ಸೂಪರ್ ಕಿಂಗ್ಸ್ ಪರ ಐತಿಹಾಸಿಕ ಶತಕ ಸಿಡಿಸಿದ 41 ವರ್ಷದ ಫಾಫ್ ಡು ಪ್ಲೆಸಿಸ್

Texas Super Kings Triumph in MLC 2026 Opener: ಮೇಜರ್ ಲೀಗ್ ಕ್ರಿಕೆಟ್‌ನ 4ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಸಿಯಾಟಲ್ ಓರ್ಕಾಸ್‌ ತಂಡವನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಫಾಫ್ ಡು ಪ್ಲೆಸಿಸ್ 52 ಎಸೆತಗಳಲ್ಲಿ ಅಜೇಯ 113 ರನ್ ಬಾರಿಸಿ, ಟಿ20 ಲೀಗ್‌ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಆಟಗಾರ ಹಾಗೂ ಎಂಎಲ್‌ಸಿ ಇತಿಹಾಸದಲ್ಲಿ ನಾಲ್ಕು ಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆ ನಿರ್ಮಿಸಿದರು.

ಸೂಪರ್ ಕಿಂಗ್ಸ್ ಪರ ಐತಿಹಾಸಿಕ ಶತಕ ಸಿಡಿಸಿದ 41 ವರ್ಷದ ಫಾಫ್ ಡು ಪ್ಲೆಸಿಸ್
Faf Du Plessis
Image Credit source: texas super kings x

Updated on: Jun 19, 2026 | 5:13 PM

4ನೇ ಆವೃತ್ತಿಯ ಮೇಜರ್ ಲೀಗ್ ಕ್ರಿಕೆಟ್ (Major League Cricket 2026) ಇಂದಿನಿಂದ ಆರಂಭವಾಗಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (Texas Super Kings) ಹಾಗೂ ಸಿಯಾಟಲ್ ಓರ್ಕಾಸ್‌ ತಂಡಗಳು ಮುಖಾಮುಖಿಯಾಗಿದ್ದವು. ಎರಡೆರಡು ಶತಕಗಳಿಗೆ ಸಾಕ್ಷಿಯಾದ ಈ ಉದ್ಘಾಟನಾ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್‌ ತಂಡವನ್ನು ಮಣಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಗೆಲುವಿನ ಶುಭಾರಂಭ ಮಾಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡ ಟಿಮ್ ಸೈಫರ್ಟ್​ ಅವರ ಶತಕದಿಂದಾಗಿ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರ ಅಜೇಯ ಶತಕದ ನೆರವಿನಿಂದ 18.3 ಓವರ್​ಗಳಲ್ಲಿ ಗೆಲುವಿನ ನಗೆ ಬೀರಿತು.

ಟಿಮ್ ಸೈಫರ್ಟ್ ಶತಕ

ಮೊದಲು ಬ್ಯಾಟಿಂಗ್‌ ಮಾಡಿದ ಸಿಯಾಟಲ್ ಓರ್ಕಾಸ್‌ ತಂಡಕ್ಕೆ ಆರಂಭಿಕರಾದ ಟಿಮ್ ಸೈಫರ್ಟ್ ಹಾಗೂ ಶಯಾನ್ ಜಹಾಂಗೀರ್ ಸ್ಫೋಟಕ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್​ಗೆ 191 ರನ್​ಗಳ ಜೊತೆಯಾಟವನ್ನಾಡಿದರು. ಇದರಲ್ಲಿ ಟಿಮ್ ಸೈಫರ್ಟ್ 66 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ 104 ರನ್ ಬಾರಿಸಿದರೆ, ಶಯಾನ್ ಜಹಾಂಗೀರ್ 47 ಎಸೆತಗಳಲ್ಲಿ 3 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್‌ಗಳ ಸಹಿತ 78 ರನ್ ಬಾರಿಸಿದರು. ಇವರಿಬ್ಬರ ಈ ದಾಖಲೆಯ ಜೊತೆಯಾಟದಿಂದಾಗಿ ಸಿಯಾಟಲ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 220 ರನ್ ಪೇರಿಸಿತು.

