Sachin Tendulkar: ದಿವ್ಯಾಂಗ ಕ್ರಿಕೆಟಿಗನ ಆಟಕ್ಕೆ ಮನಸೋತ ಕ್ರಿಕೆಟ್ ದೇವರು; ವಿಡಿಯೋ ವೈರಲ್

Sachin Tendulkar: ವೈರಲ್ ವೀಡಿಯೋವನ್ನು ನೋಡಿದ್ದ ಸಚಿನ್ ತೆಂಡೂಲ್ಕರ್ ಕೂಡ ಅಮೀರ್ ಅವರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವ ಸಚಿನ್, ಅಮೀರ್ ಮತ್ತು ಅವರ ಕುಟುಂಬವನ್ನು ಅವರು ತಂಗಿದ್ದ ಹೋಟೆಲ್​ನಲ್ಲಿ ಭೇಟಿಯಾಗಿದ್ದಾರೆ.

Sachin Tendulkar: ದಿವ್ಯಾಂಗ ಕ್ರಿಕೆಟಿಗನ ಆಟಕ್ಕೆ ಮನಸೋತ ಕ್ರಿಕೆಟ್ ದೇವರು; ವಿಡಿಯೋ ವೈರಲ್
ಸಚಿನ್ ತೆಂಡೂಲ್ಕರ್

Updated on: Feb 25, 2024 | 8:55 PM

ಭಾರತದ ಪ್ರತಿಯೊಬ್ಬ ಯುವ ಕ್ರಿಕೆಟಿಗ ಮತ್ತು ಪ್ರತಿಯೊಬ್ಬ ಅಭಿಮಾನಿಯೂ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಅವರನ್ನು ಭೇಟಿಯಾಗಬೇಕೆಂದು ಕನಸು ಕಾಣುತ್ತಾರೆ. ಆದರೆ ಕೆಲವರು ಮಾತ್ರ ಈ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಅದರಲ್ಲಿಯೂ, ಸ್ವತಃ ಸಚಿನ್ ಅವರೇ ಅಭಿಮಾನಿಯನ್ನು ಭೇಟಿಯಾಗಲು ಬಯಸುವುದು ತೀರ ಅಪರೂಪದ ಕ್ಷಣವಾಗಿದೆ. ಇದೀಗ ಅಂತಹ ಅಪರೂಪದ ಕ್ಷಣಕ್ಕೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಕ್ರಿಕೆಟಿಗ ಅಮೀರ್ ಹುಸೇನ್ (Aamir Hussain) ಪಾತ್ರರಾಗಿದ್ದಾರೆ.

ವಾಸ್ತವವಾಗಿ ಜಮ್ಮು ಮತ್ತು ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿರುವ ಅಂಗವಿಕಲ ಕ್ರಿಕೆಟಿಗ ಅಮೀರ್ ಹುಸೇನ್ ಅವರ ವೀಡಿಯೊವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಅವರು ಸಚಿನ್ ಹೆಸರಿರುವ ಹಾಗೂ 10 ನೇ ನಂಬರ್ ಇರುವ ಟೀಂ ಇಂಡಿಯಾದ ಜೆರ್ಸಿಯನ್ನು ಧರಿಸಿ ಬ್ಯಾಟ್ ಅನ್ನು ಕುತ್ತಿಗೆಯಲ್ಲಿ ಹಿಡಿದು ಬ್ಯಾಟಿಂಗ್ ಮಾಡುತ್ತಿರುವುದು ದಾಖಲಾಗಿತ್ತು. ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ಸಾಕಷ್ಟು ವೈರಲ್ ಆಗಿತ್ತು. ಅಂಗವಿಕಲ ಕ್ರಿಕೆಟಿಗನ ಕ್ರಿಕೆಟ್ ಮೇಲಿನ ಉತ್ಸಾಹವನ್ನು ಎಲ್ಲೆಡೆ ಪ್ರಶಂಸಿಸಲಾಗಿತ್ತು.

