ಸ್ಟಾರ್ಕ್​ ಸ್ಪಾರ್ಕ್​… ಮೊದಲ ದಿನವೇ ಸೌತ್ ಆಫ್ರಿಕಾ ತತ್ತರ!

ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮ್ಯಾಚ್​ನಲ್ಲಿ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ದ್ವಿತೀಯ ಪಂದ್ಯದಲ್ಲಿ ಭರ್ಜರಿಯಾಗಿ ಕಂಬ್ಯಾಕ್ ಮಾಡಿ ಸೌತ್ ಆಫ್ರಿಕಾ ಆಸೀಸ್ ಪಡೆಯನ್ನು ಹೀನಾಯವಾಗಿ ಸೋಲಿಸಿದ್ದರು. ಇದೀಗ ಸರಣಿ ನಿರ್ಣಾಯಕವಾಗಿರುವ ಮೂರನೇ ಪಂದ್ಯ ಕೇಪ್​ಟೌನ್​ನಲ್ಲಿ ನಡೆಯುತ್ತಿದೆ.

ಸ್ಟಾರ್ಕ್​ ಸ್ಪಾರ್ಕ್​... ಮೊದಲ ದಿನವೇ ಸೌತ್ ಆಫ್ರಿಕಾ ತತ್ತರ!
Sa Vs Aus
Image Credit source: GettyImages

Updated on: Oct 28, 2026 | 8:43 AM

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಸೌತ್ ಆಫ್ರಿಕಾ ತಂಡ ಆಲೌಟ್ ಆಗಿದೆ. ಆದರೆ ಹೀಗೆ ಆಲೌಟ್ ಆಗುವ ಮುನ್ನ ಆಫ್ರಿಕನ್ನರು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 329 ರನ್​ ಪೇರಿಸಿದ್ದಾರೆ. ಕೇಪ್​ಟೌನ್​ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡರು.

ಅದರಂತೆ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಆರಂಭಿಕರು ಆಸ್ಟ್ರೇಲಿಯಾ ನಾಯಕನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದರು. ಏಕೆಂದರೆ ಮಾರ್ಕ್ವಿಸ್ ಅಕರ್ಮನ್ ಮತ್ತು ಐಡೆನ್ ಮಾರ್ಕ್ರಾಮ್ ಆಸೀಸ್ ಬೌಲರ್‌ಗಳನ್ನು ದಂಡಿಸುತ್ತಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಮೂಲಕ ಮೊದಲ ವಿಕೆಟ್‌ಗೆ 158 ರನ್‌ ಪೇರಿಸಿ ಉತ್ತಮ ಆರಂಭ ಒದಗಿಸಿದ್ದರು. ಇದಾದ ಬಳಿಕ ಐಡೆನ್ ಮಾಮಾರ್ಕ್ರಾಮ್ 78 ರನ್ ಗಳಿಸಿ ಔಟಾದರೆ, ಶತಕದ ಅಂಚಿನಲ್ಲಿದ್ದ ಅಕರ್ಮನ್ 95 ರನ್ ಗಳಿಸಿ ಪೆವಿಲಿಯನ್ ಸೇರಿದರು.

ಸೌತ್ ಆಫ್ರಿಕಾ ದಿಢೀರ್ ಕುಸಿತ!

ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿದ್ದ ಸೌತ್ ಆಫ್ರಿಕಾ ಬೃಹತ್ ಮೊತ್ತದತ್ತ ಹೆಜ್ಜೆ ಇಟ್ಟಿತ್ತು. ಆದರೆ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ ಈ ಅಪಾಯಕಾರಿ ಜೋಡಿಯನ್ನು ಬೇರ್ಪಡಿಸುತ್ತಿದ್ದಂತೆ ಆಸ್ಟ್ರೇಲಿಯನ್ನರು ಭರ್ಜರಿ ಕಂಬ್ಯಾಕ್ ಮಾಡಿದರು. ಪರಿಣಾಮವಾಗಿ, ಆತಿಥೇಯರು ಕೇವಲ 29 ರನ್‌ಗಳ ಅಂತರದಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದರು.

ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದ ತತ್ತರಿಸಿದ್ದ ತಂಡಕ್ಕೆ ಆಸರೆಯಾಗಿದ್ದು ಮಾರ್ಕೊ ಯಾನ್ಸೆನ್ ಮತ್ತು ರಿಯಾನ್ ರಿಕಲ್ಟನ್. ಈ ಜೋಡಿಯು ಅತ್ಯಂತ ಜವಾಬ್ದಾರಿಯುತ ಆಟ ಪ್ರದರ್ಶಿಸಿ 7ನೇ ವಿಕೆಟ್‌ಗೆ 95 ರನ್‌ಗಳನ್ನು ಪೇರಿಸಿತು. ಯಾನ್ಸೆನ್ ಅರ್ಧಶತಕ (52 ರನ್) ಬಾರಿಸಿದರೆ, ರಿಕಲ್ಟನ್ 42 ರನ್ ಗಳಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾದರು.

