗಾರರ ಅಮೋಘ ಪ್ರದರ್ಶನದ ಆಧಾರದ ಮೇಲೆ ಟೀಂ ಇಂಡಿಯಾ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. 20 ವರ್ಷದ ಲೆಗ್ ಸ್ಪಿನ್ನರ್ ಪ್ರಿಯಾ ಮಿಶ್ರಾ ಮತ್ತು 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಟಿಟಾಸ್ ಸಾಧು ಬೌಲಿಂಗ್‌ನಲ್ಲಿ ಮಿಂಚಿದರೆ, ಮಂದಾನ ಜೊತೆ ಇನ್ನಿಂಗ್ಸ್ ಆರಂಭಿಸುವ ಜವಬ್ದಾರಿ ಹೊತ್ತಿರುವ ಪ್ರತೀಕಾ ರಾವಲ್ ಮತ್ತು ತೇಜಲ್ ಅರ್ಧಶತಕ ದಾಖಲಿಸುವ ಮೂಲಕ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು. ಈ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾ ತನ್ನದೇ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿದ ಸಾಧನೆ ಮಾಡಿದೆ.

ಗೆಲುವಿನ ಆರಂಭ

3 ಪಂದ್ಯಗಳ ಸರಣಿಯ ಈ ಮೊದಲ ಪಂದ್ಯ ಜನವರಿ 10 ಶುಕ್ರವಾರ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಮೈದಾನದಲ್ಲಿ ನಡೆಯಿತು. ಈ ಸರಣಿಯಿಂದ ನಾಯಕಿ ಹರ್ಮನ್‌ಪ್ರೀತ್‌ಗೆ ವಿಶ್ರಾಂತಿ ನೀಡಲಾಗಿದ್ದು, ತಂಡದ ಪ್ರಮುಖ ವೇಗದ ಬೌಲರ್ ರೇಣುಕಾ ಸಿಂಗ್‌ಗೆ ಕೆಲಸದ ಹೊರೆ ನಿರ್ವಹಣೆಯಿಂದಾಗಿ ವಿಶ್ರಾಂತಿ ನೀಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಯುವ ಆಟಗಾರ್ತಿಯರನ್ನು ಒಳಗೊಂಡ ತಂಡವನ್ನು ಕಟ್ಟಿಕೊಂಡು ಅಖಾಡಕ್ಕಿಳಿದ ಮಂಧಾನ ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದಾರೆ. ವಿಂಡೀಸ್ ವಿರುದ್ಧದ ಸರಣಿಯಿಂದ ಆರಂಭಿಕ ಜೊತೆಗಾರ್ತಿಯಾಗಿ ಕಣಕ್ಕಿಳಿಯುತ್ತಿರುವ ಪ್ರತೀಕಾ, ಶತಕ ವಂಚಿತರಾದರೂ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಐರ್ಲೆಂಡ್​ಗೆ ಆರಂಭಿಕ ಆಘಾತ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ಕೇವಲ 56 ರನ್​ಗಳಿಗೆ ತನ್ನ ಮೊದಲ 4 ವಿಕೆಟ್ ಕಳೆದುಕೊಂಡಿತು. ಇದರಲ್ಲಿ ಯುವ ವೇಗಿ ಟಿಟಾಸ್ ಸಾಧು ಹಾಗೂ ಸ್ಪಿನ್ನರ್ ಪ್ರಿಯಾ ಪಾತ್ರ ದೊಡ್ಡದಿತ್ತು. ಪ್ರಿಯಾ ಹ್ಯಾಟ್ರಿಕ್ ಕೂಡ ಮಿಸ್ ಮಾಡಿಕೊಂಡರು. ಇತ್ತ ಆರಂಭಿಕ ಆಘಾತದಿಂದಾಗಿ ಐರಿಶ್ ನಾಯಕಿ ಗ್ಯಾಬಿ ಲೂಯಿಸ್ ಇಡೀ ಇನ್ನಿಂಗ್ಸ್​ನ ಜವಬ್ದಾರಿ ವಹಿಸಿಕೊಂಡು ಲಿಯಾ ಪೌಲ್ ಜೊತೆಗೂಡಿ 117 ರನ್‌ಗಳ ಉತ್ತಮ ಜೊತೆಯಾಟ ನೀಡಿದರು. ಈ ಅವಧಿಯಲ್ಲಿ ಇಬ್ಬರೂ ಅರ್ಧಶತಕಗಳನ್ನು ಪೂರೈಸಿದರು. ಆದರೆ, 3 ಸುಲಭ ಕ್ಯಾಚ್​ಗಳನ್ನು ಕೈಬಿಟ್ಟ ಟೀಂ ಇಂಡಿಯಾದ ಫೀಲ್ಡರ್​ಗಳೂ ಇದರಲ್ಲಿ ಕೊಡುಗೆ ನೀಡಿದ್ದಾರೆ. ಆದರೆ, ಲೂಯಿಸ್ ಶತಕ ಪೂರೈಸಲು ಸಾಧ್ಯವಾಗದೆ ದೀಪ್ತಿ ಶರ್ಮಾಗೆ ಬಲಿಯಾದರು. ಕೊನೆಯಲ್ಲಿ ಅರ್ಲೀನ್ ಕೆಲ್ಲಿ ಕೂಡ ವೇಗವಾಗಿ 28 ರನ್ ಗಳಿಸಿ ತಂಡವನ್ನು 238 ರನ್‌ಗಳಿಗೆ ಕೊಂಡೊಯ್ದರು.

ಶತಕ ವಂಚಿತ ಪ್ರತೀಕಾ

ನಾಯಕಿ ಸ್ಮೃತಿ (41) ಪ್ರತೀಕಾ ಜೊತೆಗೂಡಿ ಟೀಂ ಇಂಡಿಯಾಕ್ಕೆ ಅಮೋಘ ಆರಂಭ ನೀಡಿದರು. ಸ್ಮೃತಿ ಆರಂಭದಿಂದಲೂ ಹೆಚ್ಚು ಆಕ್ರಮಣಕಾರಿಯಾಗಿ ಐರಿಶ್ ಬೌಲರ್‌ಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಮೃತಿ ಔಟಾಗುವುದಕ್ಕೂ ಮುನ್ನ 10 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 70 ರನ್ ಕಲೆಹಾಕಿದರು. ಇದಾದ ಬಳಿಕ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಹರ್ಲೀನ್ ಡಿಯೋಲ್ (20) ಮತ್ತು ಜೆಮಿಮಾ ರೋಡ್ರಿಗಸ್ (9) ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗಲಿಲ್ಲ. ಆದರೆ ಜವಬ್ದಾರಿಯುತ ಬ್ಯಾಟಿಂಗ್ ಮಾಡಿದ ಪ್ರತೀಕಾ, ಮತ್ತೊಬ್ಬ ಯುವ ಆಟಗಾರ್ತಿ ತೇಜಲ್ ಹಸನ್‌ಬಿಸ್ ಅವರೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರೂ 116 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ಆದರೆ ಗೆಲುವಿಗೆ 7 ರನ್‌ಗಳ ಅಗತ್ಯವಿದ್ದಾಗ ಪ್ರತೀಕಾ 89 ರನ್ ಗಳಿಸಿ ಔಟಾದರು. ತೇಜಲ್ 53 ರನ್ ಗಳಿಸಿ ಅಜೇಯರಾಗಿ ಮರಳಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Fri, 10 January 25