ಶ್ರೇಯಾಂಕ ಪಾಟೀಲ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಆರ್​ಸಿಬಿ ಆಟಗಾರ್ತಿ

Women's T20 World Cup 2026: ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಘಾತ ಎದುರಾಗಿದೆ. ಸ್ಟಾರ್ ಆಫ್-ಸ್ಪಿನ್ನರ್ ಶ್ರೇಯಾಂಕ ಪಾಟೀಲ್ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಿಂದ ಗಾಯದಿಂದ ಹೊರಗುಳಿದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಬಲಗಾಲಿಗೆ ಗಾಯವಾಗಿತ್ತು. ಅವರ ಬದಲಿಗೆ, ಐಸಿಸಿ ಅನುಮೋದನೆಯೊಂದಿಗೆ, ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ತಂಡ ಸೇರಿದ್ದಾರೆ. ಪ್ರೇಮಾ ಡಬ್ಲ್ಯೂಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಶ್ರೇಯಾಂಕ ಪಾಟೀಲ್ ಬದಲಿಗೆ ಟೀಂ ಇಂಡಿಯಾ ಸೇರಿಕೊಂಡ ಆರ್​ಸಿಬಿ ಆಟಗಾರ್ತಿ
Rcb Women
Image Credit source: RCB X

Updated on: Jun 19, 2026 | 2:50 PM

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಶ್ರೇಯಾಂಕ ಪಾಟೀಲ್ (Shreyanka Patil) ಅವರನ್ನು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 (Women’s T20 World Cup 2026) ರಿಂದ ಹೊರಗಿಡಲಾಗಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ಶ್ರೇಯಾಂಕ ಪಾಟೀಲ್ ಗಾಯಕ್ಕೆ ಒಳಗಾಗಿದ್ದರು. ಗಾಯ ಗಂಭೀರವಾಗಿರುವ ಕಾರಣ ಶ್ರೇಯಾಂಕರನ್ನು ಪಂದ್ಯಾವಳಿಯಿಂದ ಹೊರಗಿಟ್ಟಿರುವ ಬಿಸಿಸಿಐ, ಅವರ ಬದಲಿ ಆಟಗಾರ್ತಿಯನ್ನು ಸಹ ತಂಡಕ್ಕೆ ಆಯ್ಕೆ ಮಾಡಿದೆ. ಅದರಂತೆ ಟೀಂ ಇಂಡಿಯಾ ಪರ ಇದುವರೆಗೆ ಒಂದೇ ಒಂದು ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ (Prema Rawat) ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪ್ರೇಮಾ ರಾವತ್ ಡಬ್ಲ್ಯೂಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಿದ್ದು, ಇದೀಗ ಆರ್​ಸಿಬಿ ಪರ ಆಡುವ ಶ್ರೇಯಾಂಕ ಪಾಟೀಲ್ ಬದಲಿಗೆ ತಂಡವನ್ನು ಕೂಡಿಕೊಂಡಿದ್ದಾರೆ.

ಶ್ರೇಯಾಂಕ ಬದಲಿಯಾಗಿ ಬಂದ ಪ್ರೇಮಾ

ಶ್ರೇಯಾಂಕ ಪಾಟೀಲ್ ಬದಲಿಗೆ ಬಿಸಿಸಿಐ, ಯುವ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಅವರನ್ನು ಭಾರತ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದೆ. ಮೇಲೆ ಹೇಳಿದಂತೆ ಪ್ರೇಮಾ ರಾವತ್ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಇದೇ ಮೊದಲು. ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಮಹಿಳಾ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಪ್ರೇಮಾ ರಾವತ್ ಅವರನ್ನು ಶ್ರೇಯಾಂಕ ಪಾಟೀಲ್ ಬದಲಿಗೆ ತಂಡಕ್ಕೆ ಸೇರಿಸಿಕೊಳ್ಳಲು ಐಸಿಸಿಯ ತಾಂತ್ರಿಕ ಸಮಿತಿ ಕೂಡ ಒಪ್ಪಿಗೆ ಸೂಚಿಸಿದೆ. ಹೀಗಾಗಿ ಪ್ರೇಮಾ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅನುಕೂಲಕರವೆಂಬಂತೆ ಪ್ರೇಮಾ ರಾವತ್ ಈಗಾಗಲೇ ಇಂಗ್ಲೆಂಡ್‌ನಲ್ಲಿದ್ದಾರೆ. ಪರಿಣಾಮವಾಗಿ, ಐಸಿಸಿ ಅನುಮೋದನೆ ಪಡೆದ ತಕ್ಷಣ ಅವರು ವಿಶ್ವಕಪ್ ತಂಡವನ್ನು ಸೇರಲಿದ್ದಾರೆ.

ಶ್ರೇಯಾಂಕ ಗಾಯಗೊಂಡಿದ್ದು ಹೇಗೆ?

ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ ಬಲಗಾಲಿನ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ನೆದರ್ಲ್ಯಾಂಡ್ಸ್ ಇನ್ನಿಂಗ್ಸ್‌ನ ಆರನೇ ಓವರ್‌ನ ಮೊದಲ ಎಸೆತದಲ್ಲಿ ಈ ಅವಘಡ ಸಂಭವಿಸಿತ್ತು. ಚೆಂಡನ್ನು ಹಿಡಿಯುವ ಯತ್ನದಲ್ಲಿ ಶ್ರೇಯಾಂಕ ಅವರ ಬಲಗಾಲು ಉಳುಕಿತ್ತು. ಹೀಗಾಗಿ ಅವರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಟೂರ್ನಿಯ ಆರಂಭದಲ್ಲೇ ಶ್ರೇಯಾಂಕ ತಂಡದಿಂದ ಹೊರಬಿದ್ದಿರುವುದು ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ತಂಡದ ನಿರ್ವಹಣೆಗೆ ದೊಡ್ಡ ಹೊಡೆತ ಬಿದ್ದಿದೆ. ಏಕೆಂದರೆ ಶ್ರೇಯಾಂಕ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ ಕೂಡ ಮಾಡುತ್ತಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Fri, 19 June 26

Follow Us