
2026 ರ ಏಷ್ಯನ್ ಗೇಮ್ಸ್ ಕ್ರಿಕೆಟ್‌ನಲ್ಲಿ ಓಮನ್ ಮತ್ತು ಹಾಂಗ್ ಕಾಂಗ್ ಚೀನಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಹಾಂಗ್ ಕಾಂಗ್ ಚೀನಾ ತಂಡ, ಓಮನ್ ತಂಡವನ್ನು 41 ರನ್‌ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ಚೀನಾ 121 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಓಮನ್ 80 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಇದು ಪಂದ್ಯದ ಸಾರಾಂಶವಾದರೆ, ಇದರ ಜೊತೆಗೆ ಈ ಪಂದ್ಯ ಮತ್ತೊಂದು ಅಪರೂಪದ ಕಾರಣಕ್ಕೆ ಸುದ್ದಿಯಾಗಿದೆ. ಈ ಪಂದ್ಯದಲ್ಲಿ ಓಮನ್ ಪರ ಕಣಕ್ಕಿಳಿದಿದ್ದ ಹನ್ನೊಂದು ಆಟಗಾರರಲ್ಲಿ 7 ಆಟಗಾರರು ಒಂದೇ ಉಪನಾಮವನ್ನು ಹೊಂದಿದ್ದರು.
ಒಮಾನ್‌ನ ಆಡುವ ಹನ್ನೊಂದರ ಬಳಗದಲ್ಲಿ ಮೊಹಮ್ಮದ್ ಅಲ್ ಬಲುಶಿ, ಶುಯೈಬ್ ಅಲ್ ಬಲುಶಿ, ಜುಬೈರ್ ಅಲ್ ಬಲುಶಿ, ವಹೀದ್ ಅಲ್ ಬಲುಶಿ, ಐಸಾ ಅಲ್ ಬಲುಶಿ, ನವೀದ್ ಅಲ್ ಬಲುಶಿ ಮತ್ತು ಫಾರಿಸ್ ಅಲ್ ಬಲುಶಿ ಸ್ಥಾನ ಪಡೆದಿದ್ದರು. ಇದರರ್ಥ ತಂಡದ 11 ಆಟಗಾರರಲ್ಲಿ ಏಳು ಮಂದಿ ‘ಅಲ್ ಬಲುಶಿ’ ಎಂಬ ಉಪನಾಮವನ್ನು ಹೊಂದಿದ್ದರು. ಇದಲ್ಲದೆ, ಏಷ್ಯನ್ ಗೇಮ್ಸ್ಗೆ ಆಯ್ಕೆಯಾಗಿರುವ ಓಮನ್ ತಂಡದಲ್ಲಿ ಈ ಉಪನಾಮ ಹೊಂದಿರುವ ಒಂಬತ್ತು ಆಟಗಾರರಿದ್ದಾರೆ. ವಸೀಮ್ ಅಲ್ ಬಲುಶಿ ಮತ್ತು ಖೈಸ್ ಅಲ್ ಬಲುಶಿ ಕೂಡ ತಂಡದ ಭಾಗವಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಅಲ್ ಬಲುಶಿ ಉಪನಾಮ ಹೊಂದಿರುವ ಏಳು ಆಟಗಾರರ ಪ್ರದರ್ಶನ ಹೇಗಿತ್ತು ಎಂಬುದನ್ನು ನೋಡುವುದಾದರೆ.. ಆರಂಭಿಕರಾಗಿ ಕಣಕ್ಕಿಳಿದಿದ್ದ ಮೊಹಮ್ಮದ್ ಅಲ್ ಬಲುಶಿ 2 ರನ್ ಕಲೆಹಾಕಿದರೆ, ಶುಯೈಬ್ ಅಲ್ ಬಲುಶಿ 20 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜುಬೈರ್ ಅಲ್ ಬಲುಶಿ ಸೊನ್ನೆ ಸುತ್ತಿದರೆ, 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಹೀದ್ ಅಲ್ ಬಲುಶಿ 1 ರನ್‌ಗಳಿಗೆ ಸುಸ್ತಾದರು. 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಈಸಾ ಅಲ್ ಬಲುಶಿ 7 ರನ್ ಕಲೆಹಾಕಿದರು. ಈ ಆಟಗಾರರು ಬೌಲಿಂಗ್ ವಿಭಾಗದಲ್ಲಿಯೂ ಕೊಡುಗೆ ನೀಡಿದರು. ಇವರಲ್ಲಿ ಬೌಲಿಂಗ್ನಲ್ಲೂ ಕೊಡುಗೆ ನೀಡಿದ ಮೊಹಮ್ಮದ್ ಅಲ್ ಬಲುಶಿ 17 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹಾಂಗ್ ಕಾಂಗ್ ಚೀನಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 121 ರನ್ ಗಳಿಸಿತು. ತಂಡದ ಪರ ಮುಹಮ್ಮದ್ ಹಫೀಜ್ ಖಾನ್ ಅತ್ಯಧಿಕ 33 ರನ್ಗಳ ಇನ್ನಿಂಗ್ಸ್ ಆಡಿದರು. ಬಾಬರ್ ಹಯಾತ್ 23 ರನ್ ಮತ್ತು ನಾಯಕ ಯಾಸಿಮ್ ಮುರ್ತಜಾ 18 ರನ್ಗಳ ಕಾಣಿಕೆ ನೀಡಿದರು. ಗುರಿಯನ್ನು ಬೆನ್ನಟ್ಟಿದ ಓಮನ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 80 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ನಾಯಕ ಸುಫ್ಯಾನ್ ಮೆಹಮೂದ್ ಅತ್ಯಧಿಕ 26 ರನ್ಗಳ ಇನ್ನಿಂಗ್ಸ್ ಆಡಿದರೆ, ಶುಐಬ್ ಇಸ್ಮಾಯಿಲ್ ಅಲ್ ಬಲೂಶಿ 20 ರನ್ಗಳ ಕಾಣಿಕೆ ನೀಡಿದರು. ಉಳಿದ ಯಾರಿಗೂ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ.
Published On - 10:40 pm, Fri, 25 September 26