ಇತಿಹಾಸ ಬರೆದ ಪೋರ್ಚುಗಲ್: ಟಿ20 ವಿಶ್ವಕಪ್ ಕ್ವಾಲಿಫೈಯರ್‌ಗೆ ಲಗ್ಗೆ!

T20 World Cup 2028: ಸತತ 26 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಅಜೇಯವಾಗಿ ಮುನ್ನುಗ್ಗುತ್ತಿದ್ದ ಸ್ಪೇನ್ ಕ್ರಿಕೆಟ್ ಸಾಮ್ರಾಜ್ಯಕ್ಕೆ ಪೋರ್ಚುಗಲ್ ಆಘಾತ ನೀಡಿದೆ. ಮಾಜಿ ಆಸ್ಟ್ರೇಲಿಯಾ ಆಟಗಾರ ಮೊಯ್ಸೆಸ್ ಹೆನ್ರಿಕ್ಸ್ ನಾಯಕತ್ವದ ಪೋರ್ಚುಗಲ್ ಪಡೆ, ಸ್ಪೇನ್ ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕುವುದರೊಂದಿಗೆ ಹೊಸ ಇತಿಹಾಸ ಬರೆದಿದೆ. ಈ ಮಹತ್ವದ ಗೆಲುವಿನೊಂದಿಗೆ ಪೋರ್ಚುಗಲ್ ತಂಡವು 2028ರ ಟಿ20 ವಿಶ್ವಕಪ್ ಅರ್ಹತೆಯ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

ಇತಿಹಾಸ ಬರೆದ ಪೋರ್ಚುಗಲ್: ಟಿ20 ವಿಶ್ವಕಪ್ ಕ್ವಾಲಿಫೈಯರ್‌ಗೆ ಲಗ್ಗೆ!
Portugal
Image Credit source: ICC

Updated on: Aug 22, 2026 | 12:20 PM

ಪೋರ್ಚುಗಲ್ ಪುರುಷರ ಕ್ರಿಕೆಟ್ ತಂಡವು ಹೊಸ ಇತಿಹಾಸ ಬರೆದಿದೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುರೋಪ್ ಸಬ್-ರೀಜನಲ್ ಕ್ವಾಲಿಫೈಯರ್ ‘ಸಿ’ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 57 ರನ್‌ಗಳ ಬೃಹತ್ ಅಂತರದಿಂದ ಮಣಿಸಿದ ಪೋರ್ಚುಗಲ್, 2027ರ ಐಸಿಸಿ ಟಿ20 ವಿಶ್ವಕಪ್ ಯುರೋಪ್ ಕ್ವಾಲಿಫೈಯರ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ.

ಸ್ಪೇನ್ ವಿಶ್ವ ದಾಖಲೆಗೆ ಬ್ರೇಕ್:

ಈ ಪಂದ್ಯಕ್ಕೂ ಮುನ್ನ ಸ್ಪೇನ್ ತಂಡವು ಸತತ 26 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ  ಜಯ ಸಾಧಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸತತವಾಗಿ ಅತ್ಯಧಿಕ ಪಂದ್ಯಗಳನ್ನು ಗೆದ್ದ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ವಿಶ್ವ ದಾಖಲೆಯ ಗೆಲುವಿನ ಓಟಕ್ಕೆ ಪೋರ್ಚುಗಲ್ ತಂಡ ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.

ಸ್ಪೇನ್ vs ಪೋರ್ಚುಗಲ್ ಪಂದ್ಯದ ಸಂಕ್ಷಿಪ್ತ ವಿವರ:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪೋರ್ಚುಗಲ್ ತಂಡ, ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ತಂಡದ ಪರ ಕ್ರಿಸ್ಟೋಫರ್ ಡಿ ಫ್ರೀಟಾಸ್ (39 ರನ್), ಕ್ರೇಗ್ ಕ್ಯಾಚೋಪಾ (25 ರನ್) ಮತ್ತು ಧವಳ್‌ಕುಮಾರ್ ನರೋಟಮ್ (23 ರನ್) ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.

161 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಸ್ಪೇನ್ ತಂಡ, ಪೋರ್ಚುಗಲ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 103 ರನ್‌ಗಳಿಗೆ ಆಲೌಟ್ ಆಯಿತು. ಪೋರ್ಚುಗಲ್ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಎಡ್ವರ್ಡ್ ಫ್ಲೆಮಿಂಗ್ ಕೇವಲ 13 ರನ್ ನೀಡಿ 3 ವಿಕೆಟ್ ಕಬಳಿಸಿ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ಸಿರಾಜ್ ಉಲ್ಲಾ ಖಾದೆಮ್ 19 ರನ್‌ಗಳಿಗೆ 2 ವಿಕೆಟ್ ಪಡೆದರು.

2028ರ ಟಿ20 ವಿಶ್ವಕಪ್ ಕನಸು:

ಈ ಗೆಲುವಿನೊಂದಿಗೆ ಪೋರ್ಚುಗಲ್ ತಂಡವು 2028ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ. ಮುಂದಿನ ಹಂತವಾಗಿ 2027ರಲ್ಲಿ ನಡೆಯಲಿರುವ ಯುರೋಪ್ ಕ್ವಾಲಿಫೈಯರ್‌ನಲ್ಲಿ ಪೋರ್ಚುಗಲ್ ತಂಡವು ಸ್ಕಾಟ್‌ಲ್ಯಾಂಡ್, ಜರ್ಸಿ ಮತ್ತು ಡೆನ್ಮಾರ್ಕ್ ತಂಡಗಳ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ: ಸ್ವಂತ ದಾಖಲೆ ಮುಂದೆ ಸೋತ ಮಿಚೆಲ್ ಸ್ಟಾರ್ಕ್​

ಯುರೋಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಮೊದಲ ಅಥವಾ ಎರಡನೇ ಸ್ಥಾನ ಪಡೆದರೆ ಪೋರ್ಚುಗಲ್ ತಂಡವು ಗ್ಲೋಬಲ್ ಕ್ವಾಲಿಫೈಯರ್​ ಸುತ್ತಿಗೆ ಪ್ರವೇಶಿಸಲಿದೆ. ಈ ಜಾಗತಿಕ ಅರ್ಹತಾ ಸುತ್ತಿನ ಟೂರ್ನಿಯಲ್ಲಿ ಅಗ್ರ ಸ್ಥಾನಗಳನ್ನು ಪಡೆಯುವ ತಂಡಗಳಿಗೆ ಮಾತ್ರ 2028ರ ಟಿ20 ವಿಶ್ವಕಪ್​ನಲ್ಲಿ ಅವಕಾಶ ದೊರೆಯಲಿದೆ.

 

Loading...
Unable to load recommendations.
Follow Us