
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆದ್ದುಕೊಳ್ಳುವಲ್ಲಿ ಟೀಂ ಇಂಡಿಯಾ (India vs South Africa) ಯಶಸ್ವಿಯಾಗಿದೆ. ಧೋನಿ ತವರಾದ ರಾಂಚಿ ಮೈದಾನದಲ್ಲಿ ನಡೆದ ಉಭಯ ತಂಡಗಳ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೊಹ್ಲಿ (Virat Kohli) ಶತಕ ಹಾಗೂ ರೋಹಿತ್ (Rohit Sharma) ಮತ್ತು ರಾಹುಲ್ ಅವರ ಅರ್ಧಶತಕದ ನೆರವಿನಿಂದ 349 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಕೊನೆಯ ಓವರ್‌ನಲ್ಲಿ ಆಲೌಟ್ ಆಗುವ ಮೂಲಕ 17 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಆಫ್ರಿಕಾ ಗೆಲುವಿಗಾಗಿ ಆಲ್‌ರೌಂಡರ್ ಕಾರ್ಬಿನ್ ಭಾಷ್ ಏಕಾಂಗಿ ಹೋರಾಟ ನೀಡಿದರಾದರೂ ಅವರಿಗೆ ಕೊನೆಯಲ್ಲಿ ಬೆಂಬಲ ಸಿಗದ ಕಾರಣ ಆಫ್ರಿಕಾ ತಂಡ ಸೋಲಬೇಕಾಯಿತು.
ರಾಂಚಿಯ ಜೆಎಸ್‌ಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಯಶಸ್ವಿ ಜೈಸ್ವಾಲ್ 18 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ಎರಡನೇ ವಿಕೆಟ್ಗೆ ಜೊತೆಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಹೊಡಿಬಡಿ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಒಂದು ತಿಂಗಳ ಹಿಂದೆ ಸಿಡ್ನಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಂದ್ಯ ಗೆಲ್ಲುವ ಜೊತೆಯಾಟ ರೂಪಿಸಿದ್ದ ಈ ಇಬ್ಬರು ಅನುಭವಿಗಳು ರಾಂಚಿಯಲ್ಲೂ ಮತ್ತದೆ ಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರಿಬ್ಬರು 2ನೇ ವಿಕೆಟ್ಗೆ 136 ರನ್‌ಗಳ ಜೊತೆಯಾಟ ಕಟ್ಟಿದರು. ಆದರೆ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸುವ ಮೂಲಕ ಈ ಜೊತೆಯಾಟ ಮುರಿದುಬಿತ್ತು.
ರೋಹಿತ್ ಔಟಾದ ಬಳಿಕ ತಮ್ಮ ಬ್ಯಾಟಿಂಗ್ ವೇಗವನ್ನು ಕಡಿಮೆ ಮಾಡಿದ ವಿರಾಟ್ ಕೊಹ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿ ತಮ್ಮ 52ನೇ ಏಕದಿನ ಶತಕವನ್ನು ಪೂರೈಸಿದರು. ಆದಾಗ್ಯೂ ನಾಲ್ಕನೇ ಕ್ರಮಾಂಕದಲ್ಲಿ ಬಂದ ರುತುರಾಜ್ ಹಾಗೂ ವಾಷಿಂಗ್ಟನ್ ಸುಂದರ್ ಬೇಗನೇ ಪೆವಿಲಿಯನ್ ಸೇರಿಕೊಂಡರು. ಇದು ತಂಡದ ರನ್ ವೇಗವನ್ನು ಕಡಿಮೆ ಮಾಡಿತು. ಆದರೆ 6ನೇ ಕ್ರಮಾಂಕದಲ್ಲಿ ಬಂದ ನಾಯಕ ರಾಹುಲ್, ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಅಂತಿಮವಾಗಿ ಕೊಹ್ಲಿ ಕೇವಲ 120 ಎಸೆತಗಳಲ್ಲಿ 11 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 135 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ನಾಯಕ ಕೆ.ಎಲ್. ರಾಹುಲ್ ಅರ್ಧಶತಕ ಬಾರಿಸಿದರೆ, ರವೀಂದ್ರ ಜಡೇಜಾ ಕೂಡ ಚುರುಕಾದ ಇನ್ನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ಪರ, ಕಾರ್ಬಿನ್ ಬಾಷ್ ಸೇರಿದಂತೆ ನಾಲ್ವರು ವೇಗಿಗಳು ತಲಾ ಎರಡು ವಿಕೆಟ್ ಪಡೆದರು.
