ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಕ್ಯಾಪ್ ಹತ್ತೇ ಹತ್ತು ನಿಮಿಷಗಳಲ್ಲಿ ಬರೋಬ್ಬರಿ 2.63 ಕೋಟಿ ರೂ.ಗೆ ಹರಾಜಾಗಿದೆ. ಸಿಡ್ನಿಯಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ 1947-48ರ ಭಾರತ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡಾನ್ ಬ್ರಾಡ್ಮನ್ ಧರಿಸಿದ್ದ ಪ್ರಸಿದ್ಧ ‘ಬ್ಯಾಗಿ ಗ್ರೀನ್’ ಹರಾಜಿಗಿಡಲಾಗಿತ್ತು.
ಖ್ಯಾತ ಕ್ರಿಕೆಟಿಗನ ಈ ಅಪರೂಪದ ಕ್ಯಾಪ್ ಹರಾಜಿನಲ್ಲಿ 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ $479,700 (ರೂ. 2.63 ಕೋಟಿ) ಗೆ ಮಾರಾಟವಾಗಿದೆ. ಇದೇ ಕ್ಯಾಪ್ ಧರಿಸಿ ಬ್ರಾಡ್ಮನ್ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 178.75 ಸರಾಸರಿಯಲ್ಲಿ 715 ರನ್‌ಗಳಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ ಒಂದು ದ್ವಿಶತಕವೂ ಸೇರಿದೆ.
ಫಾಕ್ಸ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಈ ವಿಶಿಷ್ಟ ಕ್ಯಾಪ್ ಅನ್ನು ಸ್ವತಃ ಬ್ರಾಡ್ಮನ್ ಅವರು ಭಾರತೀಯ ಟೂರ್ ಮ್ಯಾನೇಜರ್ ಪಂಕಜ್ “ಪೀಟರ್” ಕುಮಾರ್ ಗುಪ್ತಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕ್ಯಾಪ್ ಅನ್ನು ಬೊನ್ಹಾಮ್ಸ್ ಹರಾಜಿನಲ್ಲಿಡಲಾಗಿತ್ತು.
ಇದೀಗ 2.63 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗನ ವಸ್ತು ಎನಿಸಿಕೊಂಡಿದೆ.
ಅಂದಹಾಗೆ ಡಾನ್ ಬ್ರಾಡ್ಮನ್ ಕ್ರಿಕೆಟ್ ಇತಿಹಾಸ ಕಂಡಂತಹ ಸರ್ವಶ್ರೇಷ್ಠ ಬ್ಯಾಟ್ಸ್ಮನ್.
ಆಸ್ಟ್ರೇಲಿಯಾ ಪರ 52 ಟೆಸ್ಟ್‌ಗಳನ್ನಾಡಿದ್ದ ಬ್ರಾಡ್ಮನ್, 2 ತ್ರಿಶತಕ, 12 ದ್ವಿಶತಕ, 29 ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ 6996 ರನ್‌ಗಳನ್ನು ಗಳಿಸಿದ್ದಾರೆ. ಅಂದರೆ ಅವರ ಬ್ಯಾಟಿಂಗ್ ಸರಾಸರಿ 99.94 ಇತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ಬ್ಯಾಟರ್ರೊಬ್ಬರ ಗರಿಷ್ಠ ರನ್ ಸರಾಸರಿ ಎಂಬುದು ವಿಶೇಷ.
ಇದನ್ನೂ ಓದಿ: ಕೇವಲ 3 ರನ್ಗೆ 5 ವಿಕೆಟ್: ಟಿ20 ಕ್ರಿಕೆಟ್ನಲ್ಲಿ ಸೂಫಿಯಾನ್ ವಿಶ್ವ ದಾಖಲೆ
ಕ್ರಿಕೆಟ್ ಅಂಗಳದಲ್ಲಿ “ದಿ ಡಾನ್” ಎಂದು ಕರೆಸಿಕೊಂಡಿದ್ದ ಬ್ರಾಡ್ಮನ್ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಆದರೆ 20 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್ನಲ್ಲಿ ನಿರ್ಮಿಸಿದ ದಾಖಲೆಗಳು ಇನ್ನೂ ಸಹ ಅವರನ್ನು ಅಜರಾಮರರನ್ನಾಗಿರಿಸಿದೆ.