ಸ್ಟಾರ್ಕ್​ ಸ್ಪಾರ್ಕ್​:

ಸೌತ್ ಆಫ್ರಿಕಾ ಚೇತರಿಸಿಕೊಳ್ಳುತ್ತಿದ್ದ ವೇಳೆ ಆಸ್ಟ್ರೇಲಿಯಾ ನಾಯಕ ಎರಡನೇ ಹೊಸ ಚೆಂಡನ್ನು ಬೌಲರ್‌ಗಳ ಕೈಗಿಟ್ಟರು. ಹೊಸ ಚೆಂಡನ್ನು ಪಡೆದ ತಕ್ಷಣವೇ ಮಿಚೆಲ್ ಸ್ಟಾರ್ಕ್ ಪಿಚ್‌ನಲ್ಲಿ ಸಂಚಲನ ಸೃಷ್ಟಿಸಿದರು. ಸ್ಟಾರ್ಕ್ ದಾಳಿಗೆ ತತ್ತರಿಸಿದ ಸೌತ್ ಆಫ್ರಿಕಾ ತಂಡ ಕೇವಲ 2 ರನ್ ಗಳಿಸುವಷ್ಟರಲ್ಲಿ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಬೃಹತ್ ಮೊತ್ತದತ್ತ ಸಾಗುತ್ತಿದ್ದ ಆತಿಥೇಯರನ್ನು ಮೊದಲ ದಿನದಾಟದಲ್ಲೇ ಕೇವಲ 329 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಆಸೀಸ್ ವೇಗಿ ಯಶಸ್ವಿಯಾದರು.

  • ಈ ಪಂದ್ಯದಲ್ಲಿ 16.3 ಓವರ್​ಗಳನ್ನು ಎಸೆದ ಮಿಚೆಲ್ ಸ್ಟಾರ್ಕ್​ ಕೇವಲ 72 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾರೆ.

ಇದರೊಂದಿಗೆ ಮೊದಲ ದಿನದಾಟ ಮುಕ್ತಾಯವಾಗಿದ್ದು, ದ್ವಿತೀಯ ದಿನವಾದ ಇಂದು ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನಿಂಗ್ಸ್ ಆರಂಭಿಸಲಿದೆ. ಇತ್ತ ಮೊದಲ ದಿನದಾಟದಲ್ಲಿ ವೇಗಿಗಳು ಮೇಲುಗೈ ಸಾಧಿಸಿದ್ದರಿಂದ ಸೌತ್ ಆಫ್ರಿಕಾ ವೇಗದ ಬೌಲರ್​ಗಳಿಂದಲೂ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ಮಾರ್ಕ್ಸ್ ಅಕೆರ್ಮನ್ , ಡೇವಿಡ್ ಬೆಡಿಂಗ್ಹ್ಯಾಮ್ , ಟೆಂಬಾ ಬವುಮಾ (ನಾಯಕ) , ಮ್ಯಾಥ್ಯೂ ಬ್ರೀಟ್​​ಝ್ಕೆ , ರಯಾನ್ ರಿಕಲ್ಟನ್ (ವಿಕೆಟ್ ಕೀಪರ್ ), ವಿಯಾನ್ ಮುಲ್ಡರ್ , ಮಾರ್ಕೊ ಯಾನ್ಸೆನ್ ,
ಸೈಮನ್ ಹಾರ್ಮರ್ , ಜೆರಾಲ್ಡ್ ಕೋಟ್ಝಿ , ಕಗಿಸೊ ರಬಾಡ.

ಇದನ್ನೂ ಓದಿ: ಬೆಂಕಿ ಬಿರುಗಾಳಿ… ಒಂದೇ ಮ್ಯಾಚ್​ನಲ್ಲಿ 20 ದಾಖಲೆಗಳು ಧೂಳೀಪಟ!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ಮ್ಯಾಟ್ ರೆನ್ಶಾ , ಮಾರ್ನಸ್ ಲಾಬುಶೇನ್ , ಕ್ಯಾಮರೋನ್ ಗ್ರೀನ್ ,
ಜೋಶ್ ಇಂಗ್ಲಿಸ್ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಕೂಪರ್ ಕೊನೊಲಿ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್​ವುಡ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us