ಅಯೋಧ್ಯೆ ರಾಮಲಲ್ಲಾ ಮಹಾಮಸ್ತಕಾಭಿಷೇಕ: ಸಚಿನ್ ತೆಂಡೂಲ್ಕರ್, ಕೊಹ್ಲಿ, ಅಮಿತಾಭ್ ಸೇರಿ 7000 ಸಾವಿರ ಗಣ್ಯರಿಗೆ ಆಹ್ವಾನ

ಸಚಿನ್-ಅಮೀರ್ ಭೇಟಿ

ಈ ವೈರಲ್ ವೀಡಿಯೋವನ್ನು ನೋಡಿದ್ದ ಸಚಿನ್ ತೆಂಡೂಲ್ಕರ್ ಕೂಡ ಅಮೀರ್ ಅವರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದ ಪ್ರವಾಸದಲ್ಲಿರುವ ಸಚಿನ್, ಅಮೀರ್ ಮತ್ತು ಅವರ ಕುಟುಂಬವನ್ನು ಅವರು ತಂಗಿದ್ದ ಹೋಟೆಲ್​ನಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ, ಅಮೀರ್ ಅವರು ಸಚಿನ್ ಅವರ ಎಷ್ಟು ದೊಡ್ಡ ಅಭಿಮಾನಿ ಮತ್ತು ಎರಡು ಕೈಗಳಿಲ್ಲದೆ ಅವರು ಹೇಗೆ ಕ್ರಿಕೆಟ್ ಆಡುತ್ತಾರೆ ಎಂಬುದನ್ನು ವಿವರಿಸಿದ್ದಾರೆ.

ಭಾವುಕರಾದ ಅಮೀರ್

ಈ ವೇಳೆ ಅಮೀರ್ ಅವರ ಸಾಧನೆಯ ಬಗ್ಗೆ ಮಾತನಾಡಿದ ಸಚಿನ್ ತೆಂಡೂಲ್ಕರ್, ಅಮೀರ್ 8 ನೇ ವಯಸ್ಸಿನಲ್ಲಿ ಅಪಘಾತದಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ಆದರೂ ಆ ಆಘಾತದಿಂದ ಚೇತರಿಸಿಕೊಂಡ ಅಮೀರ್ ತಮ್ಮ ಕನಸನ್ನು ನನಸಾಗಿಸಿ ಇಷ್ಟೆಲ್ಲ ಸಾಧಿಸಿದ ರೀತಿ ಇತರರಿಗೂ ಸ್ಫೂರ್ತಿಯಾಗಿದೆ ಎಂದರು. ಇದನ್ನು ಕೇಳಿದ ಅಮೀರ್‌ ಭಾವುಕರಾದರು.

ವಿಶೇಷ ಉಡುಗೊರೆ ನೀಡಿದ ಸಚಿನ್‌

ಇಷ್ಟೇ ಅಲ್ಲದೆ, ಸಚಿನ್‌ಗೆ ಆಮಿರ್ ಅವರು ತಮ್ಮ ಕಾಲಿನಿಂದ ಬ್ಯಾಟ್ ಅನ್ನು ಎತ್ತಿಕೊಂಡು ಕುತ್ತಿಗೆಗೆ ಹೇಗೆ ಹೊಂದಿಸುತ್ತಾರೆ ಮತ್ತು ನಂತರ ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ವಿವರಿಸಿದರು. ಸಚಿನ್ ಕೂಡ ಅವರೊಂದಿಗೆ ನಿಂತು ಫಾರ್ವರ್ಡ್ ಡಿಫೆನ್ಸ್ ಅಭ್ಯಾಸ ಮಾಡಿದರು. ಆ ಬಳಿಕ ಮಾಸ್ಟರ್ ಬ್ಲಾಸ್ಟರ್ ತನ್ನ ಹಸ್ತಾಕ್ಷರದ ಬ್ಯಾಟ್ ಅನ್ನು ಅಮೀರ್‌ಗೆ ಉಡುಗೊರೆಯಾಗಿ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