ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಜಯ ಸಾಧಿಸಿ ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ಕ್ರಿಕೆಟ್ ತಂಡವು ಇದೀಗ ಮಹತ್ವದ ಸೆಮಿ ಫೈನಲ್ಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಲು ತಯಾರಾಗುತ್ತಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಎಲ್ಲ ಭಾರತೀಯ ಆಟಗಾರರ ಜೊತೆ ಒಟ್ಟಾಗಿ ಪ್ರಯಾಣಿಸಿಲ್ಲ.
ಭಾರತ ತಂಡ ಬುಧವಾರ (ನವೆಂಬರ್ 15) ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಸೆಣಸಲಿದೆ. ಲೀಗ್ ಪಂದ್ಯದಲ್ಲಿ ಒಂದೇ ಒಂದು ಸೋಲು ಕಾಣದ ಭಾರತ ಸೆಮೀಸ್ಗೆ ತಲುಪಿದೆ. ಇಲ್ಲಿ ಗೆದ್ದರೆ ಫೈನಲ್ಗೆ ಏರಲಿದೆ. ಅದೆ ಸೋತರೆ ಟೂರ್ನಿಯಿಂದ ಔಟ್ ಆಗಲಿದೆ. ಹೀಗಾಗಿ ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.
ಟೀಮ್ ಇಂಡಿಯಾ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಇತರೆ ಆಟಗಾರರಿಗಿಂತ ಮೊದಲು ಏಕಾಂಗಿಯಾಗಿ ಮುಂಬೈಗೆ ತೆರಳಿದ್ದಾರೆ. ಕಪ್ಪು ಟಿ-ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿ ಬಿಳಿ ಸ್ನೀಕರ್‌ಗಳೊಂದಿಗೆ ವಿರಾಟ್ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾಣ ನಿಲ್ದಾಣದಲ್ಲಿ ಕೊಹ್ಲಿಯನ್ನು ಕಂಡ ಅಭಿಮಾನಿಗಳು ಸೆಲ್ಫಿ ಮತ್ತು ಆಟೋಗ್ರಾಫ್‌ಗಳಿಗಾಗಿ ಮುಗಿಬಿದ್ದರು. ಕೊಹ್ಲಿ ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಕೂಡ ಇತರೆ ಆಟಗಾರರ ಜೊತೆ ಬರದೆ ಕೋಲ್ಕತ್ತಾದಿಂದ ಬೆಂಗಳೂರಿಗೆ ಒಬ್ಬರೇ ಪ್ರಯಾಣಿಸಿದ್ದರು.
ಇಡೀ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ತಂಡದ ಪರ ಮಹತ್ವದ ಪಾತ್ರವಹಿಸಿದ್ದಾರೆ. ಡಚ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೊಹ್ಲಿ ಕೇವಲ 56 ಎಸೆತಗಳಲ್ಲಿ 51 ರನ್ ಗಳಿಸಿ ಒಂದು ವಿಕೆಟ್ ಪಡೆದರು. ಬಲಗೈ ಬ್ಯಾಟರ್ ವಿಶ್ವಕಪ್‌ನಲ್ಲಿ ಭಾರತದ ಪರ ಅಗ್ರ ಸ್ಕೋರರ್ ಆಗಿದ್ದು, ಒಂಬತ್ತು ಪಂದ್ಯಗಳಲ್ಲಿ ಎರಡು ಶತಕಗಳನ್ನು ಒಳಗೊಂಡಂತೆ 594 ರನ್ ಗಳಿಸಿದ್ದಾರೆ. ಅದ್ಭುತ ಫಾರ್ಮ್ನಲ್ಲಿರುವ ವಿರಾಟ್ ಸೆಮಿ ಫೈನಲ್ನಲ್ಲಿ ಹೇಗೆ ಪ್ರದರ್ಶನ ತೋರುತ್ತಾರೆ ನೋಡಬೇಕು.
ಭಾರತ ತಂಡಕ್ಕೆ ವಾಂಖೆಡೆ ಕ್ರೀಡಾಂಗಣ ಸಂಪೂರ್ಣ ಲಕ್ಕಿ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದುವರೆಗೆ ವಾಂಖೆಡೆಯಲ್ಲಿ ನಡೆದಿರುವ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಇದುವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ. 1983 ರಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು 35 ರನ್‌ಗಳಿಂದ ಸೋಲಿಸಿತ್ತು. ಎರಡು ವರ್ಷಗಳ ನಂತರ, ನೆಹರು ಕಪ್‌ನ ಸೆಮಿ-ಫೈನಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೂಡ ಸೋತಿತ್ತು. 2016 ರ ಟಿ20 ವಿಶ್ವಕಪ್ ಸೆಮಿಫೈನಲ್ನಲ್ಲೂ ವಿಂಡೀಸ್ ವಿರುದ್ಧ ಭಾರತ ಜಯ ಸಾಧಿಸುವಲ್ಲಿ ವಿಫಲವಾಗಿತ್ತು. ಆದರೆ, 2011ರ ವಿಶ್ವಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ ಇದೇ ಮೈದಾನದಲ್ಲಿ ಭಾರತ ಗೆದ್ದು 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದಿತ್ತು ಎಂಬುದು ಸಂತಸದ ಸಂಗತಿ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