Samit Dravid: ಜೂನಿಯರ್ ದ್ರಾವಿಡ್ ಭರ್ಜರಿ ಸಿಕ್ಸ್​: ವಿಡಿಯೋ ನೋಡಿ

|

Updated on: Aug 17, 2024 | 2:04 PM

Samit Dravid: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್​ನಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕಣಕ್ಕಿಳಿಯುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಮಿತ್ ಅವರನ್ನು ಮೈಸೂರು ವಾರಿಯರ್ಸ್ ಫ್ರಾಂಚೈಸಿ ಖರೀದಿಸಿತ್ತು. ಆಲ್​ರೌಂಡರ್ ಆಗಿರುವ 18 ವರ್ಷದ ಸಮಿತ್ ದ್ರಾವಿಡ್ ಈ ಹಿಂದೆ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಟಿ20 ಲೀಗ್​ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಟೀಮ್ ಇಂಡಿಯಾದ ದಂತಕಥೆ ರಾಹುಲ್ ದ್ರಾವಿಡ್ ಅವರ ಸುಪುತ್ರ ಸಮಿತ್ ದ್ರಾವಿಡ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಹಾರಾಜ ಟ್ರೋಫಿ ಟಿ20 ಲೀಗ್​ನಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿಯುತ್ತಿರುವ ಸಮಿತ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಇದಾಗ್ಯೂ ಕೆಲ ಭರ್ಜರಿ ಶಾಟ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಸಮಿತ್ ದ್ರಾವಿಡ್ ಕೇವಲ 7 ರನ್​ ಮಾತ್ರ ಗಳಿಸಿದ್ದರು. ಈ ಏಳು ರನ್​ಗಳಲ್ಲಿ ಒಂದು ಭರ್ಜರಿ ಸಿಕ್ಸ್ ಒಳಗೊಂಡಿತ್ತು ಎಂಬುದು ವಿಶೇಷ.

ಬೆಂಗಳೂರು ಬ್ಲಾಸ್ಟರ್ಸ್ ವೇಗಿ ನವೀನ್ ಎಸೆದ 7ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಸಮಿತ್ ದ್ರಾವಿಡ್ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಅತ್ಯಾಕರ್ಷಕವಾಗಿದ್ದ ಈ ಸಿಕ್ಸ್ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಸಮಿತ್ ಅವರ ಆಕ್ರಮಣಕಾರಿ ಆಟದ ಅಪ್ರೋಚ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು 18 ಓವರ್​ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ವಾರಿಯರ್ಸ್ ತಂಡವು 6 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಯುವ ದಾಂಡಿಗ ಭುವನ್ ರಾಜು ಕೇವಲ 24 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್​ ಒಳಗೊಂಡಂತೆ 51 ರನ್​ ಚಚ್ಚಿದ್ದರು. ಈ ಸ್ಪೋಟಕ ಅರ್ಧಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್​ ತಂಡವು 17.1 ಓವರ್​ಗಳಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್​ಗಳ ಜಯ ಸಾಧಿಸಿದೆ.

 

Follow us on