ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ 4 ದಿನಗಳ ಆಟ ಮುಗಿದಿದ್ದು, ಪಂದ್ಯದ ಕೊನೆಯ ದಿನದಂದು ನ್ಯೂಜಿಲೆಂಡ್ ತಂಡ ಗೆಲ್ಲಲು 107 ರನ್‌ಗಳ ಗುರಿಯನ್ನು ಬೆನ್ನಟ್ಟಬೇಕಿದೆ. ಇತ್ತ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಬೇಕಾದರೆ ಕಿವೀಸ್ ತಂಡದ 10 ವಿಕೆಟ್ ಕಬಳಿಸಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ, ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ಪಂದ್ಯವನ್ನು ಟೀಂ ಇಂಡಿಯಾ ಗೆಲ್ಲಬೇಕೆಂದರೆ ಕಿವೀಸ್ ತಂಡವನ್ನು ಬೇಗನೇ ಆಲೌಟ್ ಮಾಡಬೇಕಿದೆ. ಅಥವಾ ಪಂದ್ಯ ನಡೆಯದಂತೆ ವರುಣ ರಾಯ ತಡೆಯಬೇಕಿದೆ. ಇದಕ್ಕೆ ಪೂರಕವಾಗಿ ನಾಳಿನ ಬೆಂಗಳೂರು ಹವಾಮಾನ ವರದಿಯೂ ಟೀಂ ಇಂಡಿಯಾಕ್ಕೆ ನೆರವಾಗುವ ಸೂಚನೆಯನ್ನು ನೀಡಿದೆ.
ಬೆಂಗಳೂರು ಟೆಸ್ಟ್ ಪಂದ್ಯಕ್ಕೆ ಮೊದಲ ದಿನದಿಂದಲೂ ಮಳೆಯ ಅವಕೃಪೆ ಎದುರಾಗಿದೆ. ಹೀಗಾಗಿ ಪಂದ್ಯದ ಮೊದಲ ದಿನ ಮಳೆಯಿಂದಾಗಿ ಒಂದೇ ಒಂದು ಚೆಂಡು ಬೌಲ್ ಆಗಲಿಲ್ಲ, ಟಾಸ್ ಕೂಡ ನಡೆಯಲಿಲ್ಲ. ಆದರೆ ಎರಡನೇ ಮತ್ತು ಮೂರನೇ ದಿನ ಮಾತ್ರ ಯಾವುದೇ ಅಡೆಚಣೆ ಇಲ್ಲದೆ ಪಂದ್ಯ ನಡೆದಿತ್ತು. ನಾಲ್ಕನೇ ದಿನ ಮತ್ತೆ ಅಖಾಡಕ್ಕಿಳಿದ ಮಳೆರಾಯ ಆಗಾಗ್ಗೆ ಪಂದ್ಯಕ್ಕೆ ಅಡ್ಡಿಪಡಿಸಿದ. ಮಳೆಯಿಂದಾಗಿ ದಿನದಾಟವನ್ನು ಬೇಗನೇ ಮುಗಿಸಬೇಕಾಯಿತು. ಇದೀಗ 5ನೇ ದಿನದ ಆಟದಲ್ಲಿ ಮಳೆಯ ಭೀತಿ ಎದುರಾಗಿದ್ದು ಪಂದ್ಯ ಡ್ರಾದಲ್ಲಿ ಅಂತ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಅಕ್ಯುವೆದರ್ ಪ್ರಕಾರ, ಬೆಂಗಳೂರಿನಲ್ಲಿ ಅಕ್ಟೋಬರ್ 20 ರಂದು ಅಂದರೆ ಟೆಸ್ಟ್ ಪಂದ್ಯದ 5 ನೇ ದಿನದಲ್ಲಿ ಶೇ 80 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಶೇ.51 ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಈ ಕಾರಣದಿಂದ ಪಂದ್ಯ ಆರಂಭವಾಗುವುದು ತಡವಾಗಬಹುದು. ಇದರ ನಂತರ, ದಿನವಿಡೀ ಮಳೆಯ ಸಂಭವನೀಯತೆ 45 ರಿಂದ 50%ರಷ್ಟಿದೆ. ಇಷ್ಟು ಮಾತ್ರವಲ್ಲದೆ ಸಂಜೆ 4 ಗಂಟೆಯ ವೇಳೆಗೂ ಶೇ.39ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ಪಂದ್ಯ ಪ್ರಾರಂಭವಾದರೂ ಆಗಾಗ್ಗೆ ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 46 ರನ್‌ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 402 ರನ್ ಗಳಿಸಿತ್ತು. ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಟೀಂ ಇಂಡಿಯಾ 462 ರನ್ ಗಳಿಸಿತು. ತಂಡದ ಪರ ಸರ್ಫರಾಜ್ ಅಹ್ಮದ್ 150 ರನ್‌ಗಳ ಇನ್ನಿಂಗ್ಸ್ ಆಡಿದರೆ, ರಿಷಬ್ ಪಂತ್ 99 ರನ್ ಬಾರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ 107 ರನ್‌ಗಳ ಟಾರ್ಗೆಟ್ ನೀಡಿದ್ದು, ಟೀಂ ಇಂಡಿಯಾಗೆ ಡಿಫೆಂಡ್ ಮಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