52 ಎಸೆತಗಳಲ್ಲಿ 113 ರನ್ ಬಾರಿಸಿದ ಫಾಫ್

ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲ ಓವರ್​ನ ಎರಡನೇ ಎಸೆತದಲ್ಲೇ ಆಘಾತ ಎದುರಾಯಿತು. ಆರಂಭಿಕ ಸೈತೇಜ ಮುಕ್ಕಮಲ್ಲ ಶೂನ್ಯಕ್ಕೆ ಔಟಾದರು. ಆದರೆ ನಾಯಕ ಫಾಫ್ ಡು ಪ್ಲೆಸಿಸ್ ಮಾತ್ರ ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಇದರ ಪರಿಣಾಮವಾಗಿ ಕೇವಲ 45 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಫಾಫ್, ಕೇವಲ 52 ಎಸೆತಗಳನ್ನು ಎದುರಿಸಿ 113 ರನ್ ಗಳಿಸಿದರು. ಫಾಫ್ ಅವರ ಈ ಇನ್ನಿಂಗ್ಸ್​ನಿಂದಾಗಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 18.3 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.

ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ

ಮೇಜರ್ ಲೀಗ್ ಕ್ರಿಕೆಟ್​ನ ಉದ್ಘಾಟನಾ ಪಂದ್ಯದಲ್ಲಿ ಅಬ್ಬರಿಸಿರುವ ಫಾಫ್ ಡು ಪ್ಲೆಸಿಸ್, ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಪಂದ್ಯದಲ್ಲಿ ಹಲವಾರು ಪ್ರಮುಖ ದಾಖಲೆಗಳನ್ನು ಮುರಿದರು. 41 ವರ್ಷ ಮತ್ತು 341 ದಿನ ವಯಸ್ಸಿನ ಫಾಫ್ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ವಿಶ್ವದ ಎಲ್ಲಾ ಟಿ20 ಲೀಗ್‌ಗಳ ಇತಿಹಾಸದಲ್ಲಿ ಶತಕ ಬಾರಿಸಿದ ಅತ್ಯಂತ ಹಿರಿಯ ಆಟಗಾರನೆಂಬ ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆಯೂ ಈ ದಾಖಲೆ ಫಾಫ್ ಅವರ ಹೆಸರಿನಲ್ಲೇ ಇತ್ತು. ಇದೇ ಲೀಗ್​ನ ಕಳೆದ ಆವೃತ್ತಿಯಲ್ಲೂ ಫಾಫ್ 40 ಶತಕ ಬಾರಿಸಿದ್ದರು. ಈ ಮೂಲಕ 40 ವರ್ಷ ವಯಸ್ಸಿನ ನಂತರ ಎರಡು ಲೀಗ್ ಶತಕಗಳನ್ನು ಬಾರಿಸಿದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಫಾಫ್ ಪಾತ್ರರಾಗಿದ್ದಾರೆ.

ಈ ಲೀಗ್​ನಲ್ಲಿ ನಾಲ್ಕು ಶತಕಗಳು

ನಾಯಕ ಫಾಫ್ ಡು ಪ್ಲೆಸಿಸ್ ಮೇಜರ್ ಲೀಗ್ ಕ್ರಿಕೆಟ್ (ಎಂಎಲ್‌ಸಿ) ಇತಿಹಾಸದಲ್ಲಿ ನಾಲ್ಕು ಶತಕಗಳನ್ನು ಗಳಿಸಿದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಈ ಪಂದ್ಯಾವಳಿಯಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಅವರ ಹತ್ತಿರವೂ ಇಲ್ಲ. ಈ ಲೀಗ್‌ನ 26 ಇನ್ನಿಂಗ್ಸ್‌ಗಳಲ್ಲಿ, ಅವರು ನಾಲ್ಕು ಶತಕಗಳು ಮತ್ತು ಆರು ಅರ್ಧಶತಕಗಳು ಸೇರಿದಂತೆ 43.62 ಸರಾಸರಿಯಲ್ಲಿ 1047 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರ ಸ್ಟ್ರೈಕ್ ರೇಟ್ ಕೂಡ 167.25 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:42 pm, Fri, 19 June 26

Follow Us