
ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ರೋಹಿತ್ ಶರ್ಮಾ ಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ದಾಖಲೆಯ ಜಯದತ್ತ ಮುನ್ನಡೆಸಿದರು. ಈ ಶತಕದೊಂದಿಗೆ ರೋಹಿತ್ ತನ್ನನ್ನು ಟೀಕಿಸುತ್ತಿದ್ದವರಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದರು. ವಾಸ್ತವವಾಗಿ 2027 ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ರನ್ನು ಆಡಿಸಬೇಕೆ ಅಥವಾ ಬೇಡವೇ ಎಂಬ ಚರ್ಚೆ ಭಾರತೀಯ ಕ್ರಿಕೆಟ್ ವಲಯದಲ್ಲಿ ನಡೆಯುತ್ತಿದೆ. ಹೀಗಿರುವಾಗ 2027 ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ರೋಹಿತ್ ಶರ್ಮಾ ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ರೋಹಿತ್ ಶರ್ಮಾ ಏಕದಿನ ಸ್ವರೂಪದಲ್ಲಿ ಮಾತ್ರ ಆಡುತ್ತಿದ್ದಾರೆ. ಭಾರತವನ್ನು 2024 ರ ಟಿ20 ವಿಶ್ವಕಪ್ ಮತ್ತು 2025 ರ ಚಾಂಪಿಯನ್ಸ್ ಟ್ರೋಫಿಯ ವಿಜೇತರನ್ನಾಗಿ ಮಾಡಿದ ಹಿಟ್‌ಮ್ಯಾನ್, 2023 ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿನ ಸೋಲನ್ನು ಇನ್ನೂ ಮರೆಯಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಇದೇ ಸಂದರ್ಭದಲ್ಲಿ, 2027 ರಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಗೆಲ್ಲುವುದು ನನ್ನ ಮುಂದಿನ ಪ್ರಮುಖ ಗುರಿ ಎಂದು ರೋಹಿತ್ ಸ್ಪಷ್ಟಪಡಿಸಿದ್ದಾರೆ.
ಜಿಯೋಸ್ಟಾರ್‌ಗೆ ನೀಡಿದ ಸಂದರ್ಶನದಲ್ಲಿ ರೋಹಿತ್, ‘ವಿಶ್ವಕಪ್ ಗೆದ್ದ ಅನುಭವ ಅವರ್ಣನೀಯ. 2007 ರಲ್ಲಿ 20 ವರ್ಷದ ಹುಡುಗನಾಗಿದ್ದಾಗ ಟಿ20 ವಿಶ್ವಕಪ್ ಗೆದ್ದ ದಿನಗಳನ್ನು ಮತ್ತು 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಸುಮಾರು 11 ವರ್ಷಗಳ ದೀರ್ಘ ಕಾಯುವಿಕೆಯ ನಂತರ 2024 ರಲ್ಲಿ ಟಿ20 ವಿಶ್ವಕಪ್ ಗೆದ್ದಾಗ, ಆ ಗೆಲುವು ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡೆ. ಏಕದಿನ ವಿಶ್ವಕಪ್ ರೂಪದಲ್ಲಿ ಆ ಭಾವನೆಯನ್ನು ಮತ್ತೆ ಪಡೆಯಲು ನಾನು ಉತ್ಸುಕನಾಗಿದ್ದೇನೆ.
ಸಿಕ್ಸರ್‌ಗಳ ದ್ವಿಶತಕ; ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ರೋಹಿತ್ ಶರ್ಮಾ
ಇನ್ನು ಮುಂದೆ ಅಕ್ಟೋಬರ್ 2027 ರ ಬಗ್ಗೆ ಹೆಚ್ಚು ಯೋಚಿಸುವುದರಲ್ಲಿ ಅರ್ಥವಿಲ್ಲ. ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವುದು, ಫಿಟ್ನೆಸ್ ಕಾಯ್ದುಕೊಳ್ಳುವುದು ಮತ್ತು ಪ್ರತಿದಿನ ಕಠಿಣ ಪರಿಶ್ರಮ ಪಡುವುದು ನನ್ನ ಮುಖ್ಯ ಕೆಲಸ. ಮುಂಬರುವ ಪ್ರತಿಯೊಂದು ಸರಣಿಯಲ್ಲಿ ತಂಡಕ್ಕೆ ಅಗತ್ಯವಾದ ಬೆಂಬಲವನ್ನು ನೀಡುವುದು ಗುರಿಯಾಗಿದೆ ಮತ್ತು ಹಂತ ಹಂತವಾಗಿ ಮುಂದುವರಿಯುವುದು ನನ್ನ ವೃತ್ತಿಜೀವನಕ್ಕೆ ತುಂಬಾ ಉಪಯುಕ್ತವಾಗಿದೆ ಎಂದು ರೋಹಿತ್ ಹೇಳಿಕೊಂಡಿದ್ದಾರೆ.