ಸಲ್ಮಾನ್ ಅಘಾಗೆ ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಗೇಟ್​ಪಾಸ್..!

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆ ಮುಂದುವರೆದಿದೆ. ಶ್ರೀಲಂಕಾ ಟಿ20 ಸರಣಿ ಮತ್ತು ಏಕದಿನ ತ್ರಿಕೋನ ಸರಣಿಗೆ ತಂಡಗಳನ್ನು ಪ್ರಕಟಿಸಲಾಗಿದೆ. ಸಲ್ಮಾನ್ ಅಲಿ ಅಘಾ ಅವರನ್ನು ಟಿ20 ನಾಯಕತ್ವದಿಂದ ಮತ್ತು ತಂಡದಿಂದ ಹೊರಹಾಕಿ, ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಹೊಸ ಟಿ20 ನಾಯಕನಾಗಿ ನೇಮಿಸಲಾಗಿದೆ. ಏಷ್ಯನ್ ಗೇಮ್ಸ್‌ನಲ್ಲಿ ಫರ್ಹಾನ್ ನಾಯಕತ್ವದಲ್ಲಿ ತಂಡ ಬೆಳ್ಳಿ ಪದಕ ಗೆದ್ದಿತ್ತು. ಶಾಹೀನ್ ಅಫ್ರಿದಿ ಏಕದಿನ ನಾಯಕತ್ವ ಉಳಿಸಿಕೊಂಡಿದ್ದಾರೆ.

ಸಲ್ಮಾನ್ ಅಘಾಗೆ ನಾಯಕತ್ವದ ಜೊತೆಗೆ ಟಿ20 ತಂಡದಿಂದಲೂ ಗೇಟ್​ಪಾಸ್..!
ಸಲ್ಮಾನ್ ಅಲಿ ಅಘಾ
Image Credit source: PTI

Updated on: Oct 05, 2026 | 9:33 PM

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾಯಕತ್ವ ಬದಲಾವಣೆಗಳ ಸರಣಿ ನಿರಂತರವಾಗಿ ಮುಂದುವರೆದಿದೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸ್ವದೇಶಿ ಟಿ20 ಸರಣಿ ಮತ್ತು ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಏಕದಿನ ತ್ರಿಕೋನ ಸರಣಿಗೆ ತಂಡಗಳನ್ನು ಘೋಷಿಸುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪಿಸಿಬಿ, ಸಲ್ಮಾನ್ ಅಲಿ ಅಘಾ ಅವರನ್ನು ಟಿ20 ತಂಡದ ನಾಯಕತ್ವದಿಂದ ತೆಗೆದುಹಾಕಿರುವುದರ ಜೊತೆಗೆ ಅವರನ್ನು 15 ಸದಸ್ಯರ ಟಿ20 ತಂಡದಿಂದಲೂ ಹೊರಹಾಕಿದೆ.

ಯಾರು ನೂತನ ನಾಯಕ?

ಇತ್ತೀಚಿನ ಏಷ್ಯನ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಿದ್ದ ಬಲಗೈ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ಟಿ20 ತಂಡದ ಹೊಸ ನಾಯಕನಾಗಿ ನೇಮಿಸಲಾಗಿದೆ. ಹಾಗೆಯೇ ಅನುಭವಿ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರು ಏಕದಿನ ಮಾದರಿಯಲ್ಲಿ ತಮ್ಮ ನಾಯಕತ್ವವನ್ನು ಉಳಿಸಿಕೊಂಡಿದ್ದಾರೆ. ಕಳೆದ ವರ್ಷ ಸಲ್ಮಾನ್ ಆಘಾ ಅವರನ್ನು ಪಾಕಿಸ್ತಾನದ ಟಿ20 ತಂಡದ ನಾಯಕರನ್ನಾಗಿ ನೇಮಿಸಲಾಯಿತು, ಆದರೆ ಅವರ ನಾಯಕತ್ವದಲ್ಲಿ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಆದರೆ ಸಾಹಿಬ್‌ಜಾದಾ ಫರ್ಹಾನ್ ಅವರ ನಾಯಕತ್ವದಲ್ಲಿ, ತಂಡವು ಇತ್ತೀಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತು. ಹೀಗಾಗಿ ಸಾಹಿಬ್‌ಜಾದಾ ಫರ್ಹಾನ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಟಿ20 ತಂಡದಿಂದ ಕೈಬಿಡಲ್ಪಟ್ಟಿದ್ದರೂ, ಸಲ್ಮಾನ್ ಅಲಿ ಆಘಾ ಅವರನ್ನು 16 ಸದಸ್ಯರ ಏಕದಿನ ತಂಡದಲ್ಲಿ ಸೇರಿಸಲಾಗಿದೆ.

