
ಆ್ಯಶಸ್ ಸರಣಿಯ ದ್ವಿತೀಯ ಪಂದ್ಯಕ್ಕಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿ ನಿಂತಿವೆ. ಈ ಪಂದ್ಯಕ್ಕೂ ಮುನ್ನವೇ ಉಭಯ ತಂಡಗಳ ಆಟಗಾರರ ನಡುವೆ ವಾಕ್ಸಮರ ಶುರುವಾಗಿದೆ. ಅದು ಸಹ ಪಿಂಕ್ ಬಾಲ್ ಸಂಬಂಧಿಸಿದಂತೆ. ಗಬ್ಬಾದಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ಗೂ ಮುನ್ನ ಇಂಗ್ಲೆಂಡ್ ಆಟಗಾರ ಜೋ ರೂಟ್ ಆ್ಯಶಸ್ ಸರಣಿಗೆ ಪಿಂಕ್ ಬಾಲ್ನ ಅವಶ್ಯಕತೆ ಇರಲಿಲ್ಲ ಎಂದಿದ್ದರು. ಇದಕ್ಕೆ ಇದೀಗ ಆಸ್ಟ್ರೇಲಿಯಾ ಸ್ಟಾರ್ ದಾಂಡಿಗ ಟ್ರಾವಿಸ್ ಹೆಡ್ ತಿರುಗೇಟು ನೀಡಿದ್ದಾರೆ.
ಪಿಂಕ್ ಬಾಲ್, ರೆಡ್ ಬಾಲ್, ವೈಟ್ ಬಾಲ್… ಇದಕ್ಕೆಲ್ಲಾ ಯಾರು ಕ್ಯಾರೆ ಮಾಡುತ್ತಾರೆ? ಹಾಗೆಲ್ಲಾ ಯೋಚಿಸಬೇಕಾದ ಅಗತ್ಯವಿದೆಯೇ?. ಇದು ಒಂದು ಮ್ಯಾಚ್ ಅಷ್ಟೇ. ಅದರಲ್ಲಿ ಅದ್ಭುತ ಪ್ರದರ್ಶನ ನೀಡಬೇಕು. ಅದರ ಹೊರತಾಗಿ ಪಿಂಕ್ ಬಾಲ್, ರೆಡ್ ಬಾಲ್, ವೈಟ್ ಬಾಲ್ ಅಂತೆಲ್ಲ ನಾನು ಯೋಚಿಸಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ.
ಪಿಂಕ್ ಬಾಲ್ ಟೆಸ್ಟ್ನಲ್ಲಿ ನೀವು ಗೆದ್ದರೆ, ಅದು ಅದ್ಭುತ ಎಂದು ಭಾವಿಸುತ್ತೀರಿ. ನೀವು ಸೋತರೆ, ಬಹುಶಃ ಅಲ್ಲ. ಎರಡೂ ತಂಡಗಳು ಅದರ ಅಂತ್ಯದ ವೇಳೆಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರಬಹುದು. ಆಟದ ದೃಷ್ಟಿಯಲ್ಲಿ ಇದು ತಪ್ಪಲ್ಲ. ಆದರೆ ನಾನಂತು ಚೆಂಡಿನ ವಿಷಯದಲ್ಲಿ ಕ್ಯಾರೆ ಮಾಡಲ್ಲ ಎಂದು ಹೆಡ್ ಪರೋಕ್ಷವಾಗಿ ಜೋ ರೂಟ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಭರ್ಜರಿ ಜಯ ಸಾಧಿಸಿತ್ತು. ಈ ಭರ್ಜರಿ ಗೆಲುವಿನ ರೂವಾರಿ ಟ್ರಾವಿಸ್ ಹೆಡ್. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಹೆಡ್ ಕೇವಲ 83 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 123 ರನ್ ಬಾರಿಸಿದ್ದರು.
ಈ ಮೂಲಕ ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 205 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ಕೇವಲ 28.2 ಓವರ್ಗಳಲ್ಲಿ ಚೇಸ್ ಮಾಡಿ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಉಭಯ ತಂಡಗಳು ದ್ವಿತೀಯ ಪಂದ್ಯಕ್ಕೆ ಸಜ್ಜಾಗಿದೆ. ಈ ಮ್ಯಾಚ್ ಪಿಂಕ್ ಬಾಲ್ ಟೆಸ್ಟ್ (ಡೇ ನೈಟ್ ಟೆಸ್ಟ್) ಆಗಿರುವುದರಿಂದ ಕುತೂಹಲ ಹೆಚ್ಚಿಸಿದೆ.
ಆಸ್ಟ್ರೇಲಿಯಾ ಟೆಸ್ಟ್ ತಂಡ (ಮೊದಲ ಪಂದ್ಯಕ್ಕೆ): ಸ್ಟೀವ್ ಸ್ಮಿತ್ (ನಾಯಕ), ಶಾನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಬ್ರೆಂಡನ್ ಡಾಗೆಟ್, ಕ್ಯಾಮರೋನ್ ಗ್ರೀನ್, ಜೋಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬ್ಯೂ ವೆಬ್‌ಸ್ಟರ್.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ಕಂಬ್ಯಾಕ್: ಉಪನಾಯಕ ಡೌಟ್..!
ಇಂಗ್ಲೆಂಡ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.
Published On - 9:57 am, Wed, 3 December 25