
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಕಿವೀಸ್ ಪಡೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಫಿಟ್ನೆಸ್ ಸಮಸ್ಯೆ ಹಾಗೂ ಕಾರ್ಯಭಾರದ ನಿರ್ವಹಣೆಗಾಗಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ಮೂವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದರಂತೆ ತಂಡದಿಂದ ಹೊರಬಿದ್ದಿರುವ ಹಾಗೂ ಟೀಮ್ಗೆ ಎಂಟ್ರಿ ಕೊಟ್ಟಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಮ್ಯಾಟ್ ಹೆನ್ರಿ: ಎರಡನೇ ಟಿ20 ಪಂದ್ಯದ ವೇಳೆ ಮ್ಯಾಟ್ ಹೆನ್ರಿ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಇಡೀ ಟಿ20 ಸರಣಿಯಿಂದ ಇವರು ಹೊರಬಿದ್ದಿದ್ದು, ನೇರವಾಗಿ ಮುಂಬರುವ ಏಕದಿನ ಸರಣಿಗೆ ಲಭ್ಯರಿರಲಿದ್ದಾರೆ.
ಲಾಕಿ ಫರ್ಗುಸನ್: ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಲಾಕಿ ಫರ್ಗುಸನ್ ಅವರಿಗೆ 3ನೇ ಟಿ20 ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ. ಇವರು ಆಕ್ಲೆಂಡ್‌ಗೆ ಮರಳಲಿದ್ದು, ಸರಣಿಯ ಕೊನೆಯ ಎರಡು ಪಂದ್ಯಗಳ ವೇಳೆ ಮರಳಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.
ಕೈಲ್ ಜೇಮಿಸನ್: ಮೂರನೇ ಟಿ20 ಪಂದ್ಯದ ಮುಕ್ತಾಯದ ನಂತರ ಇವರು ದೇಶಿ ಕ್ರಿಕೆಟ್ ಆಡಲು ವೆಲ್ಲಿಂಗ್ಟನ್‌ನಲ್ಲೇ ಉಳಿಯಲಿದ್ದು, ಸರಣಿಯ ಮುಂದಿನ ಪಂದ್ಯಗಳಲ್ಲಿ ಭಾಗವಹಿಸುವುದಿಲ್ಲ.
ಮಾರ್ಕ್ ಚಾಪ್‌ಮನ್: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಕ್ ಚಾಪ್‌ಮನ್ ಅವರನ್ನು ಇಡೀ ಸರಣಿಯಿಂದ ಕೈ ಬಿಡಲಾಗಿದೆ.
ಝಾಕ್ ಫೋಲ್ಕ್ಸ್: ನ್ಯೂಝಿಲೆಂಡ್ ವೇಗಿ ಝಾಕ್ ಫೋಲ್ಕ್ಸ್ ಇನ್ನೂ ಕೂಡ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಸರಣಿಯ ಮುಂದಿನ ಪಂದ್ಯಗಳಿಗೂ ಫೋಲ್ಕ್ಸ್ ಅಲಭ್ಯರಾಗಲಿದ್ದಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
ಜೋಶ್ ಕ್ಲಾರ್ಕ್ಸನ್: ಅನುಭವಿ ವೇಗಿ ಜೋಶ್ ಕ್ಲಾರ್ಕ್ಸನ್ ವೆಲ್ಲಿಂಗ್ಟನ್ ಪಂದ್ಯದ ಭಾಗವಾಗಿರುವುದಿಲ್ಲ. ಬದಲಿಗೆ ಆಕ್ಲೆಂಡ್‌ನಲ್ಲಿ ನಡೆಯಲಿರುವ 4ನೇ ಮತ್ತು 5ನೇ ಟಿ20 ಪಂದ್ಯಗಳಿಗೆ ಮಾತ್ರ ನ್ಯೂಝಿಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ
ಬ್ಲೇರ್ ಟಿಕ್ನರ್: ಮ್ಯಾಟ್ ಹೆನ್ರಿ ಅವರ ಅನುಪಸ್ಥಿತಿಯಲ್ಲಿ ಮೂರನೇ ಪಂದ್ಯಕ್ಕೂ ಮುನ್ನ ಬ್ಲೇರ್ ಟಿಕ್ನರ್ ನ್ಯೂಝಿಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಮ್ಯಾಟ್ ಫಿಶರ್: ಲಾಕಿ ಫರ್ಗುಸನ್ ಹೊರಗುಳಿದಿರುವ ಕಾರಣ 3ನೇ ಟಿ20 ಪಂದ್ಯಕ್ಕಾಗಿ ಬ್ಯಾಕ್-ಅಪ್ ಆಟಗಾರನಾಗಿ ಮ್ಯಾಟ್ ಫಿಶರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಯುವ ಆಟಗಾರ ಎಂಟ್ರಿ: ಯಾರು ಈ ಕುಮಾರ್ ಕುಶಾಗ್ರ?
ಒಟ್ಟಾರೆಯಾಗಿ, ಸರಣಿಯಲ್ಲಿ 0-2 ಹಿನ್ನಡೆಯಲ್ಲಿರುವ ನ್ಯೂಝಿಲೆಂಡ್ ತಂಡಕ್ಕೆ, ಈ 5 ಆಟಗಾರರ ಬದಲಾವಣೆ ಮತ್ತು ಕಾರ್ಯಭಾರ ನಿರ್ವಹಣೆಯ ತ್ರವು ಸರಣಿಯಲ್ಲಿ ಪುನರಾಗಮನ ಮಾಡಲು ಎಷ್ಟು ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
Published On - 7:39 am, Sun, 25 October 26