ಅತಿರೇಕ, ಆವೇಶ… ಟೀಮ್ ಇಂಡಿಯಾಗೆ ಅಖ್ತರ್ ಭೇಷ್, ಪಾಕ್ ಪಡೆಗೆ ಚಾಟಿಯೇಟು!

ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಕದನವೆಂದರೆ ಅಲ್ಲಿ ರೋಚಕತೆಗೂ ಬರವಿಲ್ಲ, ವಿವಾದಗಳಿಗೂ ಕೊನೆಯಿಲ್ಲ! 19 ವರ್ಷದೊಳಗಿನವರ ಏಷ್ಯಾ ಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸಾಧಿಸಿದ ಐತಿಹಾಸಿಕ ಗೆಲುವಿನ ಸಂಭ್ರಮ ಈಗ ಕ್ರೀಡಾಸ್ಫೂರ್ತಿಯ ಚರ್ಚೆಗೆ ತಿರುಗಿದೆ. ಗೆದ್ದ ಖುಷಿಯಲ್ಲಿ ಭಾರತೀಯ ಯುವ ಆಟಗಾರರು ತೋರಿದ ಅತಿರೇಕದ ಆವೇಶಕ್ಕೆ ಪಾಕ್ ದಿಗ್ಗಜ ಶೋಯೆಬ್ ಅಖ್ತರ್ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ವೇಳೆ 'ಯಂಗ್ ಇಂಡಿಯಾ'ದ ಅದ್ಭುತ ಆಟಕ್ಕೆ ಭೇಷ್ ಎಂದಿದ್ದಾರೆ. 

ಅತಿರೇಕ, ಆವೇಶ... ಟೀಮ್ ಇಂಡಿಯಾಗೆ ಅಖ್ತರ್ ಭೇಷ್, ಪಾಕ್ ಪಡೆಗೆ ಚಾಟಿಯೇಟು!
Shoaib Akhtar
Image Credit source: x.com

Updated on: Nov 17, 2026 | 12:39 PM

2026ರ ಅಂಡರ್​-19 ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿದ ಬಳಿಕ, ಭಾರತೀಯ ಯುವ ಆಟಗಾರರು ನಡೆಸಿದ ಆಕ್ರಮಣಕಾರಿ ಸಂಭ್ರಮಾಚರಣೆಯ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವೆಂಬರ್ 14ರಂದು ಓಮನ್‌ನ ಅಲ್ ಅಮೇರತ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಭಾರತವು ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ 1 ವಿಕೆಟ್‌ನ ರೋಚಕ ಗೆಲುವು ದಾಖಲಿಸಿ, ದಾಖಲೆಯ ಒಂಬತ್ತನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಗೆಲುವಿನ ಬೆನ್ನಲ್ಲೇ ಮೈದಾನಕ್ಕೆ ನುಗ್ಗಿದ ಭಾರತೀಯ ಆಟಗಾರರು ಪಾಕಿಸ್ತಾನ್ ಆಟಗಾರರ ಎದುರು ಆಕ್ರಮಣಕಾರಿಯಾಗಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದ್ದರು.

Loading...

ಈ ಕುರಿತು ಪ್ರತಿಕ್ರಿಯಿಸಿರುವ ಶೋಯೆಬ್ ಅಖ್ತರ್, “ಯುವ ಆಟಗಾರರ ಹೋರಾಟದ ಮನೋಭಾವ ಮೆಚ್ಚುವಂತಹದ್ದು. ಆದರೆ ಕ್ರಿಕೆಟ್ ಆಟವನ್ನು ಕೆಲವು ಮೌಲ್ಯಗಳು ಮತ್ತು ಪರಸ್ಪರ ಗೌರವದೊಂದಿಗೆ ಆಡಬೇಕು,” ಎಂದು ಕಿವಿಮಾತು ಹೇಳಿದ್ದಾರೆ.

“ಮೈದಾನದಲ್ಲಿ ಆಟಗಾರರು ತಮ್ಮ ದೇಶಕ್ಕಾಗಿ ಗೆಲ್ಲಬೇಕೆಂಬ ಛಲ ಮತ್ತು ಆಕ್ರಮಣಕಾರಿ ಮನೋಭಾವ ಹೊಂದಿರುವುದು ಸಹಜ ಮತ್ತು ಅದು ಇಂದಿನ ಕ್ರಿಕೆಟ್‌ಗೆ ಅಗತ್ಯವೂ ಹೌದು. ಆದರೆ, ಆ ಆಕ್ರಮಣಶೀಲತೆ ಎದುರಾಳಿ ಆಟಗಾರರನ್ನು ಅವಮಾನಿಸುವ ಅಥವಾ ಕೆಣಕುವ ಮಟ್ಟಕ್ಕೆ ಹೋಗಬಾರದು” ಎಂಬುದು ಶೋಯೆಬ್ ಅಖ್ತರ್ ಅವರ ಅಭಿಪ್ರಾಯವಾಗಿದೆ.