IND vs SA: ರಾಂಚಿಯಲ್ಲಿ ರಾಜನ ದರ್ಬಾರ್; 52ನೇ ಏಕದಿನ ಶತಕ ಬಾರಿಸಿದ ವಿರಾಟ್ ಕೊಹ್ಲಿ
ರಾಂಚಿ ಪಿಚ್ನಲ್ಲಿ ಗುರಿ ಬೆನ್ನಟ್ಟುವ ತಂಡಕ್ಕೆ ಹೆಚ್ಚಿನ ನೆರವು ಸಿಗುವ ಕಾರಣ, ದಕ್ಷಿಣ ಆಫ್ರಿಕಾಕ್ಕೆ ರನ್ ಗಳಿಸುವುದು ಅಷ್ಟು ಕಷ್ಟವಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ ಎರಡನೇ ಓವರ್‌ನಲ್ಲಿ ಮಾರಕ ದಾಳಿ ನಡೆಸಿದ ಹರ್ಷಿತ್ ರಾಣಾ ತಮ್ಮ ಓವರ್‌ನ ಮೊದಲ ಎಸೆತದಲ್ಲೇ ರಯಾನ್ ರಿಕಲ್ಟನ್ ಅವರನ್ನು ಔಟ್ ಮಾಡಿದರೆ, ಮೂರನೇ ಎಸೆತದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ಈ ಇಬ್ಬರೂ ಶೂನ್ಯಕ್ಕೆ ಔಟಾದರು. ನಂತರ ಮೂರನೇ ಬ್ರೇಕ್‌ಥ್ರೂ ನೀಡಿದ ಅರ್ಷದೀಪ್, ನಾಯಕ ಐಡೆನ್ ಮಾರ್ಕ್ರಾಮ್ ಅವರನ್ನು ಔಟ್ ಮಾಡಿದರು. ಹೀಗಾಗಿ ಕೇವಲ 11 ರನ್‌ಗಳಿಗೆ ಆಫ್ರಿಕಾದ ಮೂರು ವಿಕೆಟ್‌ಗಳು ಬಿದ್ದವು. ಆದರೆ ಇದರ ಹೊರತಾಗಿಯೂ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಭಾರತಕ್ಕೆ ಸುಲಭವಾಗಿ ಗೆಲುವು ಧಕ್ಕದಂತೆ ಮಾಡಿದರು.
ಮ್ಯಾಥ್ಯೂ ಬ್ರೆಟ್ಜ್ಕಿ ಜೊತೆಯಾದ ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ 97 ರನ್‌ಗಳ ಭರ್ಜರಿ ಜೊತೆಯಾಟ ಕಟ್ಟಿ ಟೀಂ ಇಂಡಿಯಾವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದರೆ ಈ ವೇಳೆ ದಾಳಿಗಿಳಿದ ಕುಲ್ದೀಪ್ ಯಾದವ್ 34 ನೇ ಓವರ್‌ನಲ್ಲಿ ಇಬ್ಬರನ್ನೂ ಔಟ್ ಮಾಡುವ ಮೂಲಕ ಟೀಂ ಇಂಡಿಯಾವನ್ನು ಮತ್ತೆ ಆಟಕ್ಕೆ ತಂದರು. ಆದಾಗ್ಯೂ, ದಕ್ಷಿಣ ಆಫ್ರಿಕಾ ಸುಲಭವಾಗಿ ಶರಣಾಗಲಿಲ್ಲ. ಕಾರ್ಬಿನ್ ಬಾಷ್ ಅದ್ಭುತ ಬ್ಯಾಟಿಂಗ್ ಮಾಡಿ ಕೇವಲ 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 18 ರನ್‌ಗಳು ಬೇಕಾಗಿದ್ದವು. ಆದರೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 50ನೇ ಓವರ್‌ನ ಎರಡನೇ ಎಸೆತದಲ್ಲಿ ಬಾಷ್, ರೋಹಿತ್ಗೆ ಕ್ಯಾಚ್ ನೀಡುವ ಮೂಲಕ ದಕ್ಷಿಣ ಆಫ್ರಿಕಾದ ಭರವಸೆಯನ್ನು ಕೊನೆಗೊಳಿಸಿದರು. ಭಾರತದ ಪರ ಕುಲ್ದೀಪ್ 4 ವಿಕೆಟ್, ಹರ್ಷಿತ್ ರಾಣಾ 3 ವಿಕೆಟ್ ಪಡೆದರೆ, ಅರ್ಷದೀಪ್ 2 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Sun, 30 November 25