ಆಫ್ರಿಕಾ ವಿರುದ್ಧ 102 ರನ್‌ಗಳ ಸೋಲುಂಡ ಶ್ರೀಲಂಕಾಕ್ಕೆ ದಂಡದ ಬರೆ ಎಳೆದ ಐಸಿಸಿ..!

|

Updated on: Oct 08, 2023 | 10:02 PM

ODI World Cup 2023: ಏಕದಿನ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 102 ರನ್‌ಗಳ ಬೃಹತ್ ಸೋಲು ಕಂಡಿದ್ದ ಶ್ರೀಲಂಕಾ ತಂಡಕ್ಕೆ ಇದೀಗ ಐಸಿಸಿ ದಂಡದ ಬರೆ ಎಳೆದಿದೆ. ನಿಧಾನಗತಿಯ ಓವರ್ ರೇಟ್‌ನಿಂದಾಗಿ ಐಸಿಸಿ ಶ್ರೀಲಂಕಾಕ್ಕೆ ದಂಡ ವಿಧಿಸಿದ್ದು, ಪಂದ್ಯದ ಶುಲ್ಕದ 10 ಪ್ರತಿಶತವನ್ನು ದಂಡವಾಗಿ ಪಾವತಿಸಬೇಕಾಗಿದೆ.

ಆಫ್ರಿಕಾ ವಿರುದ್ಧ 102 ರನ್‌ಗಳ ಸೋಲುಂಡ ಶ್ರೀಲಂಕಾಕ್ಕೆ ದಂಡದ ಬರೆ ಎಳೆದ ಐಸಿಸಿ..!
ಶ್ರೀಲಂಕಾ ಕ್ರಿಕೆಟ್ ತಂಡ
Follow us on

ಏಕದಿನ ವಿಶ್ವಕಪ್​ನ (World Cup 2023) ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 102 ರನ್‌ಗಳ ಬೃಹತ್ ಸೋಲು ಕಂಡಿದ್ದ ಶ್ರೀಲಂಕಾ (South Africa vs Sri lanka) ತಂಡಕ್ಕೆ ಇದೀಗ ಐಸಿಸಿ ದಂಡದ ಬರೆ ಎಳೆದಿದೆ. ನಿಧಾನಗತಿಯ ಓವರ್ ರೇಟ್‌ನಿಂದಾಗಿ ಐಸಿಸಿ (ICC) ಶ್ರೀಲಂಕಾಕ್ಕೆ ದಂಡ ವಿಧಿಸಿದ್ದು, ಪಂದ್ಯದ ಶುಲ್ಕದ 10 ಪ್ರತಿಶತವನ್ನು ದಂಡವಾಗಿ ಪಾವತಿಸಬೇಕಾಗಿದೆ. ಐಸಿಸಿ ನಿಯಮಗಳ ಪ್ರಕಾರ 50 ಓವರ್‌ಗಳ ಪಂದ್ಯವನ್ನು ನಿರ್ದಿಷ್ಟ ಸಮಯದೊಳಗೆ ಪೂರ್ಣಗೊಳಿಸಬೇಕು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ಬೌಲಿಂಗ್ ಮಾಡುವಾಗ ಶ್ರೀಲಂಕಾ ನಿಗದಿತ ಸಮಯದಲ್ಲಿ 50 ಓವರ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ನಾಯಕ ದಸುನ್ ಶನಕ (Dasun Shanaka) ನೇತೃತ್ವದ ಶ್ರೀಲಂಕಾ ತಂಡ ನಿಗದಿತ ಸಮಯಕ್ಕೆ 2 ಓವರ್ ಕಡಿಮೆ ಬೌಲ್ ಮಾಡಿತ್ತು. ಹೀಗಾಗಿ ಶ್ರೀಲಂಕಾ ವಿರುದ್ಧ ಐಸಿಸಿ ಈ ಕ್ರಮ ಕೈಗೊಂಡಿದೆ.

ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ

ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯ ಜಾವಗಲ್ ಶ್ರೀನಾಥ್ ಈ ದಂಡವನ್ನು ವಿಧಿಸಿದ್ದಾರೆ. ಶ್ರೀಲಂಕಾ ನಾಯಕ ದಸುನ್ ಶನಕ ಈ ಅಪರಾಧವನ್ನು ಒಪ್ಪಿಕೊಂಡಿದ್ದು, ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲವೆಂದು ಐಸಿಸಿ ನಿರ್ಧರಿಸಿದೆ.

ಶ್ರೀಲಂಕಾ ತಂಡಕ್ಕೆ ಆಘಾತ; ಸ್ಟಾರ್ ಸ್ನಿನ್ನರ್ ಮೊದಲ ವಿಶ್ವಕಪ್ ಪಂದ್ಯಕ್ಕೆ ಅಲಭ್ಯ..!

429 ರನ್‌ಗಳ ಬೃಹತ್ ಗುರಿ

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 429 ರನ್‌ಗಳ ಬೃಹತ್ ಗುರಿ ನೀಡಿತು. ತಮ್ಮ ಕೊನೆಯ ವಿಶ್ವಕಪ್‌ನಲ್ಲಿ ಆಡುತ್ತಿರುವ ಡಿ ಕಾಕ್ ಮೊದಲ ಪಂದ್ಯದಲ್ಲಿಯೇ ಅಬ್ಬರಿಸಿ ಕೇವಲ 83 ಎಸೆತಗಳಲ್ಲಿ 18ನೇ ಏಕದಿನ ಶತಕ ದಾಖಲಿಸಿದರು. ಇದಲ್ಲದೆ ರಾಸ್ಸಿ ವ್ಯಾನ್ ಡೆರ್ ದುಸೇನ್ ಜೊತೆಗೂಡಿ ಎರಡನೇ ವಿಕೆಟ್‌ಗೆ 204 ರನ್‌ಗಳ ಜೊತೆಯಾಟವನ್ನು ಮಾಡಿದರು. ದುಸೇನ್ ಕೂಡ ಅದ್ಭುತ ಶತಕ ಗಳಿಸಿ 108 ರನ್​ಗಳಿಗೆ ಔಟಾದರು.

49 ಎಸೆತಗಳಲ್ಲಿ ಶತಕ ಪೂರೈಸಿದ ಮಾರ್ಕ್ರಾಮ್

ಇವರಿಬ್ಬರ ನಂತರ ಐಡೆನ್ ಮಾರ್ಕ್ರಾಮ್ ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ಬರೆದರು. ಮಾರ್ಕ್ರಾಮ್ (106 ರನ್, 14 ಬೌಂಡರಿ, 3 ಸಿಕ್ಸರ್) ಕೆವಿನ್ ಓಬ್ರಿಯನ್ ಅವರ ವೇಗದ ಶತಕದ ದಾಖಲೆಯನ್ನು ಮುರಿದರು. ವಿಶ್ವಕಪ್‌ನಲ್ಲಿ ಒಂದೇ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿದ್ದು ಇದೇ ಮೊದಲು.

326 ರನ್‌ಗಳಿಗೆ ಆಲೌಟ್

ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಕೂಡ ಗೆಲುವಿಗಾಗಿ ಹೋರಾಟ ನೀಡಿತು. ಆದರೆ ಕುಸಾಲ್ ಮೆಂಡಿಸ್ (76), ಚರಿತ್ ಅಸಲಂಕಾ (79) ಮತ್ತು ದಸುನ್ ಶನಕ (68) ಅವರ ಗಮನಾರ್ಹ ಕೊಡುಗೆಯ ಹೊರತಾಗಿಯೂ ಅಂತಿಮವಾಗಿ 44.5 ಓವರ್‌ಗಳಲ್ಲಿ 326 ರನ್‌ಗಳಿಗೆ ಆಲೌಟ್ ಆಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