ಹೋಪ್ 162 ರನ್, ಕೊನೆಗೂ ಗೆದ್ದ ವಿಂಡೀಸ್; ಭಾರತಕ್ಕೆ ಏಕದಿನ ಸರಣಿ

ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯದಲ್ಲಿ ಶಾಯ್ ಹೋಪ್ (162*) ಅಜೇಯ ಶತಕದ ನೆರವಿನಿಂದ ವಿಂಡೀಸ್ ಭಾರತದ 351 ರನ್‌ಗಳ ಗುರಿಯನ್ನು ಬೆನ್ನಟ್ಟಿ ದಾಖಲೆಯ ಜಯ ಗಳಿಸಿತು. ಕೆಎಲ್ ರಾಹುಲ್ (129*) ಮತ್ತು ರೋಹಿತ್ ಶರ್ಮಾ (92) ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡಿದ್ದರು. ಆದರೂ, ಭಾರತ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು.

ಹೋಪ್ 162 ರನ್, ಕೊನೆಗೂ ಗೆದ್ದ ವಿಂಡೀಸ್; ಭಾರತಕ್ಕೆ ಏಕದಿನ ಸರಣಿ
ಭಾರತ Vs ವೆಸ್ಟ್ ಇಂಡೀಸ್

Updated on: Oct 03, 2026 | 11:17 PM

ನ್ಯೂ ಚಂಡೀಗಢದಲ್ಲಿ ನಡೆದ ಭಾರತ ಹಾಗೂ ವೆಸ್ಟ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ವೆಸ್ಟ್ ಇಂಡೀಸ್ ಯಶಸ್ವಿಯಾಗಿದೆ. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಶಾಯ್ ಹೋಪ್ 162 ರನ್​ಗಳ ಅಜೇಯ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 351 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 49 ನೇ ಓವರ್​ನಲ್ಲಿ ಗೆಲುವಿನ ದಡ ಮುಟ್ಟಿತು. ಇದರೊಂದಿಗೆ ವಿಂಡೀಸ್ ಭಾರತದ ವಿರುದ್ಧ ದಾಖಲೆಯ ಗುರಿ ಬೆನ್ನಟ್ಟಿದ ಸಾಧನೆಯನ್ನು ಮಾಡಿತು. ಆದಾಗ್ಯೂ ಭಾರತ 2-1 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿತು.

ಭಾರತಕ್ಕೆ ಆರಂಭಿಕ ಆಘಾತ

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ನಾಯಕ ಶುಭ್​ಮನ್ ಗಿಲ್ ಕೇವಲ1 ರನ್​ಗೆ ಔಟಾದರೆ, ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದರು. ಅಲ್ಲಿಂದ ರೋಹಿತ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ತಂಡದ ಇನ್ನಿಂಗ್ಸ್ ಸ್ಥಿರಗೊಳಿಸಿ ಉತ್ತಮ ಪಾಲುದಾರಿಕೆಯನ್ನು ರೂಪಿಸಿದರು. ರೋಹಿತ್ ಶರ್ಮಾ ಶತಕದಂಚಿನಲ್ಲಿ ಎಡವಿದರೆ, ರುತುರಾಜ್ ಅರ್ಧಶತಕ ಬಾರಿಸಿದರು.

ರಾಹುಲ್ ಅಜೇಯ ಶತಕ

ರೋಹಿತ್ ತಮ್ಮ ಇನ್ನಿಂಗ್ಸ್​ನಲ್ಲಿ 83 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 92 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇತ್ತ ರುತುರಾಜ್ 57 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು. ಆ ನಂತರ ಬಂದ ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿ ತಮ್ಮ ಶತಕವನ್ನು ಪೂರೈಸಿದರು. ರಾಹುಲ್ ಕೇವಲ 87 ಎಸೆತಗಳಲ್ಲಿ 129 ರನ್ ಗಳಿಸಿ ಅಜೇಯರಾಗಿ ಉಳಿದರು. ನಮನ್ ಧೀರ್ ಕೂಡ 30 ರನ್​ಗಳ ಕಾಣಿಕೆ ನೀಡಿದರು. ಅನ್ಶುಲ್ ಕಾಂಬೋಜ್ 17 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಭಾರತ 50 ಓವರ್​ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 351 ರನ್ ಕಲೆಹಾಕಿತು.

ಹೋಪ್- ಜಂಗೂ ಜೊತೆಯಾಟ

352 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್‌ನ ಆರಂಭಿಕ ಆಟಗಾರ ಜ್ಯುವೆಲ್ ಆಂಡ್ರ್ಯೂಸ್ ಬೆರಳಿನ ಗಾಯದಿಂದಾಗಿ ಇನ್ನಿಂಗ್ಸ್ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಜಾನ್ ಕ್ಯಾಂಪ್‌ಬೆಲ್ ಜೊತೆಗೆ ನಾಯಕ ಶೈ ಹೋಪ್ ಇನ್ನಿಂಗ್ಸ್ ಆರಂಭಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕ್ಯಾಂಪ್‌ಬೆಲ್ ಅವರನ್ನು ಮೊಹಮ್ಮದ್ ಸಿರಾಜ್ ಬೇಗನೆ ಬೌಲ್ಡ್ ಮಾಡಿದರು. ಆದರೆ ಹೋಪ್ ಹಾಗೂ ಅಮೀರ್ ಜಂಗೂ ಉತ್ತಮ ಜೊತೆಯಾಟ ಕಟ್ಟಿದರು. ಜಂಗೂ 56 ಎಸೆತಗಳಲ್ಲಿ 67 ರನ್ ಗಳಿಸಿ ರನ್ ಔಟ್ ಆದರೆ, ನಂತರ ಬಂದ ಕೀಮೊ ಪಾಲ್ 35 ಎಸೆತಗಳಲ್ಲಿ 44 ರನ್​ಗಳ ಕಾಣಿಕೆ ನೀಡಿದರು. ಕೊನೆಯಲ್ಲಿ ಗುಡಕೇಶ್ ಮೋಟಿ ಅಜೇಯ 19 ರನ್ ಬಾರಿಸಿ ತಂಡದ ಗೆಲುವಿಗೆ ನೆರವಾದರು.

ಅಜೇಯ 162 ರನ್ ಬಾರಿಸಿದ ಹೋಪ್

ಏತನ್ಮಧ್ಯೆ, ನಾಯಕ ಶಾಯ್ ಹೋಪ್ ಕೊನೆಯವರೆಗೂ ಅಜೇಯರಾಗಿ ಉಳಿದು 143 ಎಸೆತಗಳಲ್ಲಿ 17 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದಂತೆ 162 ರನ್ ಬಾರಿಸಿದರು. ಈ ಇನ್ನಿಂಗ್ಸ್ ಮೂಲಕ ತಂಡವು 48.2 ಓವರ್‌ಗಳಲ್ಲಿ ಐತಿಹಾಸಿಕ 352 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಸಹಾಯ ಮಾಡಿದರು. ಇದರೊಂದಿಗೆ ವೆಸ್ಟ್ ಇಂಡೀಸ್ ತಮ್ಮ ಏಕದಿನ ಇತಿಹಾಸದಲ್ಲಿ ಮೊದಲ ಬಾರಿಗೆ 350 ಅಥವಾ ಅದಕ್ಕಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿದ ಸಾಧನೆಯನ್ನು ಮಾಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 pm, Sat, 3 October 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us