ಉಸ್ಮಾನ್ ಖವಾಜಾ ವಿರುದ್ಧ ಪ್ಯಾಟ್ ಕಮ್ಮಿನ್ಸ್ ಗರಂ; 8 ವರ್ಷಗಳ ಬಳಿಕ ಸ್ಫೋಟಕ ಹೇಳಿಕೆ

ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 2018ರ ಸ್ಯಾಂಡ್‌ಪೇಪರ್‌ಗೇಟ್ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಮಾಜಿ ಸಹ ಆಟಗಾರ ಉಸ್ಮಾನ್ ಖವಾಜಾ ಆತ್ಮಚರಿತ್ರೆಯಲ್ಲಿ ಮಾಡಿರುವ ಆರೋಪಗಳನ್ನು ಕಮ್ಮಿನ್ಸ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಚೆಂಡು ವಿರೂಪಗೊಳಿಸುವಿಕೆ ಬಗ್ಗೆ ತಂಡದ ಎಲ್ಲರಿಗೂ ತಿಳಿದಿತ್ತು ಎಂಬ ಖವಾಜಾ ಹೇಳಿಕೆ "100% ಸುಳ್ಳು ಮತ್ತು ಅಸಂಬದ್ಧ" ಎಂದು ಕಮ್ಮಿನ್ಸ್ ಖಡಾಖಂಡಿತವಾಗಿ ಹೇಳಿದ್ದಾರೆ. ಈ ಆರೋಪಗಳು ತಮ್ಮ ಕುಟುಂಬದ ಮೇಲೆ ಪರಿಣಾಮ ಬೀರಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಉಸ್ಮಾನ್ ಖವಾಜಾ ವಿರುದ್ಧ ಪ್ಯಾಟ್ ಕಮ್ಮಿನ್ಸ್ ಗರಂ; 8 ವರ್ಷಗಳ ಬಳಿಕ ಸ್ಫೋಟಕ ಹೇಳಿಕೆ
Pat Cummins

Updated on: Nov 13, 2026 | 10:22 AM

2018ರ ಸ್ಯಾಂಡ್‌ಪೇಪರ್‌ಗೇಟ್ ಚೆಂಡು ವಿರೂಪಗೊಳಿಸಿದ ವಿವಾದದ ಬಗ್ಗೆ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಕೊನೆಗೂ ಮೌನ ಮುರಿದಿದ್ದಾರೆ. ಮಾಜಿ ಸಹ ಆಟಗಾರ ಉಸ್ಮಾನ್ ಖವಾಜಾ ತಮ್ಮ ಆತ್ಮಚರಿತ್ರೆಯಲ್ಲಿ ಮಾಡಿರುವ ಆರೋಪಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಸಿಡ್ನಿಯಲ್ಲಿ ಬರೋಬ್ಬರಿ 68 ನಿಮಿಷಗಳ ಕಾಲ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮ್ಮಿನ್ಸ್, ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಚೆಂಡಿಗೆ ಮರಳು ಕಾಗದ ಬಳಸುತ್ತಿರುವ ವಿಚಾರ ತಂಡದ ಎಲ್ಲ ಆಟಗಾರರಿಗೂ ತಿಳಿದಿತ್ತು ಎಂಬ ಖವಾಜಾ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಆರೋಪದಲ್ಲಿ ಯಾವುದೇ ಸತ್ಯವಿಲ್ಲ. ಇದು ಶೇ.100ರಷ್ಟು ಸುಳ್ಳು ಮತ್ತು ಅಸಂಬದ್ಧ ಎಂದು ಕಮ್ಮಿನ್ಸ್ ಕಿಡಿಕಾರಿದ್ದಾರೆ.

