ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೈ ಜೋಡಿಸಿ: ECB ಬಿಗ್ ಆಫರ್

ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಹುದ್ದೆಯಿಂದ ಬ್ರೆಂಡನ್ ಮೆಕಲಮ್ ವಜಾಗೊಂಡ ಬೆನ್ನಲ್ಲೇ, ಹೊಸ ಬಾಸ್ ಹುಡುಕಾಟದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಜಗತ್ತಿನ ಪ್ರಮುಖ ತರಬೇತುದಾರರಿಗೆ ಬಂಪರ್ ಆಫರ್ ಒಂದನ್ನು ನೀಡಿದೆ. ಈ ಆಫರ್​ ಮೂಲಕ ಐಪಿಎಲ್​ ಕೋಚ್​ಗಳನ್ನು ಸೆಳೆಯಲು ಇಸಿಬಿ ಮುಂದಾಗಿದೆ.

ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೈ ಜೋಡಿಸಿ: ECB ಬಿಗ್ ಆಫರ್
Dravid - Baz - Andy
Image Credit source: DB

Updated on: Jul 14, 2026 | 10:45 AM

ಬ್ರೆಂಡನ್ ಮೆಕಲಮ್ ಅವರನ್ನು ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB), ಇದೀಗ ಹೊಸ ಮುಖ್ಯ ತರಬೇತುದಾರರ ಹುಡುಕಾಟ ಆರಂಭಿಸಿದೆ. ಈ ಹುಡುಕಾಟದ ಬೆನ್ನಲ್ಲೇ ಇಸಿಬಿ, ಹೊಸ ಕೋಚ್ ಆಗಲಿರುವವರಿಗೆ ಬಿಗ್ ಆಫರ್ ಒಂದನ್ನು ಮುಂದಿಟ್ಟಿದೆ. ಆ ಆಫರ್ ಏನೆಂದರೆ ಐಪಿಎಲ್​ನಲ್ಲೂ ಕಾರ್ಯನಿರ್ವಹಿಸಿ, ನಮ್ಮೊಂದಿಗೂ ಕೆಲಸ ಮಾಡಿ ಎಂಬುದು.

ಇಸಿಬಿ ಬಿಗ್ ಆಫರ್:

ಇಂಗ್ಲೆಂಡ್ ಟೆಸ್ಟ್​ ತಂಡದ ಹೊಸ ಕೋಚ್ ಆಗುವವರು, ಐಪಿಎಲ್‌ನಲ್ಲೂ ಮುಕ್ತವಾಗಿ ಕಾರ್ಯನಿರ್ವಹಿಸಬಹುದು ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಈ ಐತಿಹಾಸಿಕ ನಿಯಮ ಬದಲಾವಣೆಯು ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮುಖ್ಯ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಅವರು ಮತ್ತೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಮರಳಲು ಹೆಬ್ಬಾಗಿಲು ತೆರೆದಿದೆ.

ಬಾಝ್ ​ಬಾಲ್ ಯುಗಾಂತ್ಯ:

ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಆಕ್ರಮಣಕಾರಿ ಆಟದ ಶೈಲಿ ಪರಿಚಯಿಸಿದ್ದ ಬ್ರೆಂಡನ್ ಮೆಕಲಮ್ ಅವರನ್ನು ಇಸಿಬಿ ಕೋಚ್ ಹುದ್ದೆಯಿಂದ ವಜಾಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡ್ ತಂಡವು ಆಡಿದ ಕೊನೆಯ 12 ಟೆಸ್ಟ್‌ಗಳಲ್ಲಿ 8 ಪಂದ್ಯಗಳನ್ನು ಸೋತು ತೀವ್ರ ಮುಖಭಂಗ ಅನುಭವಿಸಿತ್ತು.

