Joe Root
Image Credit source: ECB
500, 1000, 2000 ಮತ್ತು 14000… ಇವು ಕೇವಲ ಅಂಕಿ-ಅಂಶಗಳಲ್ಲ, ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಮುಂದಿರುವ ದಾಖಲೆಗಳು! ಒಂದು ಕಡೆ ಕಿವೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸುವ ವಿಶ್ವದ ಮೊದಲ ಬ್ಯಾಟರ್ ಆಗುವ ಸನಿಹದಲ್ಲಿರುವ ರೂಟ್, ಮತ್ತೊಂದೆಡೆ ಇಂಗ್ಲೆಂಡ್ ತಂಡದ ಹಂಗಾಮಿ ನಾಯಕನಾಗಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ನಾಯಕತ್ವದ ಜವಾಬ್ದಾರಿಯೊಂದಿಗೆ ಮೈದಾನಕ್ಕಿಳಿಯಲಿರುವ ಜೋ ರೂಟ್ ಕಣ್ಣಿಟ್ಟಿರುವ ಪ್ರಮುಖ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ…
- 2000 ರನ್ ಗಳ ಐತಿಹಾಸಿಕ ಮೈಲಿಗಲ್ಲು: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇದುವರೆಗೆ ಆಡಿದ 22 ಟೆಸ್ಟ್ ಪಂದ್ಯಗಳಿಂದ 1,934 ರನ್ ಗಳಿಸಿದ್ದಾರೆ. ಇನ್ನು ಕೇವಲ 66 ರನ್ ಗಳಿಸಿದರೆ, ಕಿವೀಸ್ ವಿರುದ್ಧ ಟೆಸ್ಟ್ ಇತಿಹಾಸದಲ್ಲೇ 2,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರೂಟ್ ಪಾತ್ರರಾಗಲಿದ್ದಾರೆ. ಈಗಾಗಲೇ ಜಾವೇದ್ ಮಿಯಾಂದಾದ್ (1,919 ರನ್) ಅವರ 31 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿರುವ ರೂಟ್ ಲೀಡ್ಸ್ನಲ್ಲಿ ಹೊಸ ಇತಿಹಾಸ ಬರೆಯುವುದನ್ನು ಎದುರು ನೋಡಬಹುದು.
- 1000 ರನ್ಗಳ ಸರದಾರ: ನ್ಯೂಝಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ನಲ್ಲಿ 1000 ರನ್ ಕಲೆಹಾಕಿದ ದಾಖಲೆ ಬರೆಯಲು ಜೋ ರೂಟ್ಗೆ ಬೇಕಿರುವುದು ಕೇವಲ 72 ರನ್ಗಳು ಮಾತ್ರ. ಈಗಾಗಲೇ ಇಂಗ್ಲೆಂಡ್ ಪಿಚ್ನಲ್ಲಿ ಕಿವೀಸ್ ವಿರುದ್ಧ 928 ರನ್ ಕಲೆಹಾಕಿರುವ ರೂಟ್ ಈ ಬಾರಿ ಸಾವಿರ ರನ್ ಸರದಾರ ಎನಿಸಿಕೊಳ್ಳುವ ನಿರೀಕ್ಷೆಯಿದೆ.
- 14000 ಟೆಸ್ಟ್ ರನ್: ಜೋ ರೂಟ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 14,000 ಟೆಸ್ಟ್ ರನ್ ಗಳ ಬೃಹತ್ ಮೈಲಿಗಲ್ಲನ್ನು ತಲುಪುವ ಸನಿಹದಲ್ಲಿದ್ದಾರೆ. ಈಗಾಗಲೇ 13,952 ರನ್ ಗಳಿಸಿರುವ ರೂಟ್ 2ನೇ ಟೆಸ್ಟ್ನಲ್ಲಿ 48 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.
- 500 ಟೆಸ್ಟ್ ರನ್: ಜೋ ರೂಟ್ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡದ ನಾಯಕನಾಗಿ ತಮ್ಮ ಏಳನೇ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ . ಈ ಹಿಂದೆ ಆಡಿರುವ ಆರು ಟೆಸ್ಟ್‌ಗಳಲ್ಲಿ, ಅವರು 43.45 ರ ಸರಾಸರಿಯಲ್ಲಿ 478 ರನ್ ಗಳಿಸಿದ್ದಾರೆ. ಇನ್ನು 22 ನೇ ರನ್ ಗಳಿಸಿದರೆ ನ್ಯೂಝಿಲೆಂಡ್ ವಿರುದ್ಧ 500 ರನ್ ಕಲೆಹಾಕಿದ ಇಂಗ್ಲೆಂಡ್ ನಾಯಕ ಎನಿಸಿಕೊಳ್ಳಲಿದ್ದಾರೆ.
ಕ್ಯಾಪ್ಟನ್ ರೂಟ್:
ಮೊದಲ ಟೆಸ್ಟ್ ಪಂದ್ಯದ ಬಳಿಕ ತಡರಾತ್ರಿಯ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ನಾಯಕ ಬೆನ್ ಸ್ಟೋಕ್ಸ್ ಮತ್ತು ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಇಂಗ್ಲೆಂಡ್ ತಂಡದಿಂದ ಅಮಾನತುಗೊಳಿಸಲಾಗಿದೆ. ಹೀಗಾಗಿ 2ನೇ ಟೆಸ್ಟ್ ಪಂದ್ಯಕ್ಕೆ ಜೋ ರೂಟ್ ಅವರನ್ನು ಕ್ಯಾಪ್ಟನ್ ಆಗಿ ನೇಮಿಸಲಾಗಿದೆ.
ಇದನ್ನೂ ಓದಿ: ಹೊಸ ಇತಿಹಾಸ… ಒಂದೇ ದಿನ 4 ಪಂದ್ಯಗಳು ಡ್ರಾ..!
ಈ ಹಿಂದೆ ಇಂಗ್ಲೆಂಡ್ ಟೆಸ್ಟ್ ತಂಡವನ್ನು 64 ಪಂದ್ಯಗಳಲ್ಲಿ ಮುನ್ನಡೆಸಿದ್ದ ರೂಟ್ 27 ಮ್ಯಾಚ್ಗಳಲ್ಲಿ ಜಯ ತಂದು ಕೊಟ್ಟಿದ್ದರು. ಇನ್ನು ರೂಟ್ ನಾಯಕತ್ವದಲ್ಲಿ ಆಂಗ್ಲ ಪಡೆ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದರೆ, 26 ಮ್ಯಾಚ್ಗಳಲ್ಲಿ ಸೋಲನುಭವಿಸಿತ್ತು. ಇದೀಗ 65ನೇ ಪಂದ್ಯದಲ್ಲಿ ನಾಯಕನಾಗಿ ಕಣಕ್ಕಿಳಿಯಲು ಜೋ ರೂಟ್ ಸಿದ್ಧರಾಗಿದ್ದು, ಈ ಬಾರಿ ಮತ್ತೊಮ್ಮೆ ತಮ್ಮ ನಾಯಕತ್ವದ ಕಮಾಲ್ ಮಾಡಲಿದ್ದಾರಾ ಕಾದು ನೋಡಬೇಕಿದೆ.