ಖವಾಜಾ ವಿರುದ್ಧ ಕಮ್ಮಿನ್ಸ್ ಆಕ್ರೋಶ

ಕಳೆದ ಎಂಟು ವರ್ಷಗಳಿಂದಲೂ ತಾವು ಒಂದೇ ಮಾತನ್ನು ಹೇಳುತ್ತಾ ಬಂದಿದ್ದು, ಚೆಂಡಿಗೆ ಮರಳು ಕಾಗದ ಬಳಸುವ ವಿಚಾರ ತಮಗೆ ಮೊದಲೇ ತಿಳಿದಿರಲಿಲ್ಲ ಎಂದು ಕಮ್ಮಿನ್ಸ್ ಸ್ಪಷ್ಟಪಡಿಸಿದ್ದಾರೆ. ಮರಳು ಕಾಗದ ಬಳಸುವಾಗ ಎಚ್ಚರಿಕೆಯಿಂದ ಇರುವಂತೆ ಕ್ಯಾಮರೂನ್ ಬ್ಯಾನ್‌ಕ್ರಾಫ್ಟ್‌ಗೆ ತಾವು ಎಚ್ಚರಿಕೆ ನೀಡಿದ್ದಾಗಿ ಖವಾಜಾ ತಮ್ಮ ಪುಸ್ತಕದಲ್ಲಿ ಬರೆದಿರುವುದು ಕಮ್ಮಿನ್ಸ್‌ಗೆ ಅಚ್ಚರಿ ಮತ್ತು ನೋವು ತಂದಿದೆಯಂತೆ. ನ್ಯೂ ಸೌತ್ ವೇಲ್ಸ್ ಹಾಗೂ ಆಸ್ಟ್ರೇಲಿಯಾ ತಂಡಗಳಲ್ಲಿ ಸುಮಾರು 15 ವರ್ಷಗಳ ಕಾಲ ಖವಾಜಾ ಜೊತೆ ಆಡಿರುವ ಕಮ್ಮಿನ್ಸ್, ಈ ಆರೋಪಗಳಿಂದ ತಮ್ಮ ಕುಟುಂಬದ ಮೇಲೂ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Loading...

ಈ ಬಗ್ಗೆ ಮಾತನಾಡಿದ ಅವರು, ‘ತಂಡದ ಎಲ್ಲರಿಗೂ ಈ ವಿಚಾರ ಗೊತ್ತಿತ್ತು ಎಂದು ಖವಾಜಾ ಹೇಳಿರುವುದು ಸಂಪೂರ್ಣ ತಪ್ಪು. ಮೈದಾನದಲ್ಲಿ ಮರಳು ಕಾಗದ ಬಳಕೆಯಾಗುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಸೇರಿದಂತೆ ಇತರ ಆಟಗಾರರು ಈ ಪಿತೂರಿಯ ಭಾಗವಾಗಿದ್ದೆವು ಎಂದು ಹೇಳುವುದು ಸಂಪೂರ್ಣ ಅಸಂಬದ್ಧ. ಉಸ್ಮಾನ್ ನನ್ನ ಸ್ನೇಹಿತ. ಆದರೆ ಸ್ನೇಹಿತರು ಪರಸ್ಪರರ ಜೀವನ ಮತ್ತು ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅವರ ಪುಸ್ತಕದಲ್ಲಿ ನನ್ನ ಹೆಸರು, ಇತರ ಆಟಗಾರರ ಹೆಸರು ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್‌ನ ಗೌರವವನ್ನು ಬಹಳ ಹಗುರವಾಗಿ ಪರಿಗಣಿಸಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯಾವುದೇ ಮಾಸ್ಟರ್ ಪ್ಲ್ಯಾನ್ ಇರಲಿಲ್ಲ