ವಿಶೇಷವಾಗಿ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಸರಣಿಯಲ್ಲಿ 4-1 ಅಂತರದ ಹೀನಾಯ ಸೋಲು ಮತ್ತು ನ್ಯೂಝಿಲೆಂಡ್ ವಿರುದ್ಧ ತವರಿನಲ್ಲೇ ಎದುರಿಸಿದ 2-1 ಸರಣಿ ಸೋಲು ಮೆಕಲಮ್ ಅವರ ಹುದ್ದೆಗೆ ಕುತ್ತು ತಂದಿದೆ. ಆದಾಗ್ಯೂ, ಅವರು ಇಂಗ್ಲೆಂಡ್‌ನ ಸೀಮಿತ ಓವರ್‌ಗಳ (ಏಕದಿನ ಮತ್ತು ಟಿ20) ಕೋಚ್ ಆಗಿ ಮುಂದುವರಿಯಲಿದ್ದಾರೆ.

ಐಪಿಎಲ್​ ಕೋಚ್​ಗಳಿಗೆ ಗ್ರೀನ್ ಸಿಗ್ನಲ್:

ಸಾಮಾನ್ಯವಾಗಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್‌ಗಳಿಗೆ ಯಾವುದೇ ಖಾಸಗಿ ಟಿ20 ಲೀಗ್‌ಗಳಲ್ಲಿ ಕೆಲಸ ಮಾಡಲು ಇಸಿಬಿ ಅನುಮತಿ ನೀಡುತ್ತಿರಲಿಲ್ಲ. ಆದರೆ ಈಗಿನ ಆಧುನಿಕ ಕ್ರಿಕೆಟ್​ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಇಸಿಬಿ ಮುಖ್ಯ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಹೊಸ ಟೆಸ್ಟ್ ಕೋಚ್ ಇಂಗ್ಲೆಂಡ್ ತಂಡದ ಜವಾಬ್ದಾರಿಯ ಜೊತೆಜೊತೆಗೇ ಐಪಿಎಲ್ ಫ್ರಾಂಚೈಸಿಯೊಂದಿಗೂ ಕಾರ್ಯನಿರ್ವಹಿಸಲು ಇಸಿಬಿ ಒಪ್ಪಿಗೆ ಸೂಚಿಸಿದೆ.

ಫ್ಲವರ್​ ಮೇಲೆ ಇಂಗ್ಲೆಂಡ್ ಕಣ್ಣು:

ಇಸಿಬಿಯ ಈ ನಿಯಮ ಸಡಿಲಿಕೆಗೆ ಮುಖ್ಯ ಕಾರಣ ಆ್ಯಂಡಿ ಫ್ಲವರ್​ ಎನ್ನಲಾಗುತ್ತಿದೆ. ಝಿಂಬಾಬ್ವೆಯ ಮಾಜಿ ನಾಯಕರಾಗಿರುವ ಆ್ಯಂಡಿ ಫ್ಲವರ್, ಈ ಹಿಂದೆ 2009 ರಿಂದ 2014 ರವರೆಗೆ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಅದ್ಭುತ ಯಶಸ್ಸು ತಂದುಕೊಟ್ಟಿದ್ದರು. ಅವರ ಮಾರ್ಗದರ್ಶನದಲ್ಲೇ ಇಂಗ್ಲೆಂಡ್ ತಂಡವು ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿತ್ತು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಹಾಗೂ ಭಾರತದ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿತ್ತು.

ಪ್ರಸ್ತುತ ಫ್ರಾಂಚೈಸಿ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕೋಚ್ ಆಗಿರುವ ಆ್ಯಂಡಿ ಫ್ಲವರ್, ಇತ್ತೀಚೆಗಷ್ಟೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಕ್-ಟು-ಬ್ಯಾಕ್ ಐಪಿಎಲ್ ಪ್ರಶಸ್ತಿಗಳನ್ನು ತಂದುಕೊಟ್ಟು ಇತಿಹಾಸ ಸೃಷ್ಟಿಸಿದ್ದಾರೆ.

