
ದೇಶಿ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಟೂರ್ನಿಯಾದ 2026-27ನೇ ಸಾಲಿನ ರಣಜಿ ಟೂರ್ನಿಯ ಮೊದಲ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಯುವ ಆಟಗಾರ ಸ್ಮರಣ್ ರವಿಚಂದ್ರನ್ ಮುನ್ನಡೆಸಲಿದ್ದು, ತಂಡದಲ್ಲಿ ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಪ್ರಸಿದ್ಧ್ ಕೃಷ್ಣ ಸೇರಿದಂತೆ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ.
ಕಳೆದ ಬಾರಿಯ ರಣಜಿ ಸೀಸನ್ನಲ್ಲಿ ಕರ್ನಾಟಕ ತಂಡವನ್ನು ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಮುನ್ನಡೆಸಿದ್ದರು. ಈ ಬಾರಿ ಯುವ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅವರನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸ್ಮರಣ್, ಹಿರಿಯ ಆಟಗಾರರ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸುವ ಗುರುತರ ಜವಾಬ್ದಾರಿ ಹೊತ್ತಿದ್ದಾರೆ.
ಭಾರತ ರಾಷ್ಟ್ರೀಯ ತಂಡದ ಪ್ರಮುಖ ಆಟಗಾರರಾದ ಕೆ.ಎಲ್. ರಾಹುಲ್ ಮತ್ತು ವೇಗಿ ಪ್ರಸಿದ್ಧ್ ಕೃಷ್ಣ ಅವರ ಸೇರ್ಪಡೆ ಕರ್ನಾಟಕ ತಂಡದ ಬಲವನ್ನು ದುಪ್ಪಟ್ಟುಗೊಳಿಸಿದೆ. ಹಾಗೆಯೇ ಕರುಣ್ ನಾಯರ್, ಮಯಾಂಕ್ ಅಗರ್ವಾಲ್ ಅವರಂತಹ ಅನುಭವಿ ದಾಂಡಿಗರು ಕೂಡ ಕರ್ನಾಟಕ ತಂಡದಲ್ಲಿದ್ದಾರೆ.
ಕರ್ನಾಟಕದ ಖಾಯಂ ಆಟಗಾರ ದೇವದತ್ ಪಡಿಕ್ಕಲ್ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇದೇ ಅವಧಿಯಲ್ಲಿ (ಅಕ್ಟೋಬರ್ 6 ರಿಂದ 11) ನಡೆಯಲಿರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ಏಕದಿನ ಸರಣಿಗೆ ಅವರನ್ನು ಭಾರತ ‘ಎ’ ತಂಡದ ಉಪನಾಯಕನನ್ನಾಗಿ ಆಯ್ಕೆ ಮಾಡಿರುವುದರಿಂದ, ಅವರು ಈ ರಣಜಿ ಪಂದ್ಯದಿಂದ ಹೊರಗುಳಿದಿದ್ದಾರೆ. ಇನ್ನು ದೇವದತ್ ಪಡಿಕ್ಕಲ್ ಹಿಂತಿರುಗಿದರೆ ನಾಯಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಸ್ಮರಣ್ ರವಿಚಂದ್ರನ್ ಉಪನಾಯಕನಾಗಿ ತಂಡದಲ್ಲಿರಲಿದ್ದಾರೆ.
ಕರ್ನಾಟಕ ತಂಡದ ಮಾಜಿ ಯಶಸ್ವಿ ನಾಯಕ ಹಾಗೂ ವೇಗಿ ಆರ್. ವಿನಯ್ ಕುಮಾರ್ ಅವರು ಮುಖ್ಯ ತರಬೇತುದಾರರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಎದುರಿಸುತ್ತಿರುವ ಮೊದಲ ದೊಡ್ಡ ಸವಾಲು ಇದಾಗಿದೆ. ಆ ಮೂಲಕ ವಿನಯ್ ಕುಮಾರ್, ರಾಜ್ಯ ತಂಡದ ಕೋಚ್ ಆಗಿ ತಮ್ಮ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾದ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ
ಕರ್ನಾಟಕ ತಂಡ: ಸ್ಮರಣ್ ರವಿಚಂದ್ರನ್ (ನಾಯಕ), ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಶ್ರೇಯಸ್ ಗೋಪಾಲ್, ಕೆ.ಎಲ್. ಶ್ರೀಜಿತ್, ಕೃತಿಕ್ ಕೃಷ್ಣ, ಎ. ಗೌತಮ್, ಕೆ.ವಿ. ಅನೀಶ್, ಶಿಖರ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಮನ್ವಂತ್ ಕುಮಾರ್, ಎಲ್.ಆರ್. ಕುಮಾರ್, ರಿತೇಶ್ ಭಟ್ಕಲ್.