ಸ್ಮರಣೀಯ ಇನ್ನಿಂಗ್ಸ್ ಆಡಿ ಶತಕದಂಚಿನಲ್ಲಿ ಎಡವಿದ ರೋಹಿತ್ ಶರ್ಮಾ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 92 ರನ್ ಗಳಿಸಿ ಶತಕ ವಂಚಿತರಾದರು. ಕೇವಲ 4 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಅವರು ತಾಳ್ಮೆಯ ಇನ್ನಿಂಗ್ಸ್ ಮೂಲಕ ಪಾರು ಮಾಡಿದರು. ರುತುರಾಜ್ ಜೊತೆಗೂಡಿ ಮೂರನೇ ವಿಕೆಟ್​ಗೆ ಶತಕದ ಜೊತೆಯಾಟ ನಿರ್ಮಿಸಿ ತಂಡಕ್ಕೆ ಆಧಾರವಾದರು. ಈ ಸ್ಮರಣೀಯ ಇನ್ನಿಂಗ್ಸ್ ಭಾರತಕ್ಕೆ ಭದ್ರ ಬುನಾದಿ ಒದಗಿಸಿತು.

ಸ್ಮರಣೀಯ ಇನ್ನಿಂಗ್ಸ್ ಆಡಿ ಶತಕದಂಚಿನಲ್ಲಿ ಎಡವಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ

Updated on: Oct 03, 2026 | 4:45 PM

ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಸತತ ಎರಡನೇ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ 92 ರನ್​ಗಳಿಗೆ ಔಟಾಗುವ ಮೂಲಕ ತಮ್ಮ ವೃತ್ತಿಜೀವನದ 36ನೇ ಏಕದಿನ ಶತಕದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ರೋಹಿತ್ ಅವರ ಈ ಸ್ಮರಣೀಯವಾಗಿದ್ದು, ಟೀಂ ಇಂಡಿಯಾ ಕೇವಲ 4 ರನ್​ಗಳಿಗೆ ಪ್ರಮುಖ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರೋಹಿತ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ ರುತುರಾಜ್ ಜೊತೆಗೂಡಿ ಮೂರನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ನಿರ್ಮಿಸಿದರು. ರೋಹಿತ್ ತಮ್ಮ ಇನ್ನಿಂಗ್ಸ್​ನಲ್ಲಿ 83 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 92 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

92 ರನ್​ಗಳಿಗೆ ವಿಕೆಟ್ ಒಪ್ಪಿಸಿದ ರೋಹಿತ್

ಆರಂಭಿಕ ಪವರ್‌ಪ್ಲೇಯಲ್ಲಿ ರೋಹಿತ್ ಶರ್ಮಾ ಬಹಳ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. 10 ಓವರ್‌ಗಳ ನಂತರ, ರೋಹಿತ್ 41 ಎಸೆತಗಳನ್ನು ಎದುರಿಸಿ ಕೇವಲ 21 ರನ್‌ ಬಾರಿಸಿದ್ದರು. ಆ ನಂತರ ಗೇರ್ ಬದಲಿಸಿದ ರೋಹಿತ್ ಮುಂದಿನ 44 ಎಸೆತಗಳಲ್ಲಿ 71 ರನ್‌ಗಳನ್ನು ಕಲೆಹಾಕಿದರು. 92 ರನ್​ಗಳಿಗೆ ಔಟಾಗುವ ಮೂಲಕ ರೋಹಿತ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 6ನೇ ಬಾರಿಗೆ ನವರ್ಸ ನೈಂಟಿಗೆ ಬಲಿಯಾದರು. ಈ ಹಿಂದೆ ರೋಹಿತ್ 2019 ರಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ 95 ರನ್‌ಗಳಿಗೆ ಔಟಾಗಿದ್ದರು.

ಭಾರತಕ್ಕೆ ಆರಂಭಿಕ ಆಘಾತ

ಈ ಪಂದ್ಯದಲ್ಲಿ ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಿಂದಲೇ ಅನಿರೀಕ್ಷಿತ ಆಘಾತ ಎದುರಾಯಿತು. ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಹಿಂದಿನ ಪಂದ್ಯದಲ್ಲಿ ಅದ್ಭುತ ದ್ವಿಶತಕ ಬಾರಿಸಿದ್ದ ನಾಯಕ ಶುಭ್​ಮನ್ ಗಿಲ್ ಮೂರನೇ ಏಕದಿನ ಪಂದ್ಯದಲ್ಲಿ ಸೀಲ್ಸ್ ಬೌಲಿಂಗ್‌ನಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕೂಡ ಅದೇ ಓವರ್‌ನಲ್ಲಿ ಖಾತೆ ತೆರೆಯದೆ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಗೋಲ್ಡನ್ ಡಕ್​ಗೆ ಬಲಿಯಾದರು.

200 ಸಿಕ್ಸರ್, 12000 ರನ್..! ದಾಖಲೆಯ 35ನೇ ಶತಕ ಚಚ್ಚಿದ ರೋಹಿತ್ ಶರ್ಮಾ

137 ರನ್​ಗಳ ಜೊತೆಯಾಟ

ಹೀಗಾಗಿ ಕೇವಲ 4 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತದ ಇನ್ನಿಂಗ್ಸ್​ ಕಟ್ಟುವ ಕೆಲಸವನ್ನು ರೋಹಿತ್ ಮಾಡಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ಬಂದ ರುತುರಾಜ್, ರೋಹಿತ್ ಜೊತೆಗೂಡಿ ಮೂರನೇ ವಿಕೆಟ್‌ಗೆ 137 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು. ಈ ಜೊತೆಯಾಟದಲ್ಲಿ ರೋಹಿತ್ 76 ಎಸೆತಗಳಲ್ಲಿ 90 ರನ್‌ಗಳನ್ನು ಗಳಿಸಿದರೆ, ರುತುರಾಜ್ 56 ಎಸೆತಗಳಲ್ಲಿ 45 ರನ್‌ಗಳನ್ನು ಗಳಿಸಿದರು. ಇದೇ ವೇಳೆ ರುತುರಾಜ್​ಗೆ ನಾಲ್ಕು ಜೀವದಾನಗಳು ಸಿಕ್ಕವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Sat, 3 October 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us