ಆ್ಯಂಡಿ ಫ್ಲವರ್ ಅವರು ಆರ್‌ಸಿಬಿ ತಂಡವನ್ನು ತೊರೆಯಲು ಇಷ್ಟಪಡದ ಕಾರಣ, ಅವರನ್ನು ಇಂಗ್ಲೆಂಡ್ ತಂಡಕ್ಕೆ ಕರೆತರಲು ಇಸಿಬಿ ಈ ‘ದ್ವಿಮುಖ ಕೋಚಿಂಗ್’ ಆಫರ್ ನೀಡಿದೆ ಎನ್ನಲಾಗುತ್ತಿದೆ.

ರೇಸ್​ನಲ್ಲಿ ರಾಹುಲ್ ದ್ರಾವಿಡ್:

ಇಸಿಬಿ ಮುಖ್ಯಸ್ಥರ ಪ್ರಕಾರ ಹೊಸ ಕೋಚ್ ಹುದ್ದೆಗಾಗಿ 6 ರಿಂದ 10 ಹೆಸರುಗಳ ಶಾರ್ಟ್‌ಲಿಸ್ಟ್ ಸಿದ್ಧಪಡಿಸಲಾಗಿದೆ.  ಈ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಹೆಸರು ಕೂಡ ಮುಂಚೂಣಿಯಲ್ಲಿದೆ. ಅಂದರೆ ಆ್ಯಂಡಿ ಫ್ಲವರ್​ ಹಾಗೂ ದ್ರಾವಿಡ್ ನಡುವೆ ನೇರ ಪೈಪೋಟಿ ಇದ್ದು, ಇಬ್ಬರಲ್ಲಿ ಒಬ್ಬರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಹೆಚ್ಚಿನ ಆಸಕ್ತಿ ಹೊಂದಿದೆ. ಹಾಗೆಯೇ ಈ ಪಟ್ಟಿಯಲ್ಲಿರುವ ಇತರ ಪ್ರಮುಖರೆಂದರೆ

  • ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್)
  • ಜಸ್ಟಿನ್ ಲ್ಯಾಂಗರ್ (ಆಸ್ಟ್ರೇಲಿಯಾದ ಮಾಜಿ ಕೋಚ್)
  • ಸ್ಟೀಫನ್ ಫ್ಲೆಮಿಂಗ್ (ಸಿಎಸ್‌ಕೆ ಕೋಚ್)
  • ಆ್ಯಂಡಿ ಫ್ಲವರ್ (ಇಂಗ್ಲೆಂಡ್ ಮಾಜಿ ಕೋಚ್)
  • ರಾಹುಲ್ ದ್ರಾವಿಡ್ (ಭಾರತದ ಮಾಜಿ ಕೋಚ್)

ಇದನ್ನೂ ಓದಿ: ಫ್ರಾನ್ಸ್​ vs ಸ್ಪೇನ್ ಅಲ್ಲ, ರಿಯಲ್ ಮ್ಯಾಡ್ರಿಡ್ vs ಬಾರ್ಸಿಲೋನಾ!

2027ರ ಪ್ರತಿಷ್ಠಿತ ಆ್ಯಶಸ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಂಡವನ್ನು ಮರುಸಂಘಟಿಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ  ಈಗಿನಿಂದಲೇ ಹೊಸ ಕೋಚ್ ಹುಡುಕಾಟವನ್ನು ಚುರುಕುಗೊಳಿಸಿದೆ. ಈ ಮಹತ್ವದ ರೇಸ್‌ನಲ್ಲಿ ಸದ್ಯ ಐವರು ಮಾಜಿ ದಿಗ್ಗಜ ಆಟಗಾರರ ಹೆಸರುಗಳು ಮುಂಚೂಣಿಯಲ್ಲಿದ್ದು, ಇವರಲ್ಲಿ ಯಾರು ಇಂಗ್ಲೆಂಡ್ ಟೆಸ್ಟ್ ತಂಡದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

 

Follow Us