ವಾವ್ಹ್​… ಜಸ್​ಪ್ರೀತ್ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ..!

Jasprit Bumrah: ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ 8 ಪಂದ್ಯಗಳನ್ನಾಡಿದ್ದ ಜಸ್​ಪ್ರೀತ್ ಬುಮ್ರಾ ಒಟ್ಟು 15 ವಿಕೆಟ್​ಗಳನ್ನು ಉರುಳಿಸಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಬುಮ್ರಾ 4 ಓವರ್​ಗಳಲ್ಲಿ ಕೇವಲ 18 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು. ಈ ಮೂಲಕ ಭಾರತ ತಂಡವು ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಹವಾ ಜೋರಾಗಿದೆ. ಇದಕ್ಕೆ ಸಾಕ್ಷಿ ಚೆನ್ನೈನಲ್ಲಿ ನಡೆದ ಇತ್ತೀಚಿನ ಕಾರ್ಯಕ್ರಮ. ಚೆನ್ನೈನ ಸತ್ಯಬಾಮಾ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಜಸ್​ಪ್ರೀತ್ ಬುಮ್ರಾ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಹೀಗೆ ಆಗಮಿಸಿದ ಬುಮ್ರಾಗೆ ಅದ್ಧೂರಿ ಸ್ವಾಗತ ಕೋರಲಾಗಿದೆ. ಅದು ಸಹ ಸಿನಿಮಾ ತಾರೆಗಳಿಗೆ ನೀಡುವಂತಹ ಗ್ರ್ಯಾಂಡ್ ವೆಲ್ಕಂ ಮೂಲಕ ಎಂಬುದು ವಿಶೇಷ. ಇದೀಗ ಈ ಅದ್ಧೂರಿ ಸ್ವಾಗತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರಿಯರಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಅಂದಹಾಗೆ ಟಿ20 ವಿಶ್ವಕಪ್ ಬಳಿಕ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಲಂಕಾ ವಿರುದ್ಧದ ಸೀಮಿತ ಓವರ್​ಗಳಿಂದ ಸರಣಿಗೆ ಅಲಭ್ಯರಾಗಿದ್ದ ಬುಮ್ರಾ ಮುಂಬರುವ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್​ ಸರಣಿಯಿಂದಲೂ ಹೊರಗುಳಿಯುವ ಸಾಧ್ಯತೆಯಿದೆ. ಅಲ್ಲದೆ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಕಂಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಏಕೆಂದರೆ ಭಾರತ ತಂಡವು ಮುಂಬರುವ ದಿನಗಳಲ್ಲಿ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಸರಣಿಗಳನ್ನು ಆಡಲಿದೆ. ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿ ಬೆನ್ನಲ್ಲೇ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ಕೂಡ ಟೆಸ್ಟ್ ಪಂದ್ಯಗಳನ್ನಾಡಬೇಕಿದೆ. ಹೀಗಾಗಿ ಭಾರತ ತಂಡದ ಪ್ರಮುಖ ವೇಗಿಯಾಗಿರುವ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ಕಲ್ಪಿಸಲು ಬಿಸಿಸಿಐ ಮುಂದಾಗಿದೆ.