ತಮ್ಮ ಕಾಲದ ಕ್ರಿಕೆಟ್ ದಿನಗಳನ್ನು ನೆನಪಿಸಿಕೊಂಡ ಅಖ್ತರ್, ಭಾರತ ಮತ್ತು ಪಾಕಿಸ್ತಾನ್ ಪಂದ್ಯಗಳೆಂದರೆ ಅಂದೂ ಸಹ ಅಷ್ಟೇ ತೀವ್ರ ಒತ್ತಡ ಮತ್ತು ಪೈಪೋಟಿ ಇರುತ್ತಿತ್ತು. ಆದರೆ ಮೈದಾನದಲ್ಲಿ ತಾವು ಬೌಲಿಂಗ್ ಮಾಡುವಾಗ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅಥವಾ ಸೌರವ್ ಗಂಗೂಲಿ ಅವರನ್ನು ಔಟ್ ಮಾಡಲು ಎಷ್ಟು ಆಕ್ರಮಣಕಾರಿಯಾಗಿರುತ್ತಿದ್ದೆನೋ, ಪಂದ್ಯ ಮುಗಿದ ತಕ್ಷಣ ಅಷ್ಟೇ ಆತ್ಮೀಯತೆಯಿಂದ ಅವರೊಂದಿಗೆ ಬೆರೆಯುತ್ತಿದ್ದೆ ಎಂದು ಅವರು ಸ್ಮರಿಸಿದ್ದಾರೆ.

ಪಾಕ್ ತಂಡಕ್ಕೆ ಚಾಟಿ:

ಸಂಭ್ರಮಾಚರಣೆಯ ಶೈಲಿಯನ್ನು ಟೀಕಿಸಿದರೂ, ಭಾರತೀಯ ಯುವ ತಂಡದ ಒತ್ತಡ ನಿಭಾಯಿಸುವ ಸಾಮರ್ಥ್ಯವನ್ನು ಅಖ್ತರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಭಾರತ ಅದ್ಭುತ ಕ್ರಿಕೆಟ್ ಆಡಿತು. 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಅವರು ತೋರಿದ ಆತ್ಮವಿಶ್ವಾಸ ಮೆಚ್ಚುವಂತಹದ್ದು,” ಎಂದಿದ್ದಾರೆ.

ಇದೇ ವೇಳೆ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ಇಡೀ ಟೂರ್ನಿಯಲ್ಲಿ ಪಾಕಿಸ್ತಾನ ಬಲಿಷ್ಠ ತಂಡವಾಗಿ ಕಂಡರೂ, ಭಾರತದ ವಿರುದ್ಧದ ನಿರ್ಣಾಯಕ ಘಟ್ಟಗಳಲ್ಲಿ ಒತ್ತಡ ನಿಭಾಯಿಸುವಲ್ಲಿ ಮತ್ತೊಮ್ಮೆ ಎಡವಿದೆ ಎಂದು ವಿಶ್ಲೇಷಿಸಿದ್ದಾರೆ.

ವಿವಾದಕ್ಕೆ ಆಟಗಾರರ ಸ್ಪಷ್ಟನೆ:

ಭಾರತ ತಂಡದ ಗೆಲುವಿನ ರೂವಾರಿ ಮೋಹಿತ್ ಉಳ್ವಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, “ಭಾರತ-ಪಾಕಿಸ್ತಾನ್ ಫೈನಲ್ ಗೆದ್ದ ಭಾವನಾತ್ಮಕ ಕ್ಷಣದಲ್ಲಿ ಸಹಜವಾಗಿ ಬಂದ ಸಂಭ್ರಮವದು, ಯಾರನ್ನೂ ಕೆಣಕುವ ಉದ್ದೇಶವಿರಲಿಲ್ಲ,” ಎಂದಿದ್ದಾರೆ. ಆದರೆ ಪಂದ್ಯದ ವೇಳೆ ಪಾಕಿಸ್ತಾನ್ ಆಟಗಾರರು ಬಳಸಿದ ಅವಾಚ್ಯ ಶಬ್ದಗಳೇ ಈ ತೀವ್ರ ಪ್ರತಿಕ್ರಿಯೆಗೆ ಕಾರಣವಾಯಿತು ಎಂದು ಭಾರತ ತಂಡದ ಮತ್ತೊಬ್ಬ ಆಟಗಾರ ಯಶ್‌ವೀರ್ ಗೌಡ್ ಆರೋಪಿಸಿದ್ದಾರೆ.

ಇದನ್ನೂ ಓದಿ: IPL 2027: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ರಿಲೀಸ್ ಬಹುತೇಕ ಖಚಿತ!

ಒಟ್ಟಿನಲ್ಲಿ, ಭಾರತ ಮತ್ತು ಪಾಕಿಸ್ತಾನ್ ನಡುವಿನ ಕ್ರಿಕೆಟ್ ಪಂದ್ಯಗಳೆಂದರೆ ಅಲ್ಲಿ ರೋಚಕತೆ ಮತ್ತು ಭಾವನೆಗಳ ಮಹಾಪೂರವೇ ಹರಿಯುತ್ತದೆ. ಆದರೆ, ಗೆಲುವಿನ ಸಂಭ್ರಮದಲ್ಲಿ ಕ್ರೀಡಾಸ್ಫೂರ್ತಿ ಮತ್ತು ಪರಸ್ಪರ ಗೌರವದ ಗೆರೆ ದಾಟದಂತೆ ಎಚ್ಚರ ವಹಿಸುವುದು ಯುವ ಆಟಗಾರರ ಭವಿಷ್ಯದ ದೃಷ್ಟಿಯಿಂದ ಅತ್ಯಗತ್ಯ. ಶೋಯೆಬ್ ಅಖ್ತರ್ ಅವರ ಈ ಕಿವಿಮಾತನ್ನು ಯುವ ಪಡೆ ಹೇಗೆ ಸ್ವೀಕರಿಸುತ್ತದೆ ಮತ್ತು ಮುಂದಿನ ಪಂದ್ಯಗಳಲ್ಲಿ ಮೈದಾನದಲ್ಲಿ ಹೇಗೆ ವರ್ತಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us