Ranji Trophy 2024: ಗುಜರಾತ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ನಾಯಕ ಮಯಾಂಕ್ ಅಗರ್ವಾಲ್

|

Updated on: Jan 13, 2024 | 3:03 PM

Ranji Trophy 2024: ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಮಯಾಂಕ್ ಅಗರ್ವಾಲ್ 124 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 109 ರನ್ ಕಲೆಹಾಕಿದರು. ಅಂತಿಮವಾಗಿ ಮಯಾಂಕ್, ಚಿಂತನ್ ಗಜ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ.

Ranji Trophy 2024: ಗುಜರಾತ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ನಾಯಕ ಮಯಾಂಕ್ ಅಗರ್ವಾಲ್
ಮಯಾಂಕ್ ಅಗರ್ವಾಲ್
Follow us on

ಮೊಟೆರಾದಲ್ಲಿ ಕರ್ನಾಟಕ ಮತ್ತು ಗುಜರಾತ್ (Karnataka vs Gujarat) ನಡುವೆ ಈ ಸೀಸನ್​ನ ರಣಜಿ ಟ್ರೋಫಿಯ (Ranji Trophy 2024) ಎರಡನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಕರ್ನಾಟಕ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲ ಇನ್ನಿಂಗ್ಸ್‌ ಆರಂಭಿಸಿದ ಗುಜರಾತ್ ತಂಡವನ್ನು 264 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಕರ್ನಾಟಕದ ವೇಗಿಗಳು ಯಶಸ್ವಿಯಾದರು. ಇದಕ್ಕೆ ಉತ್ತರವಾಗಿ ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದೆ. ತಂಡದ ಪರ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಪಂದ್ಯದ ಎರಡನೇ ದಿನ ಬಿರುಸಿನ ಶತಕ ಬಾರಿಸಿದ್ದು, ಈ ರಣಜಿ ಸೀಸನ್​ನ ಎರಡನೇ ಪಂದ್ಯದಲ್ಲಿ ತಮ್ಮ ಲಯಕಂಡುಕೊಂಡಿದ್ದಾರೆ.

ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಮಯಾಂಕ್ ಅಗರ್ವಾಲ್ 124 ಎಸೆತಗಳನ್ನು ಎದುರಿಸಿ 17 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 109 ರನ್ ಕಲೆಹಾಕಿದರು. ಅಂತಿಮವಾಗಿ ಮಯಾಂಕ್, ಚಿಂತನ್ ಗಜ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ವೈಯಕ್ತಿಕವಾಗಿ ಮಯಾಂಕ್ ಶತಕ ಸಿಡಿಸಿದಲ್ಲದೆ, ಸಹ ಆರಂಭಿಕ ಆರ್​. ಸಮರ್ಥ್ ಜೊತೆಗೂಡಿ ಮೊದಲ ವಿಕೆಟ್‌ಗೆ 231 ಎಸೆತಗಳಲ್ಲಿ 172 ರನ್‌ಗಳ ಜೊತೆಯಾಟ ಕೂಡ ನಡೆಸಿದರು. ಈ ವೇಳೆ ಸಮರ್ಥ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಮೊದಲ ಪಂದ್ಯದಲ್ಲಿ ಶೂನ್ಯ ಸಾಧನೆ

ಈ ಬಾರಿಯ ರಣಜಿ ಟ್ರೋಫಿಯಲ್ಲಿ ಮಯಾಂಕ್ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ಸೀಸನ್​ನಲ್ಲಿ ಎರಡನೇ ಪಂದ್ಯವನ್ನಾಡುತ್ತಿರುವ ಮಯಾಂಕ್, ಪಂಜಾಬ್ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಆಡಿದ ಎರಡೂ ಇನ್ನಿಂಗ್ಸ್‌ಗಳಲ್ಲಿ ಮಯಾಂಕ್​ಗೆ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ. ಅದಾಗ್ಯೂ ನಾಯಕ ಶೂನ್ಯಕ್ಕೆ ಔಟಾದರೂ ಸಹ ಕರ್ನಾಟಕ ತಂಡ ತನ್ನ ಮೊದಲ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಟೀಂ ಇಂಡಿಯಾದಿಂದ ದೂರ

ಒಂದು ಸಮಯದಲ್ಲಿ ಭಾರತ ಟೆಸ್ಟ್ ತಂಡದ ಖಾಯಂ ಸದಸ್ಯನಾಗುವ ಸುಳಿವು ನೀಡಿದ್ದ ಅಗರ್ವಾಲ್ ಆ ಬಳಿಕ ತಮ್ಮ ಲಯ ಕಳೆದುಕೊಂಡು ಇದೀಗ ಸುಮಾರು 2 ವರ್ಷಗಳಿಂದ ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ. ಮಾರ್ಚ್ 2022 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದ ಮಯಾಂಕ್ ಆ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 26 ರನ್ ಕಲೆಹಾಕಿದ್ದರು. ಅಂದಿನಿಂದ ಮಯಾಂಕ್​ಗೆ ಟೀಂ ಇಂಡಿಯಾದಲ್ಲಿ ಮತ್ತೊಂದು ಅವಕಾಶ ಸಿಕ್ಕಿಲ್ಲ. ಕಳೆದ ವರ್ಷ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕದ ಪರವಾಗಿ ಆಡಿದ್ದ ಮಯಾಂಕ್ ಆಡಿದ್ದ 9 ಪಂದ್ಯಗಳಲ್ಲಿ 93 ಸ್ಟ್ರೈಕ್ ರೇಟ್‌ನಲ್ಲಿ 328 ರನ್ ಕಲೆಹಾಕಿದ್ದರು. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಕೂಡ ಸೇರಿತ್ತು.

ಮತ್ತೆ ಟೀಂ ಇಂಡಿಯಾದಲ್ಲಿ ಸ್ಥಾನ?

ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ಶತಕ ಬಾರಿಸುವ ಮೂಲಕ ಮಯಾಂಕ್ ಟೀಂ ಇಂಡಿಯಾಗೆ ಮರಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಟೀಂ ಇಂಡಿಯಾದಲ್ಲಿ ಆರಂಭಿಕ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವುದರಿಂದ ಅವರ ಪುನರಾಗಮನ ಅಷ್ಟು ಸುಲಭವಲ್ಲ. ಆರಂಭಿಕರಾಗಿ ಆಡುತ್ತಿರುವ ಶುಭ್​ಮನ್ ಗಿಲ್ ಅಲ್ಲದೆ ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್ ಕೂಡ ನಿರಂತರವಾಗಿ ರನ್ ಕಲೆಹಾಕುತ್ತಿದ್ದಾರೆ. ಹೀಗಾಗಿ ಈ ಮೂವರನ್ನು ಮೀರಿ ಮಯಾಂಕ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದುನ್ನು ಕಾದುನೋಡಬೇಕಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