IND vs NZ: ಟೆಸ್ಟ್ ಸರಣಿ ಸೋಲು, ಅಂದುಕೊಂಡಷ್ಟು ಸುಲಭವಲ್ಲ: ರೋಹಿತ್ ಶರ್ಮಾ

|

Updated on: Nov 03, 2024 | 2:42 PM

India vs New Zealand, 3rd Test: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 25 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿದೆ.

IND vs NZ: ಟೆಸ್ಟ್ ಸರಣಿ ಸೋಲು, ಅಂದುಕೊಂಡಷ್ಟು ಸುಲಭವಲ್ಲ: ರೋಹಿತ್ ಶರ್ಮಾ
Rohit Sharma
Follow us on

ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ನ್ಯೂಝಿಲೆಂಡ್ 3-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್​ಗಳ ಜಯ ಸಾಧಿಸಿದ್ದ ಕಿವೀಸ್ ಪಡೆ, 2ನೇ ಪಂದ್ಯದಲ್ಲಿ 113 ರನ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದೀಗ 3ನೇ ಪಂದ್ಯದಲ್ಲಿ 25 ರನ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ನ್ಯೂಝಿಲೆಂಡ್ ತಂಡವು ಭಾರತದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ. ಈ ಹೀನಾಯ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸರಣಿ ಸೋಲಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುವುದು ಅಥವಾ ಟೆಸ್ಟ್ ಪಂದ್ಯದಲ್ಲಿ ಸೋಲುವುದು ಎಂದಿಗೂ ಸುಲಭವಲ್ಲ. ಇದು ಸುಲಭವಾಗಿ ಅರಗಿಸಿಕೊಳ್ಳಲಾಗದ ವಿಷಯ. ಆದರೆ ಈ ಬಾರಿ ನಾವು ಅತ್ಯುತ್ತಮ ಕ್ರಿಕೆಟ್ ಆಡಿಲ್ಲ ಎಂಬುದೇ ನಿಜ. ಇದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನ್ಯೂಝಿಲೆಂಡ್ ತಂಡವು ಸರಣಿಯುದ್ದಕ್ಕೂ ನಮಗಿಂತ ಉತ್ತಮ ಪ್ರದರ್ಶನ ನೀಡಿದರು. ನಾವು ಬಹಳಷ್ಟು ತಪ್ಪುಗಳನ್ನು ಮಾಡಿದ್ದೇವೆ ಮತ್ತು ಅದನ್ನು ಒಪ್ಪಿಕೊಳ್ಳಲೇಬೇಕು. ಮೊದಲ ಇನ್ನಿಂಗ್ಸ್‌ನಲ್ಲಿ (ಬೆಂಗಳೂರು ಮತ್ತು ಪುಣೆಯಲ್ಲಿ) ನಾವು ಸಾಕಷ್ಟು ರನ್‌ಗಳನ್ನು ಕಲೆಹಾಕಲಿಲ್ಲ. ಈ ಪಂದ್ಯಗಳಲ್ಲಿ ನಾವು ತುಂಬಾ ಹಿಂದುಳಿದಿದ್ದೆವು. ಆದರೆ ಈ ಬಾರಿ 30 ರನ್​ಗಳ ಮುನ್ನಡೆ ಸಾಧಿಸಿದಾಗ, ನಾವು ಪಂದ್ಯ ಗೆಲ್ಲುತ್ತೇವೆ ಎಂದೇ ಭಾವಿಸಿದ್ದೆ. ಅಲ್ಲದೆ 147 ರನ್​ಗಳ ಗುರಿ ಮುಟ್ಟುವ ವಿಶ್ವಾಸವಿತ್ತು.

ಆದರೆ ನಾನು ಸೇರಿದಂತೆ ಪ್ರಮುಖ ಆಟಗಾರರು ರನ್​ಗಳಿಸಲು ಸಾಧ್ಯವಾಗಿಲ್ಲ. ನಾನು ಬ್ಯಾಟಿಂಗ್ ಮಾಡಲು ಹೋದಾಗ ನನ್ನ ಮನಸ್ಸಿನಲ್ಲಿ ಕೆಲವು ಆಲೋಚನೆಗಳು, ಕೆಲವು ಯೋಜನೆಗಳು ಇದ್ದವು. ಆದರೆ ಈ ಸರಣಿಯುದ್ದಕ್ಕೂ ಅದು ಹೊರಬರಲಿಲ್ಲ. ಇದು ನಿಜಕ್ಕೂ ನನಗೆ ನಿರಾಶಾದಾಯಕವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಇದಾಗ್ಯೂ ರಿಷಭ್ ಪಂತ್ ಹಾಗೂ ಯಶಸ್ವಿ ಜೈಸ್ವಾಲ್ ಈ ಪಿಚ್​ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ತೋರಿಸಿಕೊಟ್ಟಿದ್ದರು. ಇಂತಹ ಪಿಚ್​ಗಳಲ್ಲಿ ಆಡುವಾಗ ಸ್ವಲ್ಪ ಪೂರ್ವಭಾವಿಯಾಗಿರಬೇಕು. ಹೇಗೆ ಆಡಬೇಕೆಂದು ನಮಗೆ ತಿಳಿದಿದೆ. ಆದರೆ ಈ ಸರಣಿಯಲ್ಲಿ ಅದು ಹೊರಬರಲಿಲ್ಲ ಎಂದು ಹಿಟ್​ಮ್ಯಾನ್ ನಿರಾಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಅವಮಾನ… ಟೆಸ್ಟ್ ಇತಿಹಾಸದಲ್ಲೇ ಅವಮಾನಕರ ಸೋಲುಂಡ ಟೀಮ್ ಇಂಡಿಯಾ

ಒಟ್ಟಿನಲ್ಲಿ 3-0 ಅಂತರದಿಂದ ಸರಣಿ ಸೋತಿರುವುದು ನಿಜಕ್ಕೂ ಅರಗಿಸಿಕೊಳ್ಳಲಾಗದ ವಿಷಯ. ತಂಡವು ಸಾಂಘಿಕ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವುದು ನಿಜ. ಇದಾಗ್ಯೂ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸವಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.