
ಪಾಕಿಸ್ತಾನದ ಏಕದಿನ ಕ್ರಿಕೆಟ್ ತಂಡದ ನಾಯಕ ಶಾಹೀನ್ ಶಾ ಅಫ್ರಿದಿ, ದಿ ಹಂಡ್ರೆಡ್ (The Hundred) 2026 ಟೂರ್ನಿಯ ಆಟಗಾರರ ಹರಾಜಿನಿಂದ ಹಿಂದೆ ಸರಿದಿದ್ದಾರೆ. ಲಂಡನ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲು ಕೆಲವೇ ಗಂಟೆಗಳ ಮೊದಲು ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ.
ಪಾಕಿಸ್ತಾನ ತಂಡದ ಮುಂಬರುವ ಅಂತಾರಾಷ್ಟ್ರೀಯ ಪಂದ್ಯಗಳಿಗೆ (ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ) ಆದ್ಯತೆ ನೀಡಲು ಅಥವಾ ಗ್ಲೋಬಲ್ ಟಿ20 ಲೀಗ್‌ನಲ್ಲಿ ಭಾಗವಹಿಸಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಶಾಹೀನ್ ಅಫ್ರಿದಿ ಅವರ ಬದಲಿಗೆ ನ್ಯೂಝಿಲೆಂಡ್‌ನ ವೇಗದ ಬೌಲರ್ ಮ್ಯಾಟ್ ಹೆನ್ರಿ ಅವರನ್ನು ‘ವೆಲ್ಷ್ ಫೈರ್’ ತಂಡವು ಆಯ್ಕೆ ಮಾಡಿಕೊಂಡಿದೆ. ಇತ್ತ ಹರಾಜಿನಿಂದ ಹಿಂದೆ ಸರಿದರೂ ಶಾಹೀನ್ಗೆ ಇಮೇಜ್ ರೈಟ್ಸ್ ರೂಪದಲ್ಲಿ 17 ಲಕ್ಷ ರೂ. (PKR) ಸಿಗಲಿದೆ.
ಇಮೇಜ್ ರೈಟ್ಸ್ ಎಂದರೆ ಒಬ್ಬ ಆಟಗಾರನ ಹೆಸರು, ಫೋಟೋ, ಸಹಿ ಅಥವಾ ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಹಕ್ಕು.
ಲೀಗ್ ಅಥವಾ ತಂಡವು ಪಂದ್ಯದ ಪ್ರಚಾರಕ್ಕಾಗಿ, ಜಾಹೀರಾತುಗಳಲ್ಲಿ ಅಥವಾ ಟಿ-ಶರ್ಟ್‌ನಂತಹ ವಸ್ತುಗಳ ಮೇಲೆ ಆಟಗಾರನ ಚಿತ್ರವನ್ನು ಬಳಸುತ್ತದೆ. ಹೀಗೆ ಬಳಸಿದ್ದಕ್ಕಾಗಿ ಆಟಗಾರನಿಗೆ ಪ್ರತ್ಯೇಕವಾಗಿ ಹಣವನ್ನು ನೀಡಲಾಗುತ್ತದೆ.
ಆಟಗಾರನು ಪಂದ್ಯವಾಡಲು ಪಡೆಯುವ ಸಂಭಾವನೆ ಬೇರೆ, ಮತ್ತು ಅವರ ಫೋಟೋ ಅಥವಾ ಹೆಸರನ್ನು ಪ್ರಚಾರಕ್ಕೆ ಬಳಸಿದ್ದಕ್ಕಾಗಿ ನೀಡುವ ಇಮೇಜ್ ರೈಟ್ಸ್ ಹಣವೇ ಬೇರೆ.
ಶಾಹೀನ್ ಶಾ ಅಫ್ರಿದಿ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದರೂ, ಅವರ ಚಿತ್ರವನ್ನು ಈಗಾಗಲೇ ದಿ ಹಂಡ್ರೆಡ್ ಲೀಗ್‌ನ ಪ್ರಚಾರಕ್ಕಾಗಿ ಅಥವಾ ಮಾರ್ಕೆಟಿಂಗ್‌ಗಾಗಿ ಬಳಸಲಾಗಿದೆ.
ಈ ಕಾರಣಕ್ಕಾಗಿ ಅವರಿಗೆ ಸುಮಾರು £5,000 ಇಮೇಜ್ ರೈಟ್ಸ್ ರೂಪದಲ್ಲಿ ಸಿಗಲಿದೆ ಎಂದು ವರದಿಯಾಗಿದೆ. ಅಂದರೆ ಪಾಕಿಸ್ತಾನ್ ರೂಪಾಯಿ 17 ಲಕ್ಷ ಪಡೆಯಲಿದ್ದಾರೆ.
ದಿ ಹಂಡ್ರೆಡ್ ಲೀಗ್ ಎಂಬುದು ಟಿ20 ಮಾದರಿಯಲ್ಲೇ ಆಯೋಜಿಸಲಾಗುವ ಚುಟುಕು ಟೂರ್ನಿ. ಆದರೆ ಇಲ್ಲಿ 20 ಓವರ್ಗಳಿರುವುದಿಲ್ಲ ಎಂಬುದಷ್ಟೇ ವ್ಯತ್ಯಾಸ. ಬದಲಾಗಿ 100 ಎಸೆತಗಳ ಪಂದ್ಯವಾಗಿರಲಿದೆ. ಹೀಗಾಗಿಯೇ ಈ ಟೂರ್ನಿಗೆ ದಿ ಹಂಡ್ರೆಡ್ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ICC T20I Rankings: ಐಸಿಸಿ ಟಿ20 ಬ್ಯಾಟರ್ಗಳ ರ‍್ಯಾಂಕಿಂಗ್ ಪ್ರಕಟ
ದಿ ಹಂಡ್ರೆಡ್ ಲೀಗ್‌ನ ತಂಡಗಳು:
Published On - 2:23 pm, Thu, 12 March 26