
ಕ್ರಿಕೆಟ್ ಲೋಕಕ್ಕೆ ಮತ್ತೊಬ್ಬ ಮಾರಕ ವೇಗಿಯ ಎಂಟ್ರಿಯಾಗಿದೆ. ಈ ವೇಗಿಯ ಹೆಸರು ಮಹ್ಲಿ ಬಿಯರ್ಡ್‌ಮ್ಯಾನ್. ಆಸ್ಟ್ರೇಲಿಯಾ ಪರ ಪಾದಾರ್ಪಣೆ ಮಾಡಿದ ಬಿಯರ್ಡ್‌ಮ್ಯಾನ್ ಚೊಚ್ಚಲ ಪಂದ್ಯದಲ್ಲೇ ಇಂಗ್ಲೆಂಡ್ ಬ್ಯಾಟಿಂಗ್ ಪಡೆಯನ್ನು ಅಕ್ಷರಶಃ ಧ್ವಂಸಗೊಳಿಸಿದ್ದಾರೆ. ಅದು ಸಹ ಕೇವಲ 24 ರನ್‌ಗಳಿಗೆ 6 ವಿಕೆಟ್ ಉರುಳಿಸಿ ಎಂಬುದು ವಿಶೇಷ. ಈ ಅಮೋಘ ಪ್ರದರ್ಶನದೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಕಳೆದ 38 ವರ್ಷಗಳಿಂದ ಅಜೇಯವಾಗಿದ್ದ ಭರ್ಜರಿ ದಾಖಲೆಯೊಂದನ್ನು ಸಹ ಮುರಿದಿದ್ದಾರೆ.
ಪರ್ತ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬಿಯರ್ಡ್‌ಮ್ಯಾನ್ ಅವರ ಬೆಂಕಿಯುಗುಳುವ ಬೌಲಿಂಗ್‌ಗೆ ಇಂಗ್ಲೆಂಡ್ ಬ್ಯಾಟರ್‌ಗಳು ಅಕ್ಷರಶಃ ತತ್ತರಿಸಿ ಹೋದರು. ಪರಿಣಾಮ ಇಂಗ್ಲೆಂಡ್ ತಂಡವು ಕೇವಲ 131 ರನ್‌ಗಳಿಗೆ ಆಲೌಟ್ ಆಯಿತು.
ಈ ಪಂದ್ಯದಲ್ಲಿ ಆರಂಭದಲ್ಲೇ ಮಾರಕ ದಾಳಿ ಸಂಘಟಿಸಿದ ಬಿಯರ್ಡ್‌ಮ್ಯಾನ್ ಕೇವಲ 28 ಎಸೆತಗಳಲ್ಲಿ (4.4 ಓವರ್) 5 ವಿಕೆಟ್ ಕಬಳಿಸಿದ್ದರು. ಈ ಭರ್ಜರಿ ಬೌಲಿಂಗ್ನೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಪರ ಅತಿ ವೇಗವಾಗಿ ಐದು ವಿಕೆಟ್ ಕಬಳಿಸಿದ ದಾಖಲೆ ಬರೆದರು.
ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ 7.4 ಓವರ್ಗಳನ್ನು ಎಸೆದ ಬಿಯರ್ಡ್‌ಮ್ಯಾನ್ ಕೇವಲ 24 ರನ್ ನೀಡಿ 6 ವಿಕೆಟ್ ಉರುಳಿಸಿದರು. ಈ ಮೂಲಕ ಪಾದಾರ್ಪಣೆ ಪಂದ್ಯದಲ್ಲೇ 6 ವಿಕೆಟ್ ಪಡೆದ ಆಸ್ಟ್ರೇಲಿಯಾದ ಮೊದಲ ಪುರುಷ ಬೌಲರ್ ಎಂಬ ಹೊಸ ಇತಿಹಾಸ ಬರೆದರು. ಈ ಮೂಲಕ 1988ರಲ್ಲಿ ಶ್ರೀಲಂಕಾ ವಿರುದ್ಧ ಟೋನಿ ಡೊಡೆಮೈಡ್ (21 ರನ್‌ಗಳಿಗೆ 5 ವಿಕೆಟ್) ನಿರ್ಮಿಸಿದ್ದ 38 ವರ್ಷಗಳ ಹಳೆಯ ದಾಖಲೆಯನ್ನು ಮಹ್ಲಿ ಬಿಯರ್ಡ್‌ಮ್ಯಾನ್ ಅಳಿಸಿಹಾಕಿದ್ದಾರೆ.
ಪುರುಷರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಾದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದವರ ಪಟ್ಟಿಯಲ್ಲಿ ಮಹ್ಲಿ ಬಿಯರ್ಡ್‌ಮ್ಯಾನ್ (6/24) ವಿಶ್ವದ ನಾಲ್ಕನೇ ಬೌಲರ್ ಆಗಿದ್ದಾರೆ. ಈ ದಾಖಲೆಯ ಪಟ್ಟಿಯಲ್ಲಿರುವ ಮೊದಲ ಮೂವರು ಬೌಲರ್‌ಗಳ ವಿವರ ಇಲ್ಲಿದೆ…
ಪಂದ್ಯದ 10ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗಿಳಿದ ಬಿಯರ್ಡ್‌ಮ್ಯಾನ್, ಗಂಟೆಗೆ 145 ಕಿ.ಮೀ.ಗೂ ಅಧಿಕ ವೇಗ ಮತ್ತು ನಿಖರ ಸ್ವಿಂಗ್ ಮೂಲಕ ಇಂಗ್ಲೆಂಡ್‌ಗೆ ಸಿಂಹಸ್ವಪ್ನವಾದರು. ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ (1), ಅನುಭವಿ ಬ್ಯಾಟರ್ ಜೋ ರೂಟ್ (17), ಜೋರ್ಡನ್ ಕಾಕ್ಸ್ (2), ಸ್ಯಾಮ್ ಕರನ್ (0), ಲಿಯಾಮ್ ಡಾಸನ್ (0) ಹಾಗೂ ಜೋಫ್ರಾ ಆರ್ಚರ್ (11) ಅವರ ವಿಕೆಟ್‌ಗಳನ್ನು ಕಿತ್ತು ಇಂಗ್ಲೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಬಿಯರ್ಡ್‌ಮ್ಯಾನ್ (6/24) ಮತ್ತು ಸ್ಪೆನ್ಸರ್ ಜಾನ್ಸನ್ (3/42) ಅವರ ಮಾರಕ ದಾಳಿಗೆ ಸಿಲುಕಿದ ಇಂಗ್ಲೆಂಡ್ ಕೇವಲ 33.4 ಓವರ್‌ಗಳಲ್ಲಿ 131 ರನ್‌ಗಳಿಗೆ ಸರ್ವಪತನ ಕಂಡಿತು. 132 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ನಾಯಕ ಮಿಚೆಲ್ ಮಾರ್ಷ್ ಅವರ ಸ್ಫೋಟಕ ಅರ್ಧಶತಕದ (30 ಎಸೆತಗಳಲ್ಲಿ 50 ರನ್) ನೆರವಿನಿಂದ 23.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಇದನ್ನೂ ಓದಿ: ಬಾಲ್ ವಿರೂಪ… ಆಸ್ಟ್ರೇಲಿಯಾ ಕ್ರಿಕೆಟ್ ವಿರುದ್ಧ ವಾರ್ನರ್ ಗಂಭೀರ ಆರೋಪ!
ಈ ಮೂಲಕ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇತ್ತ ಚೊಚ್ಚಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಮಹ್ಲಿ ಬಿಯರ್ಡ್‌ಮ್ಯಾನ್ ರಾತ್ರೋರಾತ್ರಿ ಕ್ರಿಕೆಟ್ ಲೋಕದ ಹೊಸ ತಾರೆಯಾಗಿ ಹೊರಹೊಮ್ಮಿದ್ದಾರೆ.