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎಲ್ಲಾ ಪಂದ್ಯಗಳು ರಾವಲ್ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೊದಲ ಪಂದ್ಯ ಅಕ್ಟೋಬರ್ 9 ರಂದು, ಎರಡನೇ ಪಂದ್ಯ ಅಕ್ಟೋಬರ್ 11 ರಂದು ಮತ್ತು ಮೂರನೇ ಪಂದ್ಯ ಅಕ್ಟೋಬರ್ 13 ರಂದು ನಡೆಯಲಿದೆ. ಟಿ20 ಸರಣಿಯ ಮುಕ್ತಾಯದ ನಂತರ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಏಳು ಪಂದ್ಯಗಳ ಏಕದಿನ ತ್ರಿಕೋನ ಸರಣಿ ನಡೆಯಲಿದೆ. ಮೊದಲ ಮೂರು ಪಂದ್ಯಗಳು ರಾವಲ್ಪಿಂಡಿಯಲ್ಲಿ ನಡೆಯಲಿದ್ದು, ನಂತರ ಉಳಿದ ಲೀಗ್ ಪಂದ್ಯಗಳು ಮತ್ತು ಫೈನಲ್ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಶ್ರೀಲಂಕಾ ಮತ್ತು ಏಕದಿನ ತ್ರಿಕೋನ ಸರಣಿಗೆ ಪಾಕಿಸ್ತಾನ ತಂಡ

ಟಿ20 ತಂಡ: ಸಾಹಿಬ್ಜಾದಾ ಫರ್ಹಾನ್ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಅರಾಫತ್ ಮಿನ್ಹಾಸ್, ಫಖರ್ ಜಮಾನ್, ಹಸನ್ ನವಾಜ್, ಮುಹಮ್ಮದ್ ಇಮ್ರಾನ್ ರಾಂಧವಾ, ಖವಾಜಾ ನಫಾಯ್ (ವಿಕೆಟ್ ಕೀಪರ್), ಮಾಜ್ ಸದಾಕತ್, ನಸೀಮ್ ಶಾ, ರಝಾವುಲ್ಲಾ, ಸೈಮ್ ಅಯೂಬ್, ಮೊಹಮ್ಮದ್ ಸಲ್ಮಾನ್ ಮಿರ್ಜಾ, ಶಾದಾಬ್ ಖಾನ್, ಸೂಫಿಯಾನ್ ಮೋಕಿಮ್

ಏಕದಿನ ತಂಡ: ಶಾಹೀನ್ ಶಾ ಅಫ್ರಿದಿ (ನಾಯಕ), ಅಬ್ರಾರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಅರಾಫತ್ ಮಿನ್ಹಾಸ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಮುಹಮ್ಮದ್ ಗಾಜಿ ಘೋರಿ (ವಿಕೆಟ್ ಕೀಪರ್), ಹಾರಿಸ್ ರೌಫ್, ಹಸನ್ ನವಾಜ್, ನಸೀಮ್ ಶಾ, ರಝಾವುಲ್ಲಾ, ಸಾದ್ ಬೇಗ್ (ವಿಕೆಟ್ ಕೀಪರ್), ಸೈಮ್ ಅಯೂಬ್, ಶಾದಾಬ್ ಖಾನ್, ಸುಫಿಯಾನ್ ಮೊಕಿಮ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us