
ಚೊಚ್ಚಲ ಆವೃತ್ತಿಯ ಮಹಿಳಾ ಚಾಂಪಿಯನ್ಸ್ ಟ್ರೋಫಿ 2027 ರಲ್ಲಿ ನಡೆಯಲಿದೆ. ಈ ಪಂದ್ಯಾವಳಿಯನ್ನು ಆಯೋಜಿಸುವ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ. ಈ ಮೊದಲು ಶ್ರೀಲಂಕಾದಲ್ಲಿ ಈ ಪಂದ್ಯಾವಳಿಯನ್ನು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ರಾಜಕೀಯ ಹಸ್ತಕ್ಷೇಪದಿಂದಾಗಿ ಶ್ರೀಲಂಕಾದಿಂದ ಈ ಹಕ್ಕುಗಳನ್ನು ರದ್ದುಗೊಳಿಸಿದ ಐಸಿಸಿ, ಈ ಐತಿಹಾಸಿಕ ಪಂದ್ಯಾವಳಿಯ ಆತಿಥ್ಯವನ್ನು ಭಾರತಕ್ಕೆ ಹಸ್ತಾಂತರಿಸಿದೆ. ಈ ಪಂದ್ಯಾವಳಿಯ ಆಯೋಜಕತ್ವವನ್ನು ಕಳೆದುಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾಕ್ಕೆ ನೂರಾರು ಕೋಟಿ ರೂಗಳ ನಷ್ಟವನ್ನು ಅನುಭವಿಸಿದೆ.
ಐಸಿಸಿ, ಶ್ರೀಲಂಕಾದಿಂದ ಆತಿಥ್ಯದ ಹಕ್ಕನ್ನು ಕಸಿದುಕೊಳ್ಳಲು ಪ್ರಮುಖ ಕಾರಣ, ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ರಾಜಕೀಯ ಹಸ್ತಕ್ಷೇಪ. ಐಸಿಸಿ ನಿಯಮಗಳ ಪ್ರಕಾರ, ಯಾವುದೇ ದೇಶದ ಕ್ರಿಕೆಟ್ ಮಂಡಳಿಯಲ್ಲಿ ಯಾವುದೇ ಸರ್ಕಾರ ಅಥವಾ ರಾಜಕೀಯ ಹಸ್ತಕ್ಷೇಪ ಇರಬಾರದು. ಪ್ರಸ್ತುತ, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಲ್ಲಿನ ಸರ್ಕಾರ ನೇಮಿಸಿದ ಮಧ್ಯಂತರ ಸಮಿತಿಯು ನಡೆಸುತ್ತಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದೇ ಕಾರಣಕ್ಕೆ ಐಸಿಸಿ ಆತಿಥ್ಯದ ಹಕ್ಕನ್ನು ಶ್ರೀಲಂಕಾದಿಂದ ವಾಪಸ್ ಪಡೆದುಕೊಂಡಿತು.
ವರದಿಯ ಪ್ರಕಾರ, ರಾಜಕೀಯ ಹಸ್ತಕ್ಷೇಪಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸದಿದ್ದರೆ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಮಂಡಳಿಯ ಚುನಾವಣೆಗಳನ್ನು ನಡೆಸದಿದ್ದರೆ,ಶ್ರೀಲಂಕಾಕ್ಕೆ ನೀಡಿರುವ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಹಕ್ಕುಗಳನ್ನು ವಾಪಸ್ ಪಡೆಯಲಾಗುತ್ತದೆ ಎಂದು ಐಸಿಸಿ ತಿಂಗಳುಗಳ ಹಿಂದೆಯೇ ಶ್ರೀಲಂಕಾ ಕ್ರಿಕೆಟ್‌ಗೆ ಎಚ್ಚರಿಕೆ ನೀಡಿತ್ತು. ಅದರ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ಈ ಬಗ್ಗೆ ಗಮನ ಹರಿಸದ ಕಾರಣದಿಂದಾಗಿ ಕೋಟ್ಯಾಂತರ ರೂಗಳ ನಷ್ಟ ಅನುಭವಿಸಿದೆ.
ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಕೈತಪ್ಪಿರುವುದರಿಂದ ಶ್ರೀಲಂಕಾ ಕನಿಷ್ಠ 20 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 188 ಕೋಟಿ ರೂ.ಗಳ ನಷ್ಟ ಅನುಭವಿಸಬಹುದು ಎಂದು ವರದಿಯಾಗಿದೆ. ಈ ಪಂದ್ಯಾವಳಿ ಆಯೋಜನೆಯಿಂದ ಶ್ರೀಲಂಕಾ ಮಂಡಳಿಗೆ ಆದಾಯ ಹರಿದುಬರುವುದರ ಜೊತೆಗೆ ಶ್ರೀಲಂಕಾಕ್ಕೂ ಪ್ರವಾಸೋದ್ಯಮ, ವಾಣಿಜ್ಯ ಚಟುವಟಿಕೆ ಮತ್ತು ಜಾಗತಿಕ ಮನ್ನಣೆಯ ಮೂಲಕ ಗಮನಾರ್ಹ ಆದಾಯ ಹರಿದುಬರುತಿತ್ತು. ಆದರೆ ಈಗ ಆ ಯಾವ ಆದಾಯವೂ ಇಲ್ಲದಂತ್ತಾಗಿದೆ.
ಶ್ರೀಲಂಕಾದ ಕೈತಪ್ಪಿದ ಆತಿಥ್ಯ; ಭಾರತದಲ್ಲಿ ನಡೆಯಲಿದೆ ಮಹಿಳಾ ಚಾಂಪಿಯನ್ಸ್ ಟ್ರೋಫಿ
ಅಷ್ಟಕ್ಕೂ ಸರ್ಕಾರದ ಹಸ್ತಕ್ಷೇಪದಿಂದಾಗಿ ಶ್ರೀಲಂಕಾ ಪ್ರಮುಖ ಐಸಿಸಿ ಪಂದ್ಯಾವಳಿಗಳನ್ನು ಆಯೋಜಿಸುವ ಅವಕಾಶವನ್ನು ಕಳೆದುಕೊಂಡಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಅಂದರೆ 2023 ರಲ್ಲಿ ಐಸಿಸಿ, ಸರ್ಕಾರದ ಹಸ್ತಕ್ಷೇಪವನ್ನು ಉಲ್ಲೇಖಿಸಿ ಶ್ರೀಲಂಕಾ ಕ್ರಿಕೆಟ್ ಅನ್ನು ಅಮಾನತುಗೊಳಿಸಿತ್ತು. ಇದರಿಂದಾಗಿ 2024 ರಲ್ಲಿ ನಡೆದ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಅನ್ನು ಶ್ರೀಲಂಕಾದಿಂದ ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗಿತ್ತು.
Published On - 5:55 pm, Thu, 3 September 26