IND vs PAK: ಪಾಕಿಸ್ತಾನ್ ವಿರುದ್ಧ ನಿರ್ಣಾಯಕ ಅರ್ಧಶತಕ ಚಚ್ಚಿದ ಸ್ಮೃತಿ ಮಂಧಾನ

India vs Pakistan Women's T20 World Cup 2026: ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ್ತಿಯರು ಬೇಗನೆ ಔಟಾದರು. ಆದರೆ, ಉಪನಾಯಕಿ ಸ್ಮೃತಿ ಮಂಧನಾ ಸ್ಫೋಟಕ 68 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಕಳಪೆ ಫಾರ್ಮ್‌ನಲ್ಲಿದ್ದ ಮಂಧನಾ ಈ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಿ, ತಂಡಕ್ಕೆ ಭರವಸೆ ಮೂಡಿಸಿದರು. ಅವರ ಇನ್ನಿಂಗ್ಸ್ ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಲು ನೆರವಾಯಿತು.

IND vs PAK: ಪಾಕಿಸ್ತಾನ್ ವಿರುದ್ಧ ನಿರ್ಣಾಯಕ ಅರ್ಧಶತಕ ಚಚ್ಚಿದ ಸ್ಮೃತಿ ಮಂಧಾನ
Smriti Mandhana

Updated on: Jun 14, 2026 | 8:35 PM

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮಹಿಳಾ ಟಿ20 ವಿಶ್ವಕಪ್ ( Women’s T20 World Cup 2026) ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ನೋಡುತ್ತಿವೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ ನಾಯಕಿಯ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಶಫಾಲಿ ಹಾಗೂ ಜೆಮೀಮಾ ಎಡವಿದರು. ಆದಾಗ್ಯೂ ಈ ಮಹತ್ವದ ಪಂದ್ಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ ಉಪನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಭಾರತಕ್ಕೆ ಆರಂಭಿಕ ಆಘಾತ

ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಇನ್ನಿಂಗ್ಸ್​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದರಾದರೂ ಅದೇ ಓವರ್​ನ ಕೊನೆಯ ಎಸೆತದಲ್ಲಿ ಕೀಪರ್​​ಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಬಂದ ಜೆಮೀಮಾ ಕೂಡ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಭಾರತ ಕೇವಲ 18 ರನ್​ಗಳಿಗೆ ತನ್ನ ಮೊದಲೆರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಆದರೆ ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಹರ್ಮನ್​ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟ್​ಗೆ 91 ರನ್​ಗಳ ಜೊತೆಯಾಟವನ್ನಾಡಿತು.

68 ರನ್​ ಬಾರಿಸಿದ ಸ್ಮೃತಿ

ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಮೃತಿ, ಆ ಬಳಿಕ ನಿಧಾನವಾಗಿ ತಮ್ಮ ಗೇರ್ ಬದಲಿಸಿದರು. ಹೀಗಾಗಿ ಕೇವಲ 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಸ್ಮೃತಿ ಅವರ ಈ ಇನ್ನಿಂಗ್ಸ್​ನಿಂದಾಗಿ ಭಾರತ ತಂಡ ಶತಕದ ಗಡಿ ಕೂಡ ದಾಟಿತು. ಅರ್ಧಶತಕದ ಬಳಿಕ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ 68 ರನ್ ಬಾರಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 44 ಎಸೆತಗಳನ್ನು ಎದುರಿಸಿದ ಸ್ಮೃತಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು.

ಕಳಪೆ ಫಾರ್ಮ್​ಗೆ ಸಿಲುಕಿದ್ದ ಸ್ಮೃತಿ

ವಾಸ್ತವವಾಗಿ ವಿಶ್ವಕಪ್​ಗೂ ಮುನ್ನ ಸ್ಮೃತಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದರು. ವಾಸ್ತವವಾಗಿ ಟಿ20 ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ತಲುಪಿತ್ತು. ಆದಾಗ್ಯೂ, ಈ ಪ್ರವಾಸ ಮಂಧಾನಾಗೆ ದುಃಸ್ವಪ್ನವಾಗಿ ಪರಿಣಮಿಸಿತ್ತು. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದ ಮಂಧಾನ, ಎರಡನೇ ಪಂದ್ಯದಲ್ಲಿ 32 ರನ್ ಗಳಿಸುವ ಮೂಲಕ ಹಳೆಯ ಫಾರ್ಮ್​ಗೆ ಮರಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ಕೇವಲ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.

IND vs PAK Women’s T20 WC Live Score: ಭಾರತದ 5ನೇ ವಿಕೆಟ್ ಪತನ

ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 39 ರನ್ ಬಾರಿಸಿದ್ದ ಸ್ಮೃತಿ, ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 1 ರನ್ ಗಳಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದ್ದರು. ಹೀಗಾಗಿ ಸ್ಮೃತಿ ಅವರ ಫಾರ್ಮ್​ ತಂಡದ ಕಳವಳ ಹೆಚ್ಚಿಸಿತ್ತು. ಆದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಂಧಾನ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:30 pm, Sun, 14 June 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us