2018ರ ವಿವಾದದ ಕುರಿತು ಮಾತನಾಡಿದ ಕಮ್ಮಿನ್ಸ್, ಅಂದಿನ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲಬೇಕೆಂಬ ಮನಸ್ಥಿತಿ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ತಂಡದಲ್ಲಿ ಗುಂಪುಗಾರಿಕೆಯೂ ಇತ್ತು. ಆದರೆ ಈಗ ಅಂತಹ ವಾತಾವರಣ ಇಲ್ಲ ಎಂದು ಹೇಳಿದ್ದಾರೆ. ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಲು ಮರಳು ಕಾಗದ ಬಳಸುವ ಬಗ್ಗೆ ಯಾವುದೇ ಮಾಸ್ಟರ್ ಪ್ಲ್ಯಾನ್ ಅಥವಾ ತಂಡದ ಸಭೆ ನಡೆದಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಪ್‌ಟೌನ್ ಟೆಸ್ಟ್‌ಗೂ ಮುನ್ನ ನಡೆದ ಪೋರ್ಟ್ ಎಲಿಜಬೆತ್ ಟೆಸ್ಟ್‌ನಲ್ಲೂ ಬೌಂಡರಿ ಬಳಿ ಚೆಂಡಿಗೆ ಮರಳು ಕಾಗದ ಉಜ್ಜಲಾಗಿತ್ತು ಎಂದು ಖವಾಜಾ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರವೂ ತಮಗೆ ಆಘಾತ ತಂದಿದೆ ಎಂದು ಕಮ್ಮಿನ್ಸ್ ತಿಳಿಸಿದ್ದಾರೆ. ಅಂಪೈರ್‌ಗಳೇ ಮೈದಾನದ ಮಧ್ಯದಲ್ಲಿ ಚೆಂಡನ್ನು ಆಟಗಾರರಿಗೆ ನೀಡುತ್ತಿದ್ದ ಕಾರಣ, ಈ ಘಟನೆ ನಡೆದಿರುವುದು ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ.

8 ವರ್ಷಗಳ ಬಳಿಕ ಸ್ಯಾಂಡ್‌ಪೇಪರ್ ವಿವಾದಕ್ಕೆ ಹೊಸ ತಿರುವು; ಖವಾಜಾಗೆ ವಾರ್ನರ್ ಬೆಂಬಲ

ತಂಡದ ಸಭೆ ನಡೆದಿದ್ದ ನೆನಪಿಲ್ಲ ಎಂದ ಕಮ್ಮಿನ್ಸ್

ಈ ವಿವಾದದ ಸಂಪೂರ್ಣ ಹೊಣೆಯನ್ನು ತಂಡವೇ ಸಾಮೂಹಿಕವಾಗಿ ಹೊತ್ತುಕೊಳ್ಳಬೇಕು ಎಂಬ ವಿಚಾರವನ್ನು ಖವಾಜಾ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಈ ಪ್ರಸ್ತಾಪಕ್ಕೆ ಇಬ್ಬರು ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು ಎಂದೂ ಬರೆದಿದ್ದಾರೆ. ಆದರೆ ಇಂತಹ ಯಾವುದೇ ತಂಡದ ಸಭೆ ಅಥವಾ ಚರ್ಚೆ ನಡೆದಿರುವುದು ತಮ್ಮ ನೆನಪಿನಲ್ಲಿ ಇಲ್ಲ ಎಂದು ಕಮ್ಮಿನ್ಸ್ ಹೇಳಿದ್ದಾರೆ.

ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಚೆಂಡು ವಿರೂಪಗೊಳಿಸುವುದನ್ನು ಕೇವಲ ಒಮ್ಮೆ ಮಾತ್ರ ನೋಡಿದ್ದೇನೆ ಎಂದೂ ಅವರು ಬಹಿರಂಗಪಡಿಸಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ನ್ಯೂ ಸೌತ್ ವೇಲ್ಸ್ ತಂಡದ ಹಿರಿಯ ಬ್ಯಾಟರ್ ಒಬ್ಬರು ಶೆಫೀಲ್ಡ್ ಶೀಲ್ಡ್ ಪಂದ್ಯದಲ್ಲಿ ಬಾಟಲ್ ಕ್ಯಾಪ್ ಬಳಸಿ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದ್ದರು. ಆದರೆ ಅಂಪೈರ್‌ಗಳು ತಕ್ಷಣವೇ ಅದನ್ನು ತಡೆದಿದ್ದರು ಎಂದು ಕಮ್ಮಿನ್ಸ್